ಗೊಂದಲದಲ್ಲಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು

ಅತಿಥಿ ಉಪನ್ಯಾಸಕ ಹುದ್ದೆಗೆ ಹೊಸ ಅರ್ಜಿ ಆಹ್ವಾನಿಸುವ ಸಾಧ್ಯತೆ

Update: 2023-01-03 18:23 GMT

ಬೆಂಗಳೂರು, ಜ.3: ಕಾಲೇಜು ಶಿಕ್ಷಣ ಇಲಾಖೆಯು ಡಿ.21ರಂದು ಸುತ್ತೋಲೆಯನ್ನು ಹೊರಡಿಸಿದ್ದು, ಸರಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸೇವಾವಧಿಯನ್ನು ಡಿ.31ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿತ್ತು. ಈ ಗೊಂದಲಕಾರಿ ಆದೇಶದಿಂದ 10 ಸಾವಿರ ಅತಿಥಿ ಉಪ್ಯಾಸಕರು ಅತಂತ್ರ ಸ್ಥಿತಿಯಲ್ಲಿದ್ದಾರೆ.

ಸುತ್ತೋಲೆಯಲ್ಲಿ ತಿಳಿಸಿರುವಂತೆ ಆನ್‌ಲೈನ್ ಕೌನ್ಸಿಲಿಂಗ್ ಮೂಲಕ ಆಯ್ಕೆ ಆದ ಅತಿಥಿ ಉಪನ್ಯಾಸಕರು ಡಿಸೆಂಬರ್ ಅಂತ್ಯದವರೆಗೆ ಸೇವೆಯನ್ನು ಸಲ್ಲಿಸಲು ಸರಕಾರ ಅನುಮತಿಯನ್ನು ನೀಡಿದೆ. ಹಾಗಾಗಿ ಕಾಲೇಜು ಶಿಕ್ಷಣ ಇಲಾಖೆ ಅವರ ಸೇವಾವಧಿಯನ್ನು ವಿಸ್ತರಿಸಿದೆ.

ಆದರೆ ಡಿಸೆಂಬರ್ ಮುಗಿದು ಜನವರಿ ತಿಂಗಳು ಬಂದಿದ್ದು, ಸೇವಾವಧಿಯ ಕುರಿತು ಶಿಕ್ಷಣ ಇಲಾಖೆಯು ಯಾವುದೇ ಆದೇಶವನ್ನು ಪ್ರಕಟಿಸಿಲ್ಲ. ಇದು ಅತಿಥಿ ಉಪನ್ಯಾಸಕರನ್ನು ಸಂಕಷ್ಟಕ್ಕೆ ದೂಡಿದೆ. ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಸಕ್ತ ವರ್ಷದ ಅತಿಥಿ ಉಪನ್ಯಾಸಕ ಹುದ್ದೆಗಳಿಗೆ ಇಲಾಖೆಯು ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸಿ, ಆಯ್ಕೆ ಮಾಡುತ್ತದೆಯೋ ಅಥವಾ ಸೇವೆಯಲ್ಲಿರುವ ಅತಿಥಿ ಉಪನ್ಯಾಸಕರನ್ನೇ ಮುಂದುವರೆಸುತ್ತದೆಯೋ ಎಂದು ಅತಿಥಿ ಉಪನ್ಯಾಸಕರಲ್ಲಿ ಗೊಂದಲ ಸೃಷ್ಟಿಯಾಗಿದೆ.

ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಂಶುಪಾಲರಿಗೂ ಅತಿಥಿ ಉಪನ್ಯಾಸಕರ ಸೇವಾವಧಿ ವಿಸ್ತರಣೆ ಕುರಿತು ಗೊಂದಲ ಸೃಷ್ಟಿಯಾಗಿದೆ. ಸರಕಾರದ ಆದೇಶ ಇಲ್ಲದೆ, ಅತಿಥಿ ಉಪನ್ಯಾಸಕರನ್ನು ಮುಂದುವರಿಸುವುದು ಹೇಗೆ ಎಂದು ಗೊಂದಲದಲ್ಲಿದ್ದಾರೆ. ಹಾಗಾಗಿ ಕೆಲ ಕಾಲೇಜುಗಳ ಪ್ರಾಂಶುಪಾಲರು ಸೇವೆಯನ್ನು ಮುಂದುವರಿಸುವುದು ಬಿಡುವುದು ಅತಿಥಿ ಉಪನ್ಯಾಸಕರಿಗೆ ಬಿಟ್ಟ ವಿಷಯ ಎಂದು ಹೇಳುತ್ತಿದ್ದಾರೆ ಎಂದು ಅತಿಥಿ ಉಪನ್ಯಾಸಕರೊಬ್ಬರು ತಿಳಿಸಿದ್ದಾರೆ.

ಅತಿಥಿ ಉಪನ್ಯಾಸಕರ ಸೇವಾವಧಿಯನ್ನು ವಿಸ್ತರಿಸುವುದಾಗಿ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡಲಾಗಿದೆಯೇ ಹೊರತು, ಅಧಿಕೃತವಾಗಿ ಇಲಾಖೆಯು ಸುತ್ತೋಲೆಯನ್ನು ಪ್ರಕಟಿಸಿಲ್ಲ. ಇಲಾಖೆಯ ಮಟ್ಟದಲ್ಲಿ ಸಭೆ ನಡೆದಿದ್ದು, ಪ್ರಸಕ್ತ ವರ್ಷದ ಅತಿಥಿ ಉಪನ್ಯಾಸಕ ಹುದ್ದೆಗೆ ಹೊಸದಾಗಿ ಅರ್ಜಿಯನ್ನು ಕರೆಯಲಾಗುತ್ತದೆ. ಬಂದ ಅರ್ಜಿಗಳನ್ನು ಸೇವಾ ಅನುಭವದ ಆಧಾರದ ಮೇಲೆ ವಿಂಗಡಿಸಿ, ಕೌನ್ಸಿಲಿಂಗ್ ನಡೆಸಲು ನಿರ್ಧರಿಸಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಅತಿಥಿ ಉಪನ್ಯಾಸಕರೊಬ್ಬರು ಹೇಳಿದ್ದಾರೆ. ಸರಕಾರದ ದ್ವಂದ್ವ ನೀತಿಯಿಂದ ಬಹುತೇಕ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ಸೇವೆಯನ್ನು ಸಲ್ಲಿಸಲು ಹಿಂಜರಿಯುತ್ತಿದ್ದು, ತರಗತಿಗಳನ್ನು ನಿರಾಕರಿಸುತ್ತಿದ್ದಾರೆ.

ಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದ ಬೆರಳೆಣಿಕೆಯ ಖಾಯಂ ಉಪನ್ಯಾಸಕರೆ ಕಾಲೇಜುಗಳಲ್ಲಿ ಪಾಠ ಮಾಡುತ್ತಿದ್ದು, ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬೋಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.

ಅತಿಥಿ ಉಪನ್ಯಾಸಕ ಹುದ್ದೆಗೆ ಸಂಬಂಧಿಸಿದಂತೆ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಿ, ನೂತನವಾಗಿ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಸಿದರೆ ಅತಿಥಿ ಉಪನ್ಯಾಸಕರು ಅತಂತ್ರರಾಗುತ್ತಾರೆ. ಸರಕಾರ ಅತಿಥಿ ಉಪನ್ಯಾಸಕರಿಗೆ ಯಾವುದೇ ಭತ್ತೆಗಳನ್ನು ನೀಡುವುದಿಲ್ಲ. ಹಾಗಾಗಿ ಹಿಂದಿನ ವರ್ಷ ಸರಕಾರ ತೆಗೆದುಕೊಂಡ ನಿರ್ಧಾರದಿಂದ ಅತಿಥಿ ಉಪನ್ಯಾಸಕರಿಗೆ ಅನ್ಯಾಯವೇ ಆಗಿದೆ. ಮೊದಲು ಕರ್ತವ್ಯ ನಿರ್ವಹಿಸಿದ್ದ ಕಾಲೇಜಿನಲ್ಲಿ ಅವರು ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿಲ್ಲ. ಸರಕಾರವು ನಿಯೋಜನೆ ಮಾಡಿದ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೂ ಆ ಕಾಲೇಜಿಗೆ ಹೊಂದಿಕೊಂಡಿದ್ದೇವೆ. ಈಗ ಕೌನ್ಸಿಲಿಂಗ್‌ನಲ್ಲಿ ಬೇರೆ ಜಿಲ್ಲೆಯ ಕಾಲೇಜಿಗೆ ಆಯ್ಕೆಯಾದರೆ, ಆ ಜಿಲ್ಲೆಗೆ ನಾವು ಕುಟುಂಬ ಸಮೇತವಾಗಿ ಹೋಗಲು ಕಷ್ಟವಾಗುತ್ತದೆ.

- ಡಾ.ಸೋಮಶೇಖರ್ ಎಚ್.ಶಿಮೊಗ್ಗ್ಗಿ, ರಾಜ್ಯಾಧ್ಯಕ್ಷ, ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿ

Similar News