×
Ad

ಪಂತ್ ಕಾರು ಅಪಘಾತಕ್ಕೆ ಎರಡು ಸರಕಾರಿ ಇಲಾಖೆಗಳ ನಡುವಿನ ವಿವಾದ ಕಾರಣವೇ?

Update: 2023-01-04 20:57 IST

ಹೊಸದಿಲ್ಲಿ,ಜ.4: ಕಳೆದ ಶುಕ್ರವಾರ ಕಾರು ಅಪಘಾತದಿಂದ ಗಾಯಗೊಂಡಿರುವ ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ ಅವರು ಡೆಹ್ರಾಡೂನಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಂತ್ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಅಪಘಾತಕ್ಕೆ ಕಾರಣ ಕುರಿತು ಚರ್ಚೆ ನಡೆಯುತ್ತಿದೆ.

‌ಪಂತ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರಸಿಂಗ್ ಧಾಮಿಯವರು,ರಸ್ತೆಯ ಮೇಲಿನ ಗುಂಡಿಯ ಮೇಲೆ ಕಾರು ಚಲಾಯಿಸುತ್ತಿದ್ದಾಗ ಪಂತ್ ನಿದ್ರೆಯ ಮಂಪರಿನಲ್ಲಿದ್ದರು ಎಂದು ಹೇಳಿದ್ದರು. ಆದರೆ ಘಟನೆಯ ಪ್ರತ್ಯಕ್ಷದರ್ಶಿಗಳಾಗಿರುವ ಸ್ಥಳೀಯರು ನೀರಾವರಿ ಇಲಾಖೆಯ ಸಣ್ಣ ಕಾಲುವೆಯೊಂದರ ಭಾಗವೇ ಅಪಘಾತಕ್ಕೆ ಕಾರಣವಾಗಿತ್ತು ಎಂದು ಪ್ರತಿಪಾದಿಸಿದ್ದಾರೆ.

ರಾ.ಹೆ.58ರಲ್ಲಿ ಪಂತ್ ಕಾರು ಅಪಘಾತಕ್ಕೀಡಾಗಿದ್ದ ಸ್ಥಳವು ಹರಿದ್ವಾರ ಜಿಲ್ಲೆಯ ಮಂಗಳೂರು ಕೋತ್ವಾಲಿ ಪ್ರದೇಶ ವಾಪ್ತಿಯ ನರ್ಸಾನ್ ಪೊಲೀಸ್ ಠಾಣೆಯ ಎದುರಿಗಿದ್ದು,ತುಂಬ ಕಿರಿದಾಗಿದೆ. ಇಲ್ಲಿ ನೀರಾವರಿ ಇಲಾಖೆಗೆ ಸೇರಿದ ಕಾಲುವೆಯ ಒಂದು ಭಾಗವು ಹೆದ್ದಾರಿಯೊಳಗೆ ಸುಮಾರು ಎರಡು ಮೀ.ಗಳಷ್ಟು ವ್ಯಾಪಿಸಿದೆ. ಇದರಿಂದಾಗಿ ಸುಮಾರು 20 ಮೀ.ದೂರದವರೆಗೆ ಹೆದ್ದಾರಿಯ ಅಗಲವು ಸಾಮಾನ್ಯಕ್ಕಿಂತ ಕಡಿಮೆಯಾಗಿದೆ. ಇದೇ ಕಾರಣದಿಂದ ದಿಲ್ಲಿ ಕಡೆಯಿಂದ ವೇಗವಾಗಿ ಬರುವ ವಾಹನಗಳನ್ನು ಈ ನಿರ್ದಿಷ್ಟ ಸ್ಥಳದಲ್ಲಿ ಏಕಾಏಕಿಯಾಗಿ ನಿಯಂತ್ರಿಸುವುದು ಕಷ್ಟವಾಗುತ್ತದೆ ಎನ್ನಲಾಗಿದೆ.

ವೇಗದಲ್ಲಿದ್ದ ಪಂತ್ ಕಾರಿಗೆ ಮಣ್ಣಿನ ದಿಬ್ಬ ಎದುರಾದಾಗ ಅವರು ಬಲಬದಿಗೆ ತಿರುಗಿಸಿರಬಹುದು ಮತ್ತು ಅತಿವೇಗದಿಂದಾಗಿ ಅದು ವಿಭಜಕವನ್ನು ಹತ್ತಿರಬಹುದು ಎಂದು ಊಹಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ ಕಾಮಗಾರಿ ಆರಂಭಗೊಂಡಾಗಿನಿಂದ ಅದು ಪೂರ್ಣಗೊಳ್ಳುವವರೆಗೂ ಕಾಲುವೆಯನ್ನು ಸ್ಥಳಾಂತರಿಸುವಂತೆ ಕೋರಿ ನೀರಾವರಿ ಇಲಾಖೆಗೆ ಪತ್ರಗಳನ್ನು ಬರೆಯಲಾಗಿತ್ತು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ದ ತಾಂತ್ರಿಕ ಘಟಕದ ಅಧಿಕಾರಿ ರಾಘವ ತ್ರಿಪಾಠಿ ತಿಳಿಸಿದರು. ಆದರೆ ನೀರಾವರಿ ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ, ಪರಿಣಾಮವಾಗಿ ಇಲ್ಲಿ ಹೆದ್ದಾರಿ ಕಿರಿದಾಗಿಯೇ ಉಳಿದುಕೊಂಡಿದೆ. ಈ ಸ್ಥಳವನ್ನು ಸಮೀಪಿಸುವ ವಾಹನಗಳಿಗೆ ನೆರವಾಗಲು ಇಲ್ಲಿ ಗುರುತುಗಳನ್ನು ಮಾಡಲಾಗಿದೆ ಎಂದರು.

ಈ ಸ್ಥಳದಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ,ಆದರೆ ಇಲಾಖೆಯು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಆಡಳಿತ ಮತ್ತು ಅಧಿಕಾರಿಗಳ ನಿರ್ಲಕ್ಷದಿಂದಾಗಿ ಹಲವಾರು ಜೀವಗಳು ಬಲಿಯಾಗಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹೈಪ್ರೊಫೈಲ್ ಕ್ರಿಕಿಟಿಗನ ಕಾರಿನ ಅಪಘಾತದಿಂದ ಪಾಠ ಕಲಿತುಕೊಂಡಿರುವ ಎನ್ಎಚ್ಎಐ ಮರುದಿನವೇ ಸ್ಥಳದಲ್ಲಿ ರಿಫ್ಲೆಕ್ಟರ್ಗಳನ್ನು ಅಳವಡಿಸಿದೆ. ಹಲವಾರು ಇಲಾಖೆಗಳು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಆರಂಭಿಸಿವೆ.

ರಸ್ತೆ ಅಪಘಾತಗಳನ್ನು ತಗ್ಗಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ನರ್ಸಾನ್ ಗಡಿಯಿಂದ ಹರಿದ್ವಾರದ ಸಿಂಗ್ದ್ವಾರ್ ಚೌಕ್ವರೆಗಿನ ರಸ್ತೆಯ ಸುರಕ್ಷಿತೆಯ ಆಡಿಟ್ ಹೊಣೆಯನ್ನು ಸಮಿತಿಗೆ ವಹಿಸಲಾಗಿದೆ. ಪಿಡಬ್ಲುಡಿ,‌ ಸಾರಿಗೆ ಇಲಾಖೆ ಮತ್ತು ಎನ್ಎಚ್ಎಐ ಅಧಿಕಾರಿಗಳನ್ನು ಈ ಸಮಿತಿಗೆ ಸೇರಿಸಲಾಗುವುದು ಎಂದು ಆರ್ಟಿಒ ಶೈಲೇಶ್ ತಿವಾರಿ ತಿಳಿಸಿದರು.

Similar News