ಕೇರಳ: ಶಬರಿಮಲೆ ಕುರಿತ ಚಿತ್ರವನ್ನು ಹೊಗಳಿದ್ದ ವ್ಯಕ್ತಿಯ ಅಂಗಡಿ ಧ್ವಂಸ
ಮಲಪ್ಪುರಂ,ಜ.4: ಇತ್ತೀಚಿಗೆ ಬಿಡುಗಡೆಗೊಂಡಿರುವ ಶ್ರೀ ಅಯ್ಯಪ್ಪ ಸ್ವಾಮಿ ಕುರಿತ ಚಿತ್ರವನ್ನು ಹೊಗಳಿ ಮಲಪ್ಪುರಂ ಜಿಲ್ಲೆಯ ಸ್ಥಳೀಯ ಸಿಪಿಐ ನಾಯಕರೋರ್ವರು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದ ಪೋಸ್ಟ್ ಗಳಿಂದ ಆಕ್ರೋಶಗೊಂಡಿದ್ದ ಕೆಲವು ಅಪರಿಚಿತ ವ್ಯಕ್ತಿಗಳು ಅವರಿಗೆ ಸೇರಿದ್ದ ಅಂಗಡಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿ.ಪ್ರಗಿಲೇಶ್ ಒಡೆತನದ ವಿದ್ಯುದ್ದೀಪ ಮತ್ತು ಧ್ವನಿವರ್ಧಕ ಸೇವೆಗಳ ಅಂಗಡಿಯನ್ನು ಜ.1ರಂದು ರಾತ್ರಿ ಧ್ವಂಸಗೊಳಿಸಲಾಗಿದೆ. ದಾಳಿಯಲ್ಲಿ ಅಂಗಡಿಯ ಸಮೀಪ ಇರಿಸಲಾಗಿದ್ದ ಹಲವಾರು ಹೊಸ ಬೋರ್ಡ್ಗಳು ಮತ್ತು ಅಲಂಕಾರಿಕ ದೀಪಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದರು.
ನಟ ಉನ್ನಿ ಮುಕುಂದನ್ ಮುಖ್ಯಪಾತ್ರದಲ್ಲಿರುವ ‘ಮಾಳಿಗಪ್ಪುರಂ’ಚಿತ್ರವನ್ನು ತಾನು ಹೊಗಳಿದ ಬಳಿಕ ಅಂಗಡಿಗೆ ದಾಳಿ ನಡೆಸುವುದಾಗಿ ಕೆಲವರು ತನಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬೆದರಿಕೆಗಳನ್ನು ಒಡ್ಡಿದ್ದರು ಎಂದು ಪ್ರಗಿಲೇಶ್ ಆರೋಪಿಸಿದ್ದಾರೆ. ಚಿತ್ರವು ಶಬರಿಮಲೆಗೆ ಭೇಟಿ ನೀಡಿ ಶ್ರೀಅಯ್ಯಪ್ಪ ಸ್ವಾಮಿಗೆ ಪ್ರಾರ್ಥನೆಗಳನ್ನು ಸಲ್ಲಿಸುವ ಬಲವಾದ ಇಚ್ಛೆಯನ್ನು ಹೊಂದಿದ್ದ ಗ್ರಾಮವೊಂದರ ಪುಟ್ಟ ಬಾಲಕಿಯ ಕಥೆಯನ್ನು ನಿರೂಪಿಸಿದೆ.
ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೆರುಂಬಡಪ್ಪು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.