ಕಾರ್ಕಳ: ಮನೆಯಲ್ಲಿ ಕಳವು
ಕಾರ್ಕಳ: ಮನೆಯ ಮುಂಬಾಗಿಲು ಒಡೆದು ಕಪಾಟುಗಳನ್ನು ತೆರೆದು ಬಟ್ಟೆ ಬರೆಗಳನ್ನು ಹಾಗೂ ಇತರೆ ವಸ್ತುಗಳನ್ನು ಕಳ್ಳರು ಚೆಲ್ಲಾಪಿಲ್ಲಿ ಮಾಡಿರುವ ಘಟನೆ ಕಾರ್ಕಳ ತಾಲೂಕು ಮಿಯಾರು ಗ್ರಾಮದ ಜೋಡುಕಟ್ಟೆ ಎಂಬಲ್ಲಿ ನಡೆದಿದೆ.
ರಮಣಿ ಎಂ ಎನ್ನುವವರ ಮನೆ ಇದಾಗಿದ್ದು ಅವರು ಹಾಗೂ ಮನೆಯವರು ಅಮೇರಿಕಾದಲ್ಲಿ ವಾಸವಾಗಿದ್ದು, ವರ್ಷದ ಹಿಂದೆ ಊರಿಗೆ ಬಂದು ಹೋಗಿದ್ದರು. ಸಂಬಂಧಿಗಳು ಆಗಾಗ್ಗೆ ಮನೆಗೆ ತೆರಳಿ ನೋಡಿಕೊಂಡು ಬರುತ್ತಿದ್ದರು. ಈ ಮಧ್ಯೆ ಜ.5ರಂದು ತೋಟದ ಕೆಲಸಕ್ಕೆ ಹೋದ ವ್ಯಕ್ತಿ ಮನೆಯ ಮುಂದಿನ ಬಾಗಿಲು ಒಡೆದ ಬಗ್ಗೆ ತಿಳಿಸಿದ್ದು, ಸಂಬಂಧಿಕರು ಮನೆಗೆ ಬಂದು ನೋಡಿದಾಗ ಮನೆಯ ಮುಂಬಾಗಿಲು ಒಡೆದು ಹಾನಿಯಾಗಿದ್ದು, ಮನೆಯ ಒಳಗಿನ ಕಪಾಟುಗಳನ್ನು ತೆರೆದು ಬಟ್ಟೆ ಬರೆಗಳನ್ನು ಮತ್ತು ವಸ್ತುಗಳನ್ನು ಯಾರೋ ಕಳ್ಳರು ಚೆಲ್ಲಾಪಿಲ್ಲಿ ಮಾಡಿರುವುದು ಕಂಡು ಬಂದಿದೆ.
ಈ ಬಗ್ಗೆ ಅಮೇರಿಕಾದಲ್ಲಿರುವ ತನ್ನ ದೊಡ್ಡಮ್ಮ ರಮಣಿ ಅವರಿಗೆ ವಿಚಾರ ತಿಳಿಸಿದ್ದು, ಮನೆಯಲ್ಲಿ ಯಾವ ಯಾವ ವಸ್ತುಗಳು ಕಳವಾಗಿರುವ ಬಗ್ಗೆ ಅವರು ಬಂದು ಪರಿಶೀಲಿಸಿ ಹೇಳುವುದಾಗಿ ತಿಳಿಸಿದ್ದಾರೆಂದು ಹರೀಶ್ ಕರ್ಕೇರಾ ಎನ್ನುವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.