ಬ್ರಿಟನ್‌ ನಲ್ಲಿ ಜನಾಂಗೀಯ ನಿಂದನೆಗೆ ನಟ ಸತೀಶ್ ಶಾ ನೀಡಿದ ಪ್ರತಿಕ್ರಿಯೆಗೆ ನೆಟ್ಟಿಗರಿಂದ ಪ್ರಶಂಸೆ

Update: 2023-01-04 13:17 GMT

ಲಂಡನ್: ಬ್ರಿಟನ್‌ನ ಹೀಥ್ರೋ ವಿಮಾನ ನಿಲ್ದಾಣದ ಸಿಬ್ಬಂದಿಗಳಿಂದ ನಟ ಸತೀಶ್ ಶಾ ಜನಾಂಗೀಯ ನಿಂದನೆ ಎದುರಿಸಿದ್ದು, ಅದಕ್ಕೆ ಅವರು ಶಾಂತ ರೀತಿಯಲ್ಲಿ ನೀಡಿರುವ ಪ್ರತಿಕ್ರಿಯೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಮಾನದಲ್ಲಿ ಪ್ರಯಾಣ ಬೆಳೆಸಲು ಹೀಥ್ರೋ ವಿಮಾನ ನಿಲ್ದಾಣ ತಲುಪಿದ್ದ "ಸಾರಾಭಾಯಿ Vs. ಸಾರಾಭಾಯಿ" ಖ್ಯಾತಿಯ ನಟ ಸತೀಶ್ ಶಾ ಮತ್ತು ಅವರ ಕುಟುಂಬದ ಸದಸ್ಯರನ್ನು ಕುರಿತು ವಿಮಾನ ನಿಲ್ದಾಣದ ಸಿಬ್ಬಂದಿಗಳು, "ನೀವು ಹೇಗೆ ಪ್ರಥಮ ದರ್ಜೆಯ ವಿಮಾನ ಟಿಕೆಟ್ ದರವನ್ನು ಭರಿಸಲು ಸಾಧ್ಯ?" ಎಂದು ಜನಾಂಗೀಯ ನಿಂದನೆಯ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಶಾಂತ ರೀತಿಯಲ್ಲಿ ಪ್ರತಿಕ್ರಿಯಿಸಿರುವ ಶಾ, "ಯಾಕೆಂದರೆ, ನಾವು ಭಾರತೀಯರು" ಎಂದು ಉತ್ತರಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸತೀಶ್ ಶಾ, "ಹೀಥ್ರೋ ವಿಮಾನ ನಿಲ್ದಾಣದ ಸಿಬ್ಬಂದಿಗಳು ನನ್ನ ಸಹ ಪ್ರಯಾಣಿಕನನ್ನು "ಅವರು ಹೇಗೆ ಪ್ರಥಮ ದರ್ಜೆಯ ವಿಮಾನ ಟಿಕೆಟ್ ಭರಿಸಲು ಸಾಧ್ಯ?" ಎಂದು ಅಚ್ಚರಿಯಿಂದ ಪ್ರಶ್ನಿಸುವುದು ನನ್ನ ಕಿವಿಗೆ ಬಿದ್ದಾಗ, "ಯಾಕೆಂದರೆ, ನಾವು ಭಾರತೀಯರು" ಎಂದು ಹೆಮ್ಮೆಯ ಮುಗುಳ್ನಗೆಯೊಂದಿಗೆ ನಾನು ಉತ್ತರಿಸಿದೆ" ಎಂದು ಹೇಳಿಕೊಂಡಿದ್ದಾರೆ.

ಶಾ ಅವರ ಈ ಟ್ವೀಟ್ ಕೂಡಲೇ ವೈರಲ್ ಆಗಿದ್ದು, 11,000ಕ್ಕೂ ಹೆಚ್ಚು ಮೆಚ್ಚುಗೆ ಮತ್ತು ಹಲವಾರು ಪ್ರತಿಕ್ರಿಯೆಗಳನ್ನು ಗಳಿಸಿದೆ. ಅವರ ಟ್ವೀಟ್‌ಗೆ ಹೀಥ್ರೋ ವಿಮಾನ ನಿಲ್ದಾಣ ಪ್ರಾಧಿಕಾರವೂ ಪ್ರತಿಕ್ರಿಯಿಸಿದ್ದು, ಘಟನೆಗೆ ಕ್ಷಮೆ ಯಾಚಿಸಿದೆ. "ಶುಭ ಮುಂಜಾನೆ. ಘಟನೆ ಕುರಿತು ತಿಳಿದು ವಿಷಾದವಾಗಿದೆ. ನೀವು ನಮ್ಮನ್ನು ಕ್ಷಮಿಸುತ್ತೀರಾ?" ಎಂದು ಅದು ಪ್ರತಿಕ್ರಿಯಿಸಿದೆ.

ಜನಾಂಗೀಯ ನಿಂದನೆಯನ್ನು ದಿಟ್ಟವಾಗಿ ಎದುರಿಸಿದ ಶಾರನ್ನು ಹಲವಾರು ನೆಟ್ಟಿಗರು ಅಭಿನಂದಿಸಿದ್ದಾರೆ. ಮತ್ತೆ ಕೆಲವರು ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬ್ರಿಟನ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸತೀಶ್ ಶಾ ಹಲವಾರು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದು, 'ಹಮ್ ಆಪ್ಕೆ ಹೈ ಕೌನ್', 'ಹಮ್ ಸಾಥ್ ಸಾಥ್ ಹೈ', 'ಕಹೋ ನಾ ಪ್ಯಾರ್ ಹೈ', 'ಮೈ ಹೂಂ ನಾ', 'ಕಿಚಡಿ' ಅವರು ನಟಿಸಿರುವ ಪ್ರಮುಖ ಚಿತ್ರಗಳು. ಟಿವಿಯಲ್ಲಿ ಪ್ರಸಾರವಾಗಿದ್ದ ಹಾಸ್ಯ ಕಾರ್ಯಕ್ರಮ 'ಸಾರಾಭಾಯಿ Vs. ಸಾರಾಭಾಯಿ'ಯಲ್ಲಿ ಅವರು ನಿರ್ವಹಿಸಿದ ಪಾತ್ರದಿಂದ ಹೆಚ್ಚು ಜನಪ್ರಿಯಗೊಂಡಿದ್ದಾರೆ. 'ಕಾಮಿಡಿ ಸರ್ಕಸ್' ಎಂಬ ಟಿವಿ ಕಾರ್ಯಕ್ರಮದಲ್ಲಿ ಅವರು ತೀರ್ಪುಗಾರರಾಗಿಯೂ ಕಾಣಿಸಿಕೊಂಡಿದ್ದರು.

2014ರಲ್ಲಿ ತೆರೆ ಕಂಡಿದ್ದ 'ಹಮ್‌ಶಕಲ್ಸ್' ಅವರ ನಟನೆಯ ಕೊನೆ ಚಿತ್ರವಾಗಿದೆ.

Similar News