ಕಸ್ಟಡಿ ಸಾವು ಪ್ರಕರಣ: ಸಂಜೀವ್ ಭಟ್ ಮನವಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ

Update: 2023-01-03 15:43 GMT

ಹೊಸದಿಲ್ಲಿ, ಜ. 3: ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ತಾನು ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿ  ಹೆಚ್ಚುವರಿ ಸಾಕ್ಷ್ಯಗಳನ್ನು ಸಲ್ಲಿಸಲು ಅವಕಾಶ ನೀಡುವಂತೆ ಕೋರಿ ವಜಾಗೊಂಡ ಗುಜರಾತ್ ಶ್ರೇಣಿಯ ಐಪಿಎಸ್ ಅಧಿಕಾರಿ ಸಂಜೀವ ಭಟ್ ಸಲ್ಲಿಸಿದ ಅರ್ಜಿಯನ್ನು ಜನವರಿ 10ರಂದು ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

1990ರ ಕಸ್ಟಡಿ ಸಾವಿಗೆ ಸಂಬಂಧಿಸಿದ ಅಪರಾಧ ನಿರ್ಣಯವನ್ನು ಪ್ರಶ್ನಿಸಿ ಸಂಜೀವ್ ಭಟ್ ಅವರು ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಈ ವಿಚಾರಣೆಯಿಂದ ಜಸ್ಟಿಸ್ ಶಾ ಅವರು ಹೊರ ಹೋಗಲು ನೀವು ನಿಜವಾಗಿಯೂ ಬಯಸುತ್ತೀರಾ ?  ಎಂದು ಸಂಜೀವ್ ಭಟ್ ಅವರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ದೇವದತ್ ಕಾಮತ್ ಅವರಲ್ಲಿ ನ್ಯಾಯಮೂರ್ತಿ ಎಂ.ಆರ್. ಶಾ ಹಾಗೂ ಸಿ.ಟಿ. ರವಿಕುಮಾರ್ ಅವರನ್ನು  ಒಳಗೊಂಡ ಪೀಠ ಪ್ರಶ್ನಿಸಿತು.

ಇದಕ್ಕೆ ಕಾಮತ್ ಅವರು, ತಾನು ಮನವಿ ಮಾಡಿರುವುದು ಅವರು ಪಕ್ಷಪಾತಿಯಾಗಿದ್ದಾರೆ ಎಂದಲ್ಲ. ಬದಲಾಗಿ ಪಕ್ಷಪಾತಿಯಾಗುವ ಭೀತಿಯಿಂದ ಎಂದು ಹೇಳಿದರು. 

Similar News