ಬುಲ್ಡೋಝರ್ ಗಳು ಶಾಂತಿ ಮತ್ತು ಪ್ರಗತಿಯ ಸಂಕೇತವಾಗಬಹುದು: ಯೋಗಿ ಆದಿತ್ಯನಾಥ್

Update: 2023-01-05 15:24 GMT

ಮುಂಬೈ,ಜ.5: ಕಾನೂನು ಮತ್ತು ಸುವ್ಯವಸ್ಥೆಯನ್ನು ಅನುಷ್ಠಾನಿಸುವ ಮೂಲಕ ಬುಲ್ಡೋಝರ್ ಗಳು ಶಾಂತಿ ಮತ್ತು ಪ್ರಗತಿಯ ಸಂಕೇತವಾಗಬಹುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಅವರು ಬುಧವಾರ ಇಲ್ಲಿ ಹೇಳಿದರು.

ಸುದ್ದಿಗಾರರು ತನ್ನ ‘ಬುಲ್ಡೋಝರ್ ಬಾಬಾ’ ಅಡ್ಡಹೆಸರಿನ ಕುರಿತು ಪ್ರಶ್ನಿಸಿದಾಗ ಆದಿತ್ಯನಾಥ ಈ ಉತ್ತರವನ್ನು ನೀಡಿದರು.

ಆದಿತ್ಯನಾಥ ಮತ್ತು ಬಿಜೆಪಿ ‘ಬುಲ್ಡೋಝರ್ ನ್ಯಾಯ’ಎಂದು ಹೆಸರಾಗಿರುವ ಬುಲ್ಡೋಜರ್ ಕಾರ್ಯಾಚರಣೆಗಳ ಪರವಾಗಿ ದೃಢವಾಗಿ ನಿಂತಿದ್ದಾರೆ. ಅವರ ಬೆಂಬಲಿಗರು ಇದನ್ನು ಕ್ರಿಮಿನಲ್ ಗಳ ವಿರುದ್ಧ ಕಟ್ಟುನಿಟ್ಟಾದ ಕ್ರಮ ಎಂದು ಬಣ್ಣಿಸಿದರೆ ಅವರ ಟೀಕಾಕಾರರು ಇದನ್ನು ಭಿನ್ನಾಭಿಪ್ರಾಯಗಳ ವಿರುದ್ಧ ಉದ್ದೇಶಿತ ಅಸಮಾನ ಕ್ರಮ ಎಂದು ಬಣ್ಣಿಸಿದ್ದಾರೆ.

ಉ.ಪ್ರ.ಸರಕಾರವು ಫೆ.10ರಿಂದ 12ರವರೆಗೆ ಲಕ್ನೋದಲ್ಲಿ ಆಯೋಜಿಸಿರುವ ಜಾಗತಿಕ ಹೂಡಿಕೆದಾರರ ಶೃಂಗಸಭೆಗೆ ಮುನ್ನ ದೇಶಿಯ ಹೂಡಿಕೆದಾರರನ್ನು ಆಕರ್ಷಿಸಲು ಆದಿತ್ಯನಾಥ್ ಮುಂಬೈಗೆ ಎರಡು ದಿನಗಳ ಭೇಟಿ ನೀಡಿದ್ದರು.

ತವರು ರಾಜ್ಯದಲ್ಲಿ ಫಿಲ್ಮ್ ಸಿಟಿಯನ್ನು ಸ್ಥಾಪಿಸುವುದರ ಹಿಂದಿನ ಉದ್ದೇಶ ಮುಂಬೈನಿಂದ ಅದನ್ನು ಕಿತ್ತುಕೊಳ್ಳುವುದಲ್ಲ ಎಂದು ಅವರು ಒತ್ತಿ ಹೇಳಿದರು. ಯೋಗಿ ಸರಕಾರವು ಜೇವಾರ್ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿ ಯಮುನಾ ಎಕ್ಸ್ಪ್ರೆಸ್ ವೇ ಉದ್ದಕ್ಕೂ ಜಾಗತಿಕ ಫಿಲ್ಮ್ ಸಿಟಿಯನ್ನು ಸ್ಥಾಪಿಸಲು ಉದ್ದೇಶಿಸಿರುವುದರಿಂದ ಬಾಲಿವುಡ್ ಉತ್ತರ ಪ್ರದೇಶಕ್ಕೆ ಸ್ಥಳಾಂತರಗೊಳ್ಳುತ್ತದೆ ಎಂಬ ಕಳವಳಗಳನ್ನು ಮಹಾರಾಷ್ಟ್ರದಲ್ಲಿ ಕೆಲವರು ವ್ಯಕ್ತಪಡಿಸಿದ್ದಾರೆ. ಉ.ಪ್ರ.ಫಿಲ್ಮ್ ಸಿಟಿಯು 1,200 ಎಕರೆ ಪ್ರದೇಶದಲ್ಲಿ ತಲೆಯೆತ್ತಲಿದ್ದರೆ ಮುಂಬೈನ ಗೋರೆಗಾಂವ್ ನಲ್ಲಿರುವ ಫಿಲ್ಮ್ಸಿಟಿ 520 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ.

‘‘ಮುಂಬೈ ಎಂದರೆ ಮುಂಬೈ. ಅದು ‘ಅರ್ಥಭೂಮಿ (ಆರ್ಥಿಕತೆಯ ಪ್ರದೇಶ)’ಯಾಗಿದೆ ಮತ್ತು ಉ.ಪ್ರದೇಶವು ‘ಧರ್ಮಭೂಮಿ (ಧರ್ಮಗಳ ನಾಡು)’ಯಾಗಿದೆ. ಇವೆರಡರ ಸಂಗಮವಾಗಬಹುದು. ನಾವು ಇಲ್ಲಿಯ ಫಿಲ್ಮ್ಸಿಟಿಯನ್ನು ಒಯ್ಯಲು ಬಯಸಿಲ್ಲ,ಆದರೆ ನಮ್ಮದೇ ಆದ ಫಿಲ್ಮ್ ಸಿಟಿಯನ್ನು ನಿರ್ಮಿಸುತ್ತಿದ್ದೇವೆ. ಕಾಮಗಾರಿಯು ಪ್ರಗತಿಯಲ್ಲಿದೆ ಮತ್ತು ಕೆಲವು ಪ್ರಮುಖ ಸ್ಟುಡಿಯೋಗಳು ಅಲ್ಲಿಗೆ ಬರಲು ಆಸಕ್ತಿಯನ್ನು ತೋರಿಸಿವೆ ’’ಎಂದು ಹೇಳುವ ಮೂಲಕ ಆದಿತ್ಯನಾಥ ಕಳವಳಗಳನ್ನು ನಿವಾರಿಸಲು ಪ್ರಯತ್ನಿಸಿದರು.

ಜಾಗತಿಕ ಹೂಡಿಕೆದಾರರ ಶೃಂಗಸಭೆಗೆ ಹೂಡಿಕೆದಾರರನ್ನು ಆಕರ್ಷಿಸಲು ತನ್ನ ತಂಡಗಳನ್ನು 16 ರಾಷ್ಟ್ರಗಳಿಗೆ ಕಳುಹಿಸಿದ ಬಳಿಕ ಉ.ಪ್ರ.ಸರಕಾರವು ಮಂಬೈನಿಂದ ತನ್ನ ದೇಶಿಯ ಪ್ರವಾಸವನ್ನು ಆರಂಭಿಸಿದೆ. ದೇಶಿಯ ಹೂಡಿಕೆದಾರರನ್ನು ಸೆಳೆಯಲು ದೇಶದ ವಿವಿಧ ನಗರಗಳಲ್ಲಿ ಶೀಘ್ರವೇ ನಡೆಯಲಿರುವ ರೋಡ್ಶೋಗಳನ್ನು ಯಶಸ್ವಿಗೊಳಿಸಲು ರಾಜ್ಯ ಸರಕಾರವು ಪರಿಣಾಮಕಾರಿ ಕಾರ್ಯತಂತ್ರಗಳನ್ನು ರೂಪಿಸಲಿದೆ ಎಂದು ಉ.ಪ್ರ.ಮುಖ್ಯ ಕಾರ್ಯದರ್ಶಿ ದುರ್ಗಾಶಂಕರ ಮಿಶ್ರಾ ಹೇಳಿದರು.

Similar News