×
Ad

ವೃತ್ತಿರಂಗಭೂಮಿಯ ಸಂಗೀತ, ಸಾಹಿತ್ಯ ಉಳಿವಿಗಾಗಿ....

ರಂಗ ಪ್ರಸಂಗ

Update: 2023-01-06 11:32 IST

ವೃತ್ತಿ ನಾಟಕಗಳ ಅದರಲ್ಲೂ ಪೌರಾಣಿಕ ನಾಟಕಗಳ ಹಾಡುಗಳನ್ನು ಸಂಗ್ರಹಿಸುವುದು ಮತ್ತು ಪ್ರಕಟಿಸುವುದು ಎಚ್.ಎಸ್.ಗೋವಿಂದಗೌಡರ ಅತ್ಯಂತ ಪ್ರೀತಿಯ ಕೆಲಸ. ಇದರೊಂದಿಗೆ 25-30 ನಾಟಕಗಳು ಅವರಿಂದ ಮುದ್ರಣ/ಮರುಮುದ್ರಣಗೊಂಡಿವೆ.

ಅವರ ಉದ್ಯೋಗ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ. ನಿವೃತ್ತರಾಗಿದ್ದು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಉಪ ಆಯುಕ್ತರಾಗಿ. ಆದರೆ ಒಪ್ಪಿಕೊಂಡಿದ್ದು, ಅಪ್ಪಿಕೊಂಡಿದ್ದು ರಂಗಭೂಮಿಯನ್ನು. ಅದರಲ್ಲೂ ಪೌರಾಣಿಕ ರಂಗಭೂಮಿಯನ್ನು. ಅವರು ಹನ್ಯಾಳು ಸಣ್ಣೇಗೌಡ ಗೋವಿಂದಗೌಡ ಅಂದರೆ ಗೊತ್ತಾಗದು. ಎಚ್.ಎಸ್.ಗೋವಿಂದಗೌಡ ಎಂದರೆ ರಂಗಾಸಕ್ತರಿಗೆ ಪರಿಚಿತರು. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹನ್ಯಾಳು ಗ್ರಾಮದ ಗೋವಿಂದಗೌಡರು (25-05-1947) ಓದಿದ್ದು ಭೂಗೋಳಶಾಸ್ತ್ರದಲ್ಲಿ ಎಂ.ಎಸ್ಸಿ. ಆದರೆ ಪ್ರೌಢಶಾಲೆಯಲ್ಲಿ ಓದುವಾಗಲೇ ರಂಗಾಸಕ್ತಿ. ಅವರ ಚಿಕ್ಕಪ್ಪಂದಿರು ಕಲಾವಿದರು ಹಾಗೂ ನಾಟಕ ಮೇಷ್ಟ್ರು. ಹೀಗಾಗಿ ನಿತ್ಯ ಶಾಲೆಯಿಂದ ಬಂದ ನಂತರ ನಾಟಕದ ಹಾಡುಗಳನ್ನು ಹಾಡುತ್ತ ಬೆಳೆದರು.

ಕಮಲ ವಿಲಾಸಕರ

ಸುಶೀಲ ವಿನೋದ ವಿಲೋಲ

ಪರಿಪಾಲ...

ಹೀಗೆ ‘ಕೃಷ್ಣಲೀಲೆ’ ನಾಟಕದ ಕೃಷ್ಣನ ಹಾಡು ಈಗಲೂ ಅವರಿಗೆ ಕಂಠಪಾಠ. ಹೈಸ್ಕೂಲಿನಲ್ಲಿದ್ದಾಗಲೇ ಭರತ, ರಾಮನ ಪಾತ್ರಗಳಿಗೆ ಬಣ್ಣ ಹಚ್ಚಿದರು. ಆಮೇಲೆ ಮೈಸೂರಿಗೆ ಓದಲು ಬಂದಾಗಲೂ ನಾಟಕದ ಗೀಳು ಬಿಡಲಿಲ್ಲ. ಉದ್ಯೋಗದಲ್ಲಿದ್ದಾಗಲೇ (2002) ಬೆಂಗಳೂರಲ್ಲಿ ರಂಗರತ್ನಾಕರ ಸಂಸ್ಥೆ ಆರಂಭಿಸಿ ‘ರಂಗಗೀತೆಗಳು’ ಎಂಬ ಕೃತಿ ಪ್ರಕಟಿಸಿದರು. ವೃತ್ತಿ ನಾಟಕಗಳ ಅದರಲ್ಲೂ ಪೌರಾಣಿಕ ನಾಟಕಗಳ ಹಾಡುಗಳನ್ನು ಸಂಗ್ರಹಿಸುವುದು ಮತ್ತು ಪ್ರಕಟಿಸುವುದು ಅವರ ಅತ್ಯಂತ ಪ್ರೀತಿಯ ಕೆಲಸ. ಇದರೊಂದಿಗೆ 25-30 ನಾಟಕಗಳು ಅವರಿಂದ ಮುದ್ರಣ/ಮರುಮುದ್ರಣಗೊಂಡಿವೆ. ರಾಮಾಯಣ, ಕೃಷ್ಣಲೀಲೆ, ದಾನಶೂರ ಕರ್ಣ, ಭೀಷ್ಮ ಪ್ರತಿಜ್ಞೆ, ರಾಮಾಂಜನೇಯರ ಯುದ್ಧ, ಶ್ರೀನಿವಾಸ ಕಲ್ಯಾಣ ಮೊದಲಾದ ನಾಟಕಗಳನ್ನು ಅವರು ಪ್ರಕಟಿಸಿದ್ದಾರೆ. ಇವೆಲ್ಲ ನಂಜನಗೂಡು ಶ್ರೀಕಂಠ ಶಾಸ್ತ್ರಿ, ಬೆಳ್ಳಾವೆ ನರಹರಿ ಶಾಸ್ತ್ರಿ, ಎಂ.ಎಂ.ರಾಮಸ್ವಾಮಿ ಮೊದಲಾದ ಹೆಸರಾಂತರ ನಾಟಕಗಳು ಅಲ್ಲದೆ ರಂಗಗೀತೆಗಳನ್ನು ಮೂರು ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ.

 ಮುಖ್ಯವಾಗಿ ಸಾವಿರ ಹಾಡುಗಳ 15 ಸಿ.ಡಿ.ಗಳನ್ನು ಆರ್. ಪರಮಶಿವನ್ ನೇತೃತ್ವದಲ್ಲಿ ನುರಿತ ಕಲಾವಿದರಿಂದ ಹಾಡಿಸಿ ಹೊರತಂದಿದ್ದಾರೆ. ಹೀಗೆಯೇ ರಂಗಗೀತೆಗಳ ಕುರಿತ ಸಮ್ಮೇಳನ, ಕಮ್ಮಟ, ಪೌರಾಣಿಕ ನಾಟಕಗಳ ರಂಗ ದೃಶ್ಯಾವಳಿಗಳ ಪ್ರದರ್ಶನವನ್ನು ಮೈಸೂರು, ಬೆಂಗಳೂರು, ತುಮಕೂರು, ಹಾಸನ ಮೊದಲಾದ ಜಿಲ್ಲೆಗಳಲ್ಲಿ ಆಯೋಜಿಸಿದ್ದಾರೆ. ಇಂತಹ ಗೌಡರು ಕಿರಗಸೂರು ರಾಜಪ್ಪ ಅವರೊಂದಿಗೆ ರಂಗಗೀತೆಗಳ ಕಾರ್ಯಕ್ರಮಗಳನ್ನು ನೀಡುತ್ತಾರೆ ಜೊತೆಗೆ ನಾಟಕಗಳಿಗೆ ಬಣ್ಣವನ್ನೂ ಹಚ್ಚುತ್ತಾರೆ. ರಾಮಾಯಣ, ಕುರುಕ್ಷೇತ್ರ, ರಾಜಸೂಯಯಾಗ ಮೊದಲಾದ ನಾಟಕಗಳ ದೈತ್ಯ ಪಾತ್ರಗಳಾದ ರಾವಣ, ದುರ್ಯೋಧನ, ಜರಾಸಂಧ ಮೊದಲಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ‘ಕನ್ನಡ ಕಾವ್ಯಗಳ ಗೆಜ್ಜೆನಾದ’ ಎಂಬ ಎರಡು ಸಂಪುಟಗಳನ್ನು ಪ್ರೊ.ಎ.ವಿ.ಸೂರ್ಯನಾರಾಯಣ ಸ್ವಾಮಿ ಅವರೊಂದಿಗೆ ಹೊರತಂದಿದ್ದಾರೆ. ಇದೆಲ್ಲ ಯಾಕಾಗಿ ಎಂದರೆ ‘ವೃತ್ತಿರಂಗಭೂಮಿಯ ಸಂಗೀತ ಮತ್ತು ಸಾಹಿತ್ಯದ ಉಳಿವಿಗಾಗಿ’ ಎನ್ನುವ ಅವರಂಥವರು ವಿರಳ. ಇಂತಹ ಗೌಡರು ಸದ್ಯ ‘ರಂಗಭೂಮಿ’ ಎಂಬ ಮಾಸಪತ್ರಿಕೆಯ 12 ವರ್ಷಗಳ ಅವಧಿಯ ವಿವಿಧ ಲೇಖಕರ 70 ಲೇಖನಗಳನ್ನು ಒಳಗೊಂಡ ಕೃತಿ ಪ್ರಕಟಿಸಿದ್ದಾರೆ. ಇದು ಅವರ ಎರಡು ವರ್ಷಗಳ ಶ್ರಮದ ಫಲ. ಈ ಕೃತಿಯಲ್ಲಿ 1925ರ ಸೆಪ್ಟಂಬರ್ ತಿಂಗಳಿಂದ 1938ರ ಆಗಸ್ಟ್ ತಿಂಗಳ ಸಂಚಿಕೆಗಳಿಂದ ಆಯ್ದ ಲೇಖನಗಳ ಸಂಗ್ರಹವಿದೆ. ಈ ಕೃತಿಯನ್ನು ಅವರು ತಮ್ಮ ಹನ್ಯಾಳು ಪ್ರಕಾಶನದ ಮೂಲಕ ಪ್ರಕಟಿಸಿದ್ದಾರೆ. ಎಚ್.ಎಸ್.ಉಮೇಶ್ ಅವರ ಮೌಲಿಕ ಮುನ್ನುಡಿಯನ್ನು ಒಳಗೊಂಡ ಈ ಕೃತಿ ಅಪರೂಪವಾದುದು. ಈ ಕೃತಿಯಲ್ಲಿ ಭಾರತೀಯ ನಾಟಕಗಳು, ಮೈಸೂರು ರಂಗಭೂಮಿಯ ಇತಿಹಾಸ, ಯಕ್ಷಗಾನ, ಉತ್ತರ ಕರ್ನಾಟಕ ರಂಗಭೂಮಿಯ ಇತಿಹಾಸ, ನಾಟಕದಲ್ಲಿ ನೋಡಬೇಕಾದುದೇನು? ಕರ್ನಾಟಕ ರಂಗಭೂಮಿಯ ಇತಿಹಾಸ, ಅಭಿನಯವೆಂದರೇನು? ನಾಂದಿಯು ಬೇಡವೆ?, ನಾಟಕದಲ್ಲಿ ಸಂಗೀತ, ಅಭಿನಯ, ಕರ್ನಾಟಕ ಅಭಿನಾಯಕರಲ್ಲಿ ಆಗಬೇಕಾದ ಕೆಲವು ಸುಧಾರಣೆಗಳು, ವಿನೋದವೆಂದರೇನು?, ಎ.ವಿ.ವರದಾಚಾರ್ಯರ ಚರಮ ಶ್ಲೋಕಾವಳಿ, ವೈಣಿಕ ಶಿಖಾಮನಿ ಶೇಷಣ್ಣನವರ ಚರಮ ಶ್ಲೋಕಾವಳಿ, ರಂಗಭೂಮಿಯ ಜೀರ್ಣೋದ್ಧಾರ, ನಾಟ್ಯ ಶಿಕ್ಷಣಕ್ಕೆ ಬೇರೆ ವಿದ್ಯಾನಿಲಯ ಬೇಕೆ?, ಕರ್ನಾಟಕ ರಂಗಭೂಮಿಯಲ್ಲಾಗಬೇಕಾದ ಸುಧಾರಣೆಗಳು, ಪಾತ್ರಗಳನ್ನು ಧರಿಸುವವರಿಗೆ ಕೆಲವು ಸಲಹೆಗಳು, ರಶ್ಯದ ರಂಗಭೂಮಿ, ಪ್ರಸಾಧನ, ರಂಗಸಂಗೀತ... ಹೀಗೆ ರಂಗಭೂಮಿ ಕುರಿತ ಅಪರೂಪದ ಲೇಖನಗಳಿವೆ. ಇವುಗಳನ್ನು ದೇವುಡು ನರಸಿಂಹ ಶಾಸ್ತ್ರಿ, ಅ.ನ.ಕೃಷ್ಣರಾವ್, ಬೆಳ್ಳಾವೆ ನರಹರಿಶಾಸ್ತ್ರಿಗಳು, ವಿದ್ವಾನ್ ನಂಜುಂಡಶಾಸ್ತ್ರಿಗಳು, ಎಂ.ನಾಗೇಶಾಚಾರ್ಯ, ಸಿ.ಆನಂದರಾವ್ ಮೊದಲಾದವರು ಬರೆದಿದ್ದಾರೆ. ‘ಭಾರತೀಯ ನಾಟಕಗಳು’ ಕುರಿತು ಬರೆದ ಎಂ.ನಾಗೇಶಾಚಾರ್ಯ ಅವರು ‘‘ಅಭಿನಯಿಸಲ್ಪಡುತ್ತಿರುವ ಆಯಾ ರಸಭಾವಗಳು ಪ್ರೇಕ್ಷಕರಲ್ಲಿ ಉತ್ಪನ್ನವಾಗಿ ನಾಟಕದ ವಿಷಯವು ಪ್ರೇಕ್ಷಕರ ಮನಸ್ಸಿಗೆ ಹತ್ತಬೇಕೆಂಬುದೇ ನಾಟಕಾಭಿನಯದ ಮುಖ್ಯ ಉದ್ದೇಶ. ಕೇವಲ ಮನರಂಜನೆಯೇ ನಾಟಕಾಭಿನಯದ ಮುಖ್ಯ ಉದ್ದೇಶವಾಗಿರಕೂಡದು’’ ಎಂಬ ಸಲಹೆ ಎಂದಿಗೂ ಸಲ್ಲುವಂಥದ್ದು. ರಂಗಭೂಮಿ ಎಂದರೇನು ಕುರಿತು ಮೈಸೂರಿನ ರತ್ನಾವಳಿ ಥಿಯೇಟ್ರಿಕಲ್ ಕಂಪೆನಿಯ ಎಂ.ಬೋಧರಾವ್ ಅವರು ‘‘ಅಜ್ಞಾನಂಧಕಾರ ಮಗ್ನರಾದವರನ್ನು ಸುಜ್ಞಾನದ ಬೆಳಕಿಗೆ ತಂದಿಡುವುದೇ ರಂಗಭೂಮಿ. ರಸಿಕರ ರಸಾಸ್ವಾದನೆಗೂ, ಸರಸಿಗಳ ಸೌಖ್ಯಾಭಿವೃದ್ಧಿಗೂ ದುರ್ವ್ಯಸನಿಗಳ ವಿವೇಕೋದಯಕ್ಕೂ ಸಾಮಾನ್ಯರ ಜ್ಞಾನ ಸಂಪಾದನೆಗೂ ಅವಕಾಶ ಮಾಡಿಕೊಡುವುದೇ ರಂಗಭೂಮಿ. ಅಲ್ಲದೆ ಚಂಚಲವಾದ ಮನವನ್ನು ಹೃದಯ ಪಂಜರದಲ್ಲಿ ಬಿಗಿದು ಸರ್ವಶಕ್ತನಲ್ಲಿ ಐಕ್ಯಗೊಳಿಸುವ ಯೋಗಿಯಂತೆ, ಸರ್ವರ ಕಣ್ಮನಗಳಿಗೆ ಸಮಾನ ಕಾಲದಲ್ಲಿ ಐಕ್ಯಸ್ಥಿತಿಯನ್ನುಂಟು ಮಾಡುವ ಸಿದ್ಧ ಸಾಧನವೇ ರಂಗಭೂಮಿ’’ ಎಂದಿರುವುದು ಅರ್ಥಪೂರ್ಣ. 

ಇಂತಹ ಅಪರೂಪದ ಕೃತಿ ಸಂಗ್ರಹಿಸಿರುವ, ಪೌರಾಣಿಕ ರಂಗಭೂಮಿ ಕುರಿತೇ ಧ್ಯಾನಿಸುವ ಗೋವಿಂದಗೌಡರು (9845861887) ಪ್ರಚಾರ ಬಯಸದ ವಿರಳರು. 

Similar News