ವಿಎಚ್‌ಪಿ, ಬಜರಂಗದಳ ಕಾರ್ಯಕರ್ತರಿಂದ ಪಠಾಣ್ ಚಿತ್ರದ ಪೋಸ್ಟರ್ ಹರಿದು ದಾಂಧಲೆ

Update: 2023-01-05 06:13 GMT

ಅಹ್ಮದಾಬಾದ್: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ (VHP, Bajrang Dal) ಕಾರ್ಯಕರ್ತರು ಬುಧವಾರ ಇಲ್ಲಿನ ವಸ್ತ್ರಪುರ ಪ್ರದೇಶದ ಮಾಲ್‌ನಲ್ಲಿ, ಖ್ಯಾತ ಬಾಲಿವುಡ್ ನಟ ಶಾರೂಕ್ ಖಾನ್ (Shah Rukh Khan) ಹಾಗೂ ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್' (Pathaan) ಚಿತ್ರದ ಪೋಸ್ಟರ್ ಮತ್ತು ಇತರ ಪ್ರಚಾರ ಸಾಮಗ್ರಿಗಳನ್ನು ಹರಿದು ದಾಂಧಲೆ ನಡೆಸಿದ್ದಾರೆ.

ಮಲ್ಟಿಪ್ಲೆಕ್ಸ್ ಹೊಂದಿರುವ ಈ ಮಾಲ್‌ನಲ್ಲಿ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರ ದಾಂಧಲೆ ನಡೆಯುತ್ತಿರುವ ಸುದ್ದಿ ತಿಳಿದ ತಕ್ಷಣ ಧಾವಿಸಿದ ಪೊಲೀಸರು ಐದು ಮಂದಿಯನ್ನು ಬಂಧಿಸಿ, ಆ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಇನ್‌ಸ್ಪೆಕ್ಟರ್ ಜೆ.ಕೆ.ಡಂಗರ್ ಹೇಳಿದ್ದಾರೆ.

ಈ ಘಟನೆ ಬಗ್ಗೆ ವಿಎಚ್‌ಪಿ ಶೇರ್ ಮಾಡಿರುವ ವಿಡಿಯೊದಲ್ಲಿ, ಸಂಘಟನೆಯ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಪೋಸ್ಟರ್‌ಗಳು ಹಾಗೂ ಪಠಾಣ್ ಚಿತ್ರದ ದೊಡ್ಡ ಕಟೌಟ್‌ಗಳನ್ನು ಹರಿದು ಹಾಕುತ್ತಿರುವುದು ಕಂಡುಬಂದಿದೆ. ಈ ಚಿತ್ರವನ್ನು ಗುಜರಾತ್‌ನಲ್ಲಿ ಪ್ರದರ್ಶಿಸಲು ಅವಕಾಶ ನೀಡುವುದಿಲ್ಲ ಎಂದು ವಿಎಚ್‌ಪಿ ಈ ಮೊದಲು ಬೆದರಿಕೆ ಹಾಕಿತ್ತು. ಈ ಚಿತ್ರದ ’ಬೇಷರಮ್ ರಂಗ್’ ಹಾಡಿಗೆ ಶಾರೂಕ್ ಖಾನ್ ಜತೆ ನೃತ್ಯ ಮಾಡಿರುವ ಪಡುಕೋಣೆ ಕೇಸರಿ ಉಡುಪು ಧರಿಸಿರುವುದು ಬಲಪಂಥೀಯರ ಆಕ್ರೋಶಕ್ಕೆ ಕಾರಣವಾಗಿದೆ.

"ಪಠಾಣ್ ಚಿತ್ರ ಪ್ರದರ್ಶನಕ್ಕೆ ಗುಜರಾತ್‌ನಲ್ಲಿ ನಾವು ಅವಕಾಶ ನೀಡುವುದಿಲ್ಲ. ಚಿತ್ರ ಬಿಡುಗಡೆ ವಿರುದ್ಧ ಇಂದಿನ ಪ್ರತಿಭಟನೆಯನ್ನು ಎಲ್ಲ ಥಿಯೇಟರ್ ಮಾಲಕರು ಎಚ್ಚರಿಕೆಯಾಗಿ ಪರಿಗಣಿಸಬೇಕು. ತಮ್ಮ ಥಿಯೇಟರ್ ಅಥವಾ ಮಲ್ಟಿಪೆಕ್ಸ್‌ಗಳಲ್ಲಿ ಚಿತ್ರ ಬಿಡುಗಡೆಯಿಂದ ದೂರ ಉಳಿಯಬೇಕು" ಎಂದು ಗುಜರಾತ್ ವಿಎಚ್‌ಪಿ ವಕ್ತಾರ ಹಿತೇಂದ್ರ ಸಿನ್ಹ ರಜಪೂತ್ ಹೇಳಿದ್ದಾರೆ.

ಇದನ್ನೂ ಓದಿ: ಟೋಲ್ ಸಿಬ್ಬಂದಿಯನ್ನು ಥಳಿಸಿದ ಶಾಸಕ: ವಿಡಿಯೊ ವೈರಲ್

Similar News