ಮಥುರಾ: ನ್ಯಾಯಾಲಯದ ಸರ್ವೆ ಆದೇಶದ ವಿರುದ್ಧ ಆಕ್ಷೇಪಣೆ ಸಲ್ಲಿಸಿದ ಶಾಹಿ ಈದ್ಗಾ ಮಸೀದಿ
ಮಥುರಾ,ಜ.3: ಇಲ್ಲಿಯ ಶಾಹಿ ಈದ್ಗಾ ಮಸೀದಿಯ ಸರ್ವೆಗಾಗಿ ಮಥುರಾದ ಸಿವಿಲ್ ನ್ಯಾಯಾಲಯವು ಹೊರಡಿಸಿರುವ ಆದೇಶದ ವಿರುದ್ಧ ಮಸೀದಿ ಸಮಿತಿಯು ಸೋಮವಾರ ತನ್ನ ಆಕ್ಷೇಪಣೆಯನ್ನು ಸಲ್ಲಿಸಿದೆ.
ಡಿ.24ರಂದು ನ್ಯಾಯಾಲಯವು ಹಿಂದು ಸೇನಾ ಅಧ್ಯಕ್ಷ ವಿಷ್ಣು ಗುಪ್ತಾ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸಂದರ್ಭ ಸರ್ವೆ ಆದೇಶವನ್ನು ಹೊರಡಿಸಿತ್ತು ಮತ್ತು ಜ.20ರೊಳಗೆ ಸರ್ವೆ ವರದಿಯನ್ನು ಸಲ್ಲಿಸಲು ನಿರ್ದೇಶ ನೀಡಿತ್ತು. ಶ್ರೀಕೃಷ್ಣನ ಜನ್ಮಸ್ಥಳದ ಮೇಲೆ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಗುಪ್ತಾ ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.
ಗುಪ್ತಾರ ಅರ್ಜಿಯ ಪ್ರತಿಯನ್ನು ಸಮಿತಿಗೆ ಒದಗಿಸಲಾಗಿಲ್ಲ, ಆದೇಶವನ್ನು ಹೊರಡಿಸುವ ಅಥವಾ ಆ ಬಗ್ಗೆ ಅಧಿಸೂಚಿಸುವ ಮುನ್ನ ಅದರ ಅಹವಾಲನ್ನೂ ಆಲಿಸಿಲ್ಲ. ಈ ಹಿನ್ನೆಲೆಯಲ್ಲಿ ಆಕ್ಷೇಪಣೆಯನ್ನು ಸಲ್ಲಿಸಲಾಗಿದೆ ಎಂದು ವಕೀಲ ಹಾಗೂ ಶಾಹಿ ಈದ್ಗಾ ಆಡಳಿತ ಸಮಿತಿಯ ಕಾರ್ಯದರ್ಶಿ ತನ್ವೀರ್ ಅಹ್ಮದ್ ತಿಳಿಸಿದರು.
ನ್ಯಾಯಾಲಯದ ಆದೇಶವು ಧಾರ್ಮಿಕ ಸ್ಥಳದ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ವರದಿಯನ್ನು ಕೇಳಿದೆ,ಸರ್ವೆಗಾಗಿ ಅಲ್ಲ ಎಂದು ಸಮಿತಿಯು ಸ್ಪಷ್ಟಪಡಿಸಿದೆ.
ತನ್ನ ಅರ್ಜಿಯಲ್ಲಿ ಮಸೀದಿ ಸುತ್ತಲಿನ 13.37 ಎಕರೆ ಭೂಮಿಯ ಮೇಲೆ ಹಕ್ಕು ಪ್ರತಿಪಾದಿಸಿರುವ ಗುಪ್ತಾ,ಅದರಲ್ಲಿರುವ ಕಟ್ಟಡವನ್ನು ನೆಲಸಮಗೊಳಿಸುವಂತೆ ಕೋರಿದ್ದಾರೆ. ಶಾಹಿ ಈದ್ಗಾ ಮಸೀದಿಯ ನೆಲಸಮವನ್ನು ಕೋರಿ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಗುಪ್ತಾರ ಅರ್ಜಿಯೂ ಸೇರಿದೆ. ಮಸೀದಿಯಲ್ಲಿ ಮುಸ್ಲಿಮರು ನಮಾಝ್ ಮಾಡುವುದನ್ನು ನಿಷೇಧಿಸುವಂತೆಯೂ ಕೆಲವರು ಕೋರಿದ್ದಾರೆ.