ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ವಾಲಿಬಾಲ್: ಮಂಗಳೂರು ವಿವಿಗೆ ಆರಂಭಿಕ ಪಂದ್ಯದಲ್ಲಿ ವಾಕ್‌ಓವರ್
ಚಾಂಪಿಯನ್ ಕಲ್ಲಿಕೋಟೆ, ರನ್ನರ್ ಕುರುಕ್ಷೇತ್ರಕ್ಕೆ ಭರ್ಜರಿ ಜಯ
ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ, ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಜಂಟಿ ಆಶ್ರಯದಲ್ಲಿ ಇಂದು ವಿದ್ಯುಕ್ತವಾಗಿ ಪ್ರಾರಂಭಗೊಂಡ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ವಾಲಿಬಾಲ್ ಚಾಂಪಿಯನ್ ಶಿಪ್‌ನ ತಮ್ಮ ಆರಂಭಿಕ ಪಂದ್ಯಗಳಲ್ಲಿ ಹಾಲಿ ಚಾಂಪಿಯನ್ ಕೇರಳ ಕಲ್ಲಿಕೋಟೆಯ, ಕಲ್ಲಿಕೋಟೆ ವಿವಿ ಹಾಗೂ ರನ್ನರ್‌ಅಪ್ ಹರಿಯಾಣದ ಕುರುಕ್ಷೇತ್ರ ವಿವಿ ತಂಡಗಳು ಭರ್ಜರಿ ಜಯ ದಾಖಲಿಸುವ ಮೂಲಕ ಶುಭಾರಂಭ ಮಾಡಿದವು.
ದಿನದ ಕೊನೆಯ ಪಂದ್ಯದಲ್ಲಿ ಆತಿಥೇಯ ಮಂಗಳೂರು ವಿವಿ ಸಿ ಗುಂಪಿನ ತನ್ನ ಎದುರಾಳಿ ಭುವನೇಶ್ವರದ ಕೆಐಐಟಿ ಡೀಮ್ಡ್ ವಿವಿ ತಂಡದಿಂದ ವಾಕ್‌ಓವರ್ ಪಡೆಯುವ ಮೂಲಕ ಆಟವಾಡದೇ ಪೂರ್ಣ ಅಂಕಗಳನ್ನು ಸಂಪಾದಿಸಿ ಮುನ್ನಡೆ ಸಾಧಿಸಿದೆ.
ಕಲ್ಲಿಕೋಟೆ ವಿವಿ ದಿನದ ಆರನೇ ಪಂದ್ಯದಲ್ಲಿ ಪಶ್ಚಿಮ ವಲಯದ ಡಾ.ಬಿಎಎಂ ವಿವಿ ತಂಡವನ್ನು 3-0 ಸೆಟ್‌ಗಳ ನೇರ ಅಂತರದಲ್ಲಿ ಹಿಮ್ಮೆಟ್ಟಿಸಿ ಶುಭಾರಂಭ ಮಾಡಿತು. ಕಲ್ಲಿಕೋಟೆ ವಿವಿ ತನ್ನ ಪಂದ್ಯವನ್ನು 25-20, 25-15 ಹಾಗೂ 26-24ರ ಅಂತರದಿಂದ ಔರಂಗಬಾದ್ ತಂಡವನ್ನು ಸೋಲಿಸಿತು.
ದಿನದ ಮೊದಲ ಪಂದ್ಯದಲ್ಲಿ ಹಾಲಿ ರನ್ನರ್‌ಅಪ್ ಹರಿಯಾಣದ ಕುರುಕ್ಷೇತ್ರ ವಿವಿ ತಂಡ ಎ ಗುಂಪಿನ ಮೊದಲ ಪಂದ್ಯದಲ್ಲಿ ಕೊಲ್ಕೋತಾದ ಅದಮಾಸ್ ವಿವಿಯನ್ನು ಮೂರು ನೇರ ಸೆಟ್‌ಗಳಲ್ಲಿ ಹಿಮ್ಮೆಟ್ಟಿಸಿತು. ಮೊದಲ ಸೆಟ್‌ನ್ನು ಏಕಪಕ್ಷೀಯವಾಗಿ ಗೆದ್ದ ಕುರುಕ್ಷೇತ್ರ ವಿವಿ ಅಂತಿಮವಾಗಿ 25-11, 25-22, 25-23ರ ಅಂತರದ ಜಯ ದಾಖಲಿಸಿತು.
ಮೊದಲ ಸೆಟ್ ಹಿನ್ನಡೆಯ ಬಳಿಕ ಚೇತರಿಸಿಕೊಂಡ ಕೊಲ್ಕೋತಾ ತಂಡ ಮುಂದಿನೆರಡು ಸೆಟ್ ಗಳಲ್ಲಿ ತೀವ್ರ ಹೋರಾಟ ನೀಡಿತಾದರೂ ಬಲಿಷ್ಠ ಕುರುಕ್ಷೇತ್ರದ ವಿರುದ್ಧ ಸೋಲೊಪ್ಪಿಕೊಳ್ಳಲೇ ಬೇಕಾಯಿತು.
ದಿನದ ಎರಡನೇ ಪಂದ್ಯದಲ್ಲಿ ದಕ್ಷಿಣ ವಲಯದ ಮದ್ರಾಸ್ ವಿವಿ ಚೆನ್ನೈ ತಂಡ, ಎದುರಾಳಿ ಪಶ್ಚಿಮ ವಲಯವನ್ನು ಪ್ರತಿನಿಧಿಸುತ್ತಿರುವ ಜೈಪುರದ ರಾಜಸ್ಥಾನ ವಿವಿ ತಂಡವನ್ನು 3-1ಸೆಟ್‌ಗಳಿಂದ ಸೋಲಿಸಿತು. ಮದ್ರಾಸ್ ವಿವಿ ತನ್ನ ಆರಂಭಿಕ ಪಂದ್ಯದಲ್ಲಿ ಎದುರಾಳಿಯನ್ನು 21-25, 26-24 25-23, 25-19ರ ಅಂತರದಿಂದ ಪರಾಭವಗೊಳಿಸಿತು.
ಬಿ ಗುಂಪಿನ ಪಂದ್ಯದಲ್ಲಿ ಚೆನ್ನೈನ ಎಸ್‌ಆರ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಸಾಯನ್ಸ್ ಎಂಡ್ ಟೆಕ್ನಾಲಜಿ ತಂಡ, ಪಶ್ಚಿಮ ವಲಯದ ಶ್ರೀಕುಶಾಲದಾಸ್ ವಿವಿ ಹನುಮಾನಘಡ್‌ವನ್ನು 3-0 (25-17, 25-19, 25-17) ಅಂತರದಿಂದ ಹಿಮ್ಮೆಟ್ಟಿಸಿ ಮೊದಲ ಗೆಲುವು ದಾಖಲಿಸಿತು.
ಅದೇ ಗುಂಪಿನಲ್ಲಿ ವಾರಣಸಿಯ ಮಹಾತ್ಮಗಾಂಧಿ ಕಾಶಿ ವಿದ್ಯಾಪೀಠ, ಅಮೃತಸರದ ಗುರುನಾನಕ್ ದೇವ್ ವಿವಿ ತಂಡವನ್ನು ಸಹ ನೇರ ಸೆಟ್‌ಗಳಲ್ಲಿ ಹಿಮ್ಮೆಟ್ಟಿಸಿತು. ಅದು ಅಂತಿಮವಾಗಿ ಪಂದ್ಯವನ್ನು 33-31, 25-22, 25-22ರ ಅಂತರದ ಅತ್ಯಂತ ಪ್ರಯಾಸಕರ ಗೆಲುವು ದಾಖಲಿಸಿತು. ಈ ಪಂದ್ಯದ ಮೊದಲ ಸೆಟ್ ಆಟ ಅತ್ಯಂತ ರೋಮಾಂಚಕಾರಿಯಾಗಿ ಸಾಗಿತು.
ಡಿ ಗುಂಪಿನಲ್ಲಿ ಭುವನೇಶ್ವರದ ಉತ್ಕಲ ವಿವಿ ತಂಡ, ಹಿಮಾಚಲ ಪ್ರದೇಶ ವಿವಿಯನ್ನು 3-2ರ ಅಂತರಿಂದ ರೋಚಕವಾಗಿ ಹಿಮ್ಮೆಟ್ಟಿಸಿ ಪೂರ್ಣ ಅಂಕ ಸಂಪಾದಿಸಿತು. ಜಿದ್ದಾಜಿದ್ದಿನ ಹೋರಾಟದಲ್ಲಿ ಉತ್ಕಲ ವಿವಿ ಅಂತಿಮವಾಗಿ ಪಂದ್ಯವನ್ನು 20-25, 25-19, 18-25, 25-20, 15-9ರಿಂದ ಗೆಲುವು ದಾಖಲಿಸಿತು.
ಮಂಗಳೂರು ವಿವಿ ಸ್ಥಾನ ಪಡೆದಿರುವ ಸಿ ಗುಂಪಿನ ಮತ್ತೊಂದು ಪಂದ್ಯದಲ್ಲಿ ಪುಣೆಯ ಭಾರತಿ ವಿವಿ, ಪಂಜಾಬ್ ವಿವಿಯನ್ನು 25-19, 25-22, 25-18ರ ಅಂತರದಿಂದ ಸೋಲಿಸಿತು. ನಾಳೆ ಪ್ರತಿಯೊಂದು ತಂಡಗಳು ಗುಂಪಿನ ಎರಡನೇ ಲೀಗ್ ಪಂದ್ಯಗಳನ್ನು ಆಡಲಿವೆ.