ಗೋವಾ: ಮನೋಹರ್ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾಚರಣೆ ಆರಂಭ

Update: 2023-01-05 17:29 GMT

ಪಣಜಿ, ಜ. 5: ಗೋವಾದ ಮೋಪಾದಲ್ಲಿರುವ ನೂತನ ಮನೋಹರ್ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಗುರುವಾರ ಕಾರ್ಯಾಚರಣೆ ಆರಂಭಿಸಿದ್ದು, ಹೈದರಾಬಾದ್ ನಿಂದ ಅಗಮಿಸಿದ ಇಂಡಿಗೊ ವಿಮಾನ ಇಲ್ಲಿ ಇಳಿದ ಮೊದಲ ವಿಮಾನ ಎಂಬ ಹೆಗ್ಗಳಿಕೆ ಪಾತ್ರವಾಯಿತು. 179 ಪ್ರಯಾಣಿಕರನ್ನು ಹೊತ್ತ ಇಂಡಿಗೊ ವಿಮಾನ ಬೆಳಗ್ಗೆ 9 ಗಂಟೆಗೆ ಉತ್ತರ ಗೋವಾ ಜಿಲ್ಲೆಯ ಮೋಪಾದಲ್ಲಿರುವ ನೂತನ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿ ತಿಳಿಸಿದ್ದಾರೆ.

ಕೇಂದ್ರ ಸಚಿವ ಶ್ರೀಪಾದ್ ನಾಯಕ್, ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಪ್ರವಾಸೋದ್ಯಮ ಸಚಿವ ರೋಹನ್ ಖೌತೆ ಹಾಗೂ ಇತರ ನಾಯಕರು ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡದಲ್ಲಿ ಪ್ರಯಾಣಿಕರನ್ನು ಬರ ಮಾಡಿಕೊಂಡರು. ವಿಮಾನ ನಿಲ್ದಾಣದಲ್ಲಿ ಐವರು ಸಂಗೀತಗಾರರನ್ನು ಒಳಗೊಂಡ ಮ್ಯೂಸಿಕಲ್ ಬಾಂಡ್ ಗೋವಾವನ್ನು ಹೊಗಳುವ ಹಾಡುಗಳನ್ನು ಹೇಳುವ ಮೂಲಕ ಪ್ರಯಾಣಿಕರನ್ನು ಸ್ವಾಗತಿಸಿತು.

ಇದು ರಾಜ್ಯ ಹಾಗೂ ಕೇಂದ್ರ ಸರಕಾರದ ಅತಿ ದೊಡ್ಡ ಸಾಧನೆ. ಇಂದಿನಿಂದ ಗೋವಾದಲ್ಲಿ ಎರಡು ವಿಮಾನ ನಿಲ್ದಾಣಗಳು ಕಾರ್ಯಾಚರಿಸಲಿವೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಡಿಸೆಂಬರ್ 11ರಂದು ಉದ್ಘಾಟಿಸಿದ್ದರು. ಈ ವಿಮಾನ ನಿಲ್ದಾಣವನ್ನು 2870 ಕೋ.ರೂ. ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ.

Similar News