ಈ ವರ್ಷದಿಂದ ಮೊಬೈಲ್ ಬಿಲ್ ದುಬಾರಿ ಸಾಧ್ಯತೆ: ಏಕೆ ಮತ್ತು ಹೇಗೆ?

Update: 2023-01-04 12:21 GMT

ಹೊಸದಿಲ್ಲಿ: ಈ ವರ್ಷ ಮೊಬೈಲ್ ಸೇವಾ ಕಂಪನಿಗಳು ಮೊಬೈಲ್ ಸೇವಾ ಶುಲ್ಕ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು gadgetsnow.com ವರದಿ ಮಾಡಿದೆ.

ಮೊಬೈಲ್ ಸೇವಾ ಕಂಪನಿಗಳು ಈ ವರ್ಷದ ಮಧ್ಯಭಾಗದಲ್ಲಿ ಮೊಬೈಲ್ ಸೇವಾ ಶುಲ್ಕ ಏರಿಕೆ ಮಾಡುವ ಸಾಧ್ಯತೆ ಇದೆ. ಈ ಕುರಿತು ವರದಿ ಪ್ರಕಟಿಸಿರುವ ಮಧ್ಯಸ್ಥ ಕಂಪನಿ IIFL Securities, "5G ಸೇವೆಗೆ ಸಂಬಂಧಿಸಿದಂತೆ ಪ್ರತಿ ಬಳಕೆದಾರನಿಂದ ಗಳಿಸುವ ಸರಾಸರಿ ಆದಾಯ (ARPU) ತಕ್ಷಣದಲ್ಲಿ ಏರಿಕೆ ಕಾಣುವುದು ಅಸಾಧ್ಯವಾಗಿದ್ದು, ಟೆಲಿಕಾಂ ಕಂಪನಿಗಳ ಪಾಲಿಗೆ 4G ಪ್ರೀಪೇಯ್ಡ್ ಶುಲ್ಕ ಏರಿಕೆ ಮಾತ್ರ ಬಹು ಮುಖ್ಯ ಪ್ರತಿ ಬಳಕೆದಾರನಿಂದ ಗಳಿಸುವ ಸರಾಸರಿ ಆದಾಯವಾಗಿದೆ. 2023ರ ಮಧ್ಯಭಾಗದಲ್ಲಿ 4G ಸೇವಾ ಶುಲ್ಕ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ" ಎಂದು ಹೇಳಿದೆ.

ಇದೇ ವೇಳೆ ಮೊಬೈಲ್ ಸೇವಾ ಶುಲ್ಕ ಏರಿಕೆ 2024ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಆಸುಪಾಸು ನಡೆದರೆ, ಅದರಿಂದ ರಾಜಕೀಯ ತಿರುಗೇಟು ಆಗುವ ಸಾಧ್ಯತೆಯೂ ಇದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಮೊಬೈಲ್ ಸೇವಾ ಕಂಪನಿಗಳು ಪ್ರೀ ಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಶುಲ್ಕಗಳೆರಡನ್ನೂ ಏರಿಕೆ ಮಾಡುವ ಸಾಧ್ಯತೆ ಇದೆ. ಪೋಸ್ಟ್ ಪೇಯ್ಡ್ ಯೋಜನೆಗಳಿಂದ ಗಳಿಸುತ್ತಿರುವ ಆದಾಯ ಕುಂಠಿತಗೊಳ್ಳುತ್ತಲೇ ಸಾಗುತ್ತಿರುವುದರಿಂದ ಪೋಸ್ಟ್ ಪೇಯ್ಡ್ ಬಳಕೆದಾರರು ತಮ್ಮ ಯೋಜನೆಗಳಲ್ಲಿ ಹೆಚ್ಚು ಶುಲ್ಕ ಏರಿಕೆಯನ್ನು ಕಾಣಲಿದ್ದಾರೆ ಎಂದು ಟೆಲಿಕಾಂ ವಿಶ್ಲೇಷಕರು ಅಂದಾಜಿಸಿದ್ದಾರೆ.

ಭಾರತದಲ್ಲಿ ಮೊಬೈಲ್ ಸೇವಾ ಕಂಪನಿಗಳು ನವೆಂಬರ್, 2021ರಲ್ಲಿ ಮೊಬೈಲ್ ಸೇವಾ ಶುಲ್ಕಗಳ ಏರಿಕೆಯನ್ನು ಪ್ರಕಟಿಸಿದ್ದವು. ಮೊದಲಿಗೆ ವೊಡಾಫೋನ್-ಐಡಿಯಾ ಕಂಪನಿಯು ಮೊಬೈಲ್ ಸೇವಾ ಶುಲ್ಕವನ್ನು ಶೇ. 42ರಷ್ಟು ಏರಿಕೆ ಮಾಡಿತ್ತು. ನಂತರ ವೊಡಾಫೋನ್-ಐಡಿಯಾ ಕಂಪನಿಯನ್ನು ಭಾರ್ತಿ ಏರ್‌ಟೆಲ್ ಮತ್ತು ಜಿಯೊ ಕಂಪನಿಗಳು ಅನುಸರಿಸಿದ್ದವು.

ಆದರೆ, 5G ಸೇವೆಯನ್ನು ಉನ್ನತ ಸೇವೆ ಎಂದು ಪರಿಗಣಿಸುವ ಯಾವುದೇ ಯೋಜನೆ ಹೊಂದಿಲ್ಲ ಎಂದು ಏರ್‌ಟೆಲ್ ಮತ್ತು ಜಿಯೊ ಕಂಪನಿಗಳು ಈಗಾಗಲೇ ಸ್ಪಷ್ಟಪಡಿಸಿವೆ. ಅಂದರೆ, ಮೊಬೈಲ್ ಬಳಕೆದಾರರು ಹಾಲಿ ಶುಲ್ಕ ಯೋಜನೆಯೊಂದಿಗೆ 5G ಸೇವೆ ಪಡೆಯುವುದು ಮುಂದುವರಿಯಲಿದೆ. ಹೀಗಿದ್ದೂ, ಬಳಕೆದಾರರು 5G ಸೇವೆಯನ್ನು ಪಡೆಯಲು ಕನಿಷ್ಠ ಪ್ರಮಾಣದ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕಿದ್ದು, ಆ ನೀತಿ ಈಗಾಗಲೇ ಜಾರಿಯಲ್ಲಿದೆ. ನಿರ್ದಿಷ್ಟ ಸೇವಾ ಶುಲ್ಕ ಯೋಜನೆಗಳನ್ನು ಹೊರತುಪಡಿಸಿ, ಈಗಾಗಲೇ ಏರ್‌ಟೆಲ್ ಮತ್ತು ಜಿಯೊ ಕಂಪನಿಗಳೆರಡೂ ಪ್ರೀಪೇಯ್ಡ್ ಬಳಕೆದಾರರಿಗೆ 5G ಸೇವೆಯನ್ನು ಒದಗಿಸುತ್ತಿವೆ.

ಇದನ್ನೂ ಓದಿ: ಉತ್ತರಾಖಂಡದಲ್ಲಿ 4,000 ಮನೆಗಳು, ಶಾಲೆಗಳು, ಮಸೀದಿಗಳ ತೆರವು ವಿರುದ್ಧ ಅರ್ಜಿ: ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

Similar News