ಕೊಲ್ಲೂರಿನ ಹಾಲ್ಕಲ್‌ನಲ್ಲಿ ’ಕರ್ನಾಟಕ ಹಕ್ಕಿ ಹಬ್ಬ: ಹಕ್ಕಿ ಹಬ್ಬದ ಮೂಲಕ ಸ್ಥಳೀಯ ಪಕ್ಷಿಗಳ ಪರಿಚಯ; ಸುಕುಮಾರ ಶೆಟ್ಟಿ
‘ಮಲಬಾರ್ ಟ್ರೋಗನ್’ ರಾಯಭಾರಿ ಹಕ್ಕಿಯಾಗಿ ಆಯ್ಕೆ
ಕೊಲ್ಲೂರು: ಕೊಲ್ಲೂರು ಅಭಯಾರಣ್ಯ ಸೇರಿದಂತೆ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿರುವ ಹಲವು ಬಗೆಯ ಅಪರೂಪದ ಹಕ್ಕಿಗಳ ಬಗ್ಗೆ ಹಕ್ಕಿ ಹಬ್ಬದ ಮೂಲಕ ನಾಡಿಗೆ ಪರಿಚಯಿಸುವ ಕಾರ್ಯ ನಡೆಯುತ್ತಿದ್ದು, ಇದೊಂದು ಮಾದರಿ ಕಾರ್ಯಕ್ರಮ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದ್ದಾರೆ.
ಕರ್ನಾಟಕ ಅರಣ್ಯಇಲಾಖೆ ಹಾಗೂ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಜನವರಿ 6ರಿಂದ 8ರವರೆಗೆ ಕೊಲ್ಲೂರಿನ ಹಾಲ್ಕಲ್‌ನಲ್ಲಿನಡೆಯುವ ‘ಕರ್ನಾಟಕ ಹಕ್ಕಿ ಹಬ್ಬ’ ಕಾರ್ಯಕ್ರಮ ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅರಣ್ಯ ಇಲಾಖೆ ಮೂಲಕ ಅರಣ್ಯ ರಕ್ಷಣೆ ಉತ್ತಮ ರೀತಿಯಲ್ಲಿ ನಡೆಯು ತ್ತಿದ್ದು, ಈ ಭಾಗದಲ್ಲಿ ಶೇ.95ರಷ್ಟು ಆರಣ್ಯ ಬೇಟೆ ಕಡಿಮೆಯಾಗಿದೆ. ಈ ಭಾಗದಲ್ಲಿರುವ ಬುಡಕಟ್ಟು ಸಮುದಾಯದ ಜನತೆಗೆ ಅರಣ್ಯ ಇಲಾಖೆಯ ಕಾನೂನುಗಳ ಮೂಲಕ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ. ಅರಣ್ಯ ವ್ಯಾಪ್ತಿಯ ಗ್ರಾಮಸ್ಥರಿಗೆ ಇಲಾಖೆಯ ಮೂಲಕ ಅರಣ್ಯ ರಕ್ಷಣೆ ಮತ್ತು ಪರಿಸರ ಜಾಗೃತಿ ಬಗ್ಗೆ ಮಾಹಿತಿ ನೀಡಬೇಕು. ಅಲ್ಲದೇ ಕೊಲ್ಲೂರು ರಸ್ತೆಯಲ್ಲಿ ಕಾಡುಪ್ರಾಣಿಗಳು ಅಡ್ಡ ಬರುವುದರಿಂದ ಅನೇಕ ಅಪಘಾತಗಳು ಸಂಭವಿ ಸುತ್ತಿದ್ದು, ಇದರ ತಡೆಗೆ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಫೆನ್ಸಿಂಗ್ ಅಳವಡಿಸುವಂತೆ ಕರೆ ನೀಡಿದರು.
ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಕಾರ್ಯಕಾರಿ ಸಮಿತಿ ಅಧ್ಯಕ್ಷ ಎಂ.ಮದನಗೋಪಾಲ್ ಮಾತನಾಡಿ, ರಾಜ್ಯದಲ್ಲಿ 9ನೇ ಬಾರಿ ‘ಹಕ್ಕಿ ಹಬ್ಬ’ ಉತ್ಸವ ನಡೆಯುತ್ತಿದ್ದು, ಈ ಭಾಗದಲ್ಲಿ ವಲಸೆ ಮತ್ತು ಸ್ಥಳೀಯ ಸುಮಾರು 300ಕ್ಕೂ ಹೆಚ್ಚು ಹಕ್ಕಿಗಳಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು ಎಂದರು.
ಸಮುದಾಯದ ಬೆಂಬಲವಿಲ್ಲದೆ ಪಕ್ಷಿಗಳ ರಕ್ಷಣೆ ಸಾಧ್ಯವಿಲ್ಲ. ಈ ಬಾರಿಯ ಹಕ್ಕಿಹಬ್ಬದಲ್ಲಿ ಮಲಬಾರ್ ಟ್ರೋಗನ್ ರಾಯಭಾರಿ ಹಕ್ಕಿಯನ್ನಾಗಿ ಆಯ್ಕೆ ಮಾಡಲಾಗಿದ್ದು, ರಾಜ್ಯ ಮತ್ತು ದೇಶದ ವಿವಿಧ ವನ್ಯಜೀವಿ ಛಾಯಾಗ್ರಾಹಕ ರು ಈ ಹಕ್ಕಿಹಬ್ಬದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಇದೇ ಸಂದರ್ಭ ಮಲಬಾರ್ ಟ್ರೋಗನ್ ಪಕ್ಷಿಯ ವಿವರಗಳಿರುವ ಪುಸ್ತಕ ಬಿಡುಗಡೆ ಮಾಡಲಾಯಿತು. ಜನವರಿ 8ರವರೆಗೆ ನಡೆಯುವ ಈ ಹಕ್ಕಿ ಹಬ್ಬ ಕಾರ್ಯಕ್ರಮದಲ್ಲಿ ಸ್ಥಳೀಯ ಮತ್ತು ವಲಸೆ ಹಕ್ಕಿಗಳ ವೀಕ್ಷಣೆ, ವಿಚಾರ ಗೋಷ್ಠಿಗಳು ನಡೆಯಲಿವೆ ಎಂದರು.
ಕಾರ್ಯಕ್ರಮದಲ್ಲಿ ಜಡ್ಕಲ್ ಗ್ರಾಪಂ ಅಧ್ಯಕ್ಷೆ ವನಜಾಕ್ಷಿ ಎಸ್ ಶೆಟ್ಟಿ, ಕೊಲ್ಲೂರು ಗ್ರಾಪಂ ಅಧ್ಯಕ್ಷ ಶಿವರಾಮ ಕೃಷ್ಣ ಭಟ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ) ಹಾಗೂ ಮುಖ್ಯ ಕಾರ್ಯ ನಿರ್ವಣಾ ಧಿಕಾರಿ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಕುಮಾರ ಪುಷ್ಕರ್, ಭದ್ರಾ ಹುಲಿ ಯೋಜನೆ ನಿರ್ದೇಶಕ ಪ್ರಭಾಕರನ್, ಉಪವಲಯ ಅರಣ್ಯಾಧಿಕಾರಿಗಳಾದ ಉದಯ ನಾಯಕ್, ದಿನೇಶ್, ಸತೀಶ್‌ಬಾಬಾ ರೈ, ಶ್ರೀಪತಿ, ಸಿದ್ದರಾಮಪ್ಪ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಕಳ ವನ್ಯಜೀವಿ ವಿಭಾಗದ ಡಿಎಫ್‌ಒ ಗಣಪತಿ ಸ್ವಾಗತಿಸಿದರು.