×
Ad

ಪುತ್ತೂರು: ಕಾರ್ಮಿಕ ಕಲ್ಯಾಣ ಮಂಡಳಿಯಿಂದ ವಂಚನೆ ಆರೋಪ

Update: 2023-01-04 18:12 IST

ಪುತ್ತೂರು: ಕಾರ್ಮಿಕರ ಕಲ್ಯಾಣದ ಉದ್ದೇಶಕ್ಕಾಗಿ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು ಸಂಗ್ರಹಿಸುತ್ತಿರುವ ಕೋಟ್ಯಾಂತರ ಹಣವನ್ನು ಸದುದ್ದೇಶಕ್ಕಾಗಿ ಬಳಸದೆ ಕಾರ್ಮಿಕರಿಗೆ ವಂಚನೆ ನಡೆಸುತ್ತಿದ್ದು, ಈ ಬಗ್ಗೆ ಪ್ರತಿಭಟನೆಗೆ ಮುಂದಾದರೆ ಅದನ್ನು ಹತ್ತಿಕ್ಕುವ ಕೆಲಸ ಪೊಲೀಸರಿಂದ ನಡೆಸುತ್ತಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿಯ ಧೋರಣೆಯನ್ನು ವಿರೋಧಿಸಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಕಡಬ ಮರ್ಧಾಳದ ಶ್ರಮಿಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಗೌರವ ಅಧ್ಯಕ್ಷ ಕೆ.ಪಿ. ಮೋಹನ್ ಎಚ್ಚರಿಸಿದ್ದಾರೆ. 

ಅವರು ಬುಧವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರಿಗೆ 18 ವಿಧದ ಸೌಲಭ್ಯಗಳಿವೆ. ಅವುಗಳಲ್ಲಿ ಒಂದೆರಡು ಸೌಲಭ್ಯ ಹೊರತು ಉಳಿದ ಯಾವುದೇ ಸವಲತ್ತುಗಳನ್ನು ನೀಡುತ್ತಿಲ್ಲ. ಕಾರ್ಮಿಕ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿ ಕಳೆದ ಸಾಲಿನಲ್ಲಿ 42 ಸಾವಿರ ಅರ್ಜಿಗಳು ಬಾಕಿ ಇವೆ ಎಂದು ಸಚಿವರು ಸದನದಲ್ಲಿ ಹೇಳಿಕೆ ನೀಡಿದ್ದರು. ತಾಂತ್ರಿಕ ಸಮಸ್ಯೆ ಬಗೆಹರಿಸಿ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಅದು ಈವರೆಗೂ ಈಡೇರಿಲ್ಲ. 2022-23 ನೇ ಸಾಲಿನ ಅರ್ಜಿಯನ್ನಾದರೂ ಸ್ವೀಕರಿಸುವ ನಿರೀಕ್ಷೆ ಇತ್ತು. ಅದಕ್ಕೂ ಸರಕಾರ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಸ್ಕಾಲರ್ ಶಿಪ್ ಗೆ ಸಂಬಂಧಿಸಿ 600 ಕೋಟಿ ಇರಿಸಲಾಗಿದೆ. ಆದರೂ ಅರ್ಜಿ ಸ್ವೀಕಾರ ಆರಂಭಿಸಿಲ್ಲ. ತಾಂತ್ರಿಕ ಸಮಸ್ಯೆ ಎಂದಾದರೆ ಈ ಹಿಂದೆ ಮಾಡಿರುವಂತೆ ಆಫ್ ಲೈನ್ ಅರ್ಜಿಗಳನ್ನು ಸ್ವೀಕರಿಸಬಹುದಿತ್ತು. ಇವರಿಗೆ ಇಚ್ಛಾಶಕ್ತಿಯ ಕೊರತೆ ಇದೆ. ವಿವಿಧ ಪಕ್ಷಗಳಲ್ಲಿ ಕಾರ್ಮಿಕ ಘಟಕಗಳು ಕಾರ್ಯನಿರ್ವಹಿಸುತ್ತಿದ್ದರೂ, ಯಾರೂ ಮಾತನಾಡದೇ ಇರುವುದು ಆಶ್ಚರ್ಯದ ಸಂಗತಿ ಎಂದು ಮೋಹನ್ ಹೇಳಿದರು.

ರಾಜ್ಯದಲ್ಲಿ 34 ಲಕ್ಷ ಮಂದಿ ಕಟ್ಟಡ ಮತ್ತು ಇತರೆ ಕಾರ್ಮಿಕರಿದ್ದಾರೆ. ಈ ಪೈಕಿ 3 ಲಕ್ಷ ಮಂದಿಗೆ ಅವರು ಕೇಳದಿದ್ದರೂ ಬಸ್ ಪಾಸ್ ನೀಡಲಾಗಿದೆ. ಒಬ್ಬನಿಗೆ 16 ಸಾವಿರದಷ್ಟು ಕಲ್ಯಾಣ ಮಂಡಳಿಯಿಂದ ಕೆ.ಎಸ್.ಆರ್.ಟಿ.ಸಿ. ಗೆ ಹೋಗುತ್ತಿದೆ. ಈಗ ನೀಡಿರುವ ಪಾಸ್‍ನ ಅವಧಿ ಡಿಸೆಂಬರ್ ಗೆ ಮುಗಿದಿದೆ. ನವೀಕರಣಕ್ಕೆ 3 ದಿನ ಮಾತ್ರ ಅವಕಾಶ ನೀಡಿ ಈಗ ಅವಕಾಶ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿದರು.

ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿ ಜ. 9 ರಂದು ಕಾರ್ಮಿಕ ಕಲ್ಯಾಣ ಮಂಡಳಿ ಎದುರು ಪ್ರತಿಭಟನೆಗೆ ಅವಕಾಶ ಕೋರಿ ಐಜಿ, ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆವು. ಆದರೆ ಸಿದ್ಧಾಪುರ ಪೊಲೀಸ್ ಠಾಣೆಯಿಂದ ನಮಗೆ ಬೆದರಿಕೆ ಕರೆ ಮಾಡಿ ಪ್ರತಿಭಟನೆಗೆ ಅವಕಾಶವಿಲ್ಲ. ಬಂಧಿಸಿ ಕೇಸು ಹಾಕುತ್ತೇವೆ ಎಂದು ಹೇಳಿದ್ದಾರೆ. ಈ ಕಾರಣದಿಂದ ಮುಂದೆ ಕಾನೂನು ಹೋರಾಟ ಮಾಡಲು ನಿರ್ಧರಿಸಿದ್ದೇವೆ ಎಂದು ಕೆ.ಪಿ. ಮೋಹನ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಶಿವಶಂಕರ್ ಕೆ., ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ., ಸದಸ್ಯರಾದ ಹರೀಶ್ಚಂದ್ರ, ವಿಶ್ವನಾಥ ಗೌಡ ಉಪಸ್ಥಿತರಿದ್ದರು.

Similar News