ಮಧ್ಯಪ್ರದೇಶ ಮತಾಂತರ ನಿಷೇಧ ಕಾಯ್ದೆ: ಹೈಕೋರ್ಟ್ ಆದೇಶ ರದ್ದುಪಡಿಸಲು ಸುಪ್ರೀಂ ಕೋರ್ಟ್ ನಕಾರ

Update: 2023-01-03 15:27 GMT

ಹೊಸದಿಲ್ಲಿ, ಜ. 3: ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಮಾಹಿತಿ ನೀಡದೆ ಮದುವೆಯಾಗುವ ಅಂತರ್-ಧರ್ಮೀಯ ದಂಪತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದರಿಂದ ರಾಜ್ಯ ಸರಕಾರವನ್ನು ತಡೆಯುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಧ್ಯಪ್ರದೇಶ ಸರಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸಲು ಸುಪ್ರೀಂ ಕೋರ್ಟ್ ಮಂಗಳವಾರ ಒಪ್ಪಿದೆ.

ಮತಾಂತರಗೊಳ್ಳುವ ಮುನ್ನ ವ್ಯಕ್ತಿಯು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎನ್ನುವ ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ, 2021ರ ವಿಧಿಯು ಮೊದಲ ನೋಟಕ್ಕೇ ಅಸಾಂವಿಧಾನಿಕವಾಗಿದೆ ಎಂದು ತನ್ನ ನವೆಂಬರ್ 17ರ ತೀರ್ಪಿನಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಹೇಳಿತ್ತು.

ಕಾಯ್ದೆಯ 10ನೇ ವಿಧಿಯ ಪ್ರಕಾರ, ಮತಾಂತರಗೊಳ್ಳಬಯಸುವ ವ್ಯಕ್ತಿಗಳು 60 ದಿನ ಮುಂಚಿತವಾಗಿ, ತಾವು ಯಾವುದೇ ಒತ್ತಡ, ಬಲವಂತ, ಅನಪೇಕ್ಷಿತ ಪ್ರಭಾವ ಅಥವಾ ಆಮಿಷಕ್ಕೆ ಒಳಗಾಗಿ ಮತಾಂತರಗೊಳ್ಳುತ್ತಿಲ್ಲ ಎಂಬುದಾಗಿ ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಘೋಷಣೆ ಸಲ್ಲಿಸಬೇಕಾಗುತ್ತದೆ. ಹೀಗೆ ಘೋಷಣೆಯನ್ನು ಸಲ್ಲಿಸದ ವ್ಯಕ್ತಿಗಳಿಗೆ ಮೂರರಿಂದ ಐದು ವರ್ಷಗಳ ಜೈಲು ಶಿಕ್ಷೆಯ್ನನು ವಿಧಿಸಬಹುದಾಗಿದೆ ಹಾಗೂ ಕನಿಷ್ಠ 50,000 ರೂಪಾಯಿ ದಂಡ ವಿಧಿಸಬಹುದಾಗಿದೆ.

ಹೈಕೋರ್ಟ್ ಆದೇಶವನ್ನು ರದ್ದುಪಡಿಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮಂಗಳವಾರ ಸರ್ವೋಚ್ಛ ನ್ಯಾಯಾಲಯವನ್ನು ಪದೇ ಪದೇ ವಿನಂತಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ‘‘ಎಲ್ಲಾ ಧಾರ್ಮಿಕ ಮತಾಂತರಗಳು ಕಾನೂನುಬಾಹಿರವಾಗಲು ಸಾಧ್ಯವಿಲ್ಲ’’ ಎಂಬುದಾಗಿ ಅಭಿಪ್ರಾಯಪಟ್ಟಿತು.

ಕಾನೂನುಬಾಹಿರ ಮತಾಂತರಗಳಿಗೆ ಮದುವೆಯನ್ನು ಬಳಸಲಾಗುತ್ತದೆ ಹಾಗೂ ‘‘ನಾವು ಇದಕ್ಕೆ ಕುರುಡರಾಗಬಾರದು’’ ಎಂದು ಮೆಹ್ತಾ ಹೇಳಿದರು.

ಆದರೆ, ನ್ಯಾಯಮೂರ್ತಿಗಳಾದ ಎಮ್.ಆರ್. ಶಾ ಮತ್ತು ಸಿ.ಟಿ. ರವಿಕುಮಾರ್ ಅವರನ್ನೊಳಗೊಂಡ ನ್ಯಾಯ ಪೀಠವು ಹೈಕೋರ್ಟ್ ಆದೇಶವನ್ನು ರದ್ದುಪಡಿಸಲು ನಿರಾಕರಿಸಿತು ಹಾಗೂ ಈ ಪ್ರಕರಣದಲ್ಲಿ ಸಂಬಂಧಿತರಿಗೆ ನೋಟಿಸ್ಗಳನ್ನು ಜಾರಿಗೊಳಿಸಿತು. ಪ್ರಕರಣದ ಮುಂದಿನ ವಿಚಾರಣೆಯು ಫೆಬ್ರವರಿ 7ರಂದು ನಡೆಯಲಿದೆ.

Similar News