ʼಗಸಗಸೆʼಯ ಕುರಿತು ನೀಡಿದ ಹೇಳಿಕೆಗಾಗಿ ದಿನಪತ್ರಿಕೆ ಸಂಪಾದಕ ಹೇಮಂತ್‌ ಕುಮಾರ್‌ ಬಂಧನ

Update: 2023-01-05 12:33 GMT

ಇಂಫಾಲ್:‌ ಮಣಿಪುರದ ರಾಜಧಾನಿ ಇಂಫಾಲ್‌ ಮೂಲದ ದಿನಪತ್ರಿಕೆ "ಸನಲೇಬಕ್‌" ಇದರ ಸಂಪಾದಕ ಹೇಮಂತಕುಮಾರ್‌ ನಿಂಗೊಂಬ ಅವರು ಗಸಗಸೆ ಕೃಷಿ ಕುರಿತು ನೀಡಿದ ಹೇಳಿಕೆಗಾಗಿ ಅಲ್ಲಿನ ಪೊಲೀಸರು ಅವರನ್ನು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದ್ದಾರೆ. ಪೊಲೀಸರು ಬುಧವಾರ ಬೆಳಿಗ್ಗೆ 7 ಗಂಟೆಗೆ ಇಂಫಾಲ್‌ ಪೂರ್ವ ಜಿಲ್ಲೆಯ ಅವರ ನಿವಾಸದಿಂದ ಅವರನ್ನು ವಶಕ್ಕೆ ಪಡೆದುಕೊಂಡು ಕೆಲ ಗಂಟೆಗಳ ನಂತರ ಬಿಡುಗಡೆಗೊಳಿಸಿದರು.

ಸ್ಥಳೀಯ ಟಿವಿ ವಾಹಿನಿಯಲ್ಲಿ ನಡೆದ ಚರ್ಚಾ ಕಾರ್ಯಕ್ರಮದ ವೇಳೆ ಅವರು ತಮ್ಮ ಹೇಳಿಕೆ ನೀಡಿದ್ದರು.

"ನಾನ ಗಸಗಸೆ ತೋಟಗಳ ಕುರಿತು ಅಭಿಪ್ರಾಯ ನೀಡಿದ್ದೆ. ಗಸೆಗಸೆ ಕೃಷಿಯನ್ನು ನಿಯಂತ್ರಿಸಲು ಇಬ್ಬರು ಪ್ರಭಾವಿ ಮಹಿಳೆಯರು ಸರ್ಕಾರಕ್ಕೆ ಸಹಾಯ ಮಾಡಬಲ್ಲರು. ನಾನು ಹೆಸರುಗಳನ್ನು ಉಲ್ಲೇಖಿಸಿಲ್ಲ ಆದರೆ ಅವರು ಗುಡ್ಡಗಾಡು ಪ್ರದೇಶಗಳ ಎಸ್‌ಒಒ ಗುಂಪುಗಳಿಗೆ ಸಂಬಂಧಿಸಿದವರು (ಸಸ್ಪೆನ್ಶನ್‌ ಆಫ್‌ ಆಪರೇಷನ್‌ನಲ್ಲಿರುವ ಕೆಲ ಉಗ್ರವಾದಿ ಸಂಘಟನೆಗಳು) ಎಂದು ಎಲ್ಲರಿಗೂ ಇದು ತಿಳಿದಿದೆ," ಎಂದು ಹೇಮಂತಕುಮಾರ್‌ ಹೇಳಿದ್ದಾರೆ.

"ನಾನೇನು ಅಪರಾಧಿಯಲ್ಲ, ಡ್ರಗ್ಸ್‌ ವಿರುದ್ಧ ರಾಜ್ಯದ ಅಭಿಯಾನ ಪರಿಣಾಮಕಾರಿಯಾಗಲೆಂದು ನಾನು ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೆ," ಎಂದು ಅವರು ಹೇಳಿದ್ದಾರೆ.

ಹೇಮಂತ್‌ ಕುಮಾರ್‌ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರದೇ ಇರುವುದರಿಂದ ಪೊಲೀಸರು ಅವರ ಜೊತೆ ಮಾತನಾಡಲೆಂದು ಅವರನ್ನು ಠಾಣೆಗೆ ಬರಹೇಳಬಹುದಾಗಿತ್ತು ಅವರನ್ನು ವಶಪಡಿಸಿಕೊಳ್ಳುವ ಅಗತ್ಯವಿಲ್ಲ, ಅವರೋರ್ವ ಗೌರವಾನ್ವಿತ ಸಂಪಾದಕ ಮತ್ತು ಅವರೇನು ತಲೆಮರೆಸಿಕೊಂಡವರಲ್ಲ. ಕೇವಲ ಸ್ಥಳೀಯ ಟಿವಿ ವಾಹಿನಿ ಚರ್ಚಾ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆಗೆ ಕೈಗೊಳ್ಳಲಾದ ಇಂತಹ ಕ್ರಮ ಅವರ ಘನತೆ ಮತ್ತು ಅಂತಸ್ತನ್ನು ಬಾಧಿಸುತ್ತದೆ,"ಎಂದು ಪತ್ರಕರ್ತರ ಸಂಘಟನೆಗಳು ತಮ್ಮ ಜಂಟಿ ಹೇಳಿಕೆಯಲ್ಲಿ ಕಿಡಿಕಾರಿವೆ.

ರಾಜ್ಯದಲ್ಲಿ ಗಸೆಗಸೆ ಕೃಷಿಯ ಹಿಂದೆ ಕುಕಿ ಬಂಡುಕೋರ ಸಂಘಟನೆಗಳಿವೆ ಎಂದು ಕಳೆದ ತಿಂಗಳು ಮಣಿಪುರ ಮುಖ್ಯಮಂತ್ರಿ ಎನ್‌ ಬಿರೇನ್‌ ಸಿಂಗ್‌ ಹೇಳಿದ್ದರು.

Similar News