ಮ.ಪ್ರ: ಅತ್ಯಾಚಾರ ಸಂತ್ರಸ್ತೆ ಬಾಲಕಿಯ ಗರ್ಭಪಾತ ನಡೆಸಿದ ವೈದ್ಯನ ಬಂಧನ

Update: 2023-01-06 15:05 GMT

ಭೋಪಾಲ, ಜ. 6: ಅತ್ಯಾಚಾರ ಸಂತ್ರಸ್ತೆ ಬಾಲಕಿಯ ಗರ್ಭಪಾತ ನಡೆಸಿದ ಆರೋಪದಲ್ಲಿ ಪೊಲೀಸರು ವೈದ್ಯರೊಬ್ಬರನ್ನು ಭೋಪಾಲದಿಂದ ಗುರುವಾರ ಬಂಧಿಸಿದ್ದಾರೆ. ಆರೋಪಿ ವೈದ್ಯನನ್ನು ಡಾ. ಮಾಯಾಂಕ್ ಶ್ರೀವಾತ್ಸವ್ (BHMS) ಎಂದು ಗುರುತಿಸಲಾಗಿದೆ.

ಈತ ನಗರದಲ್ಲಿ ಕ್ಲಿನಿಕ್ ನಡೆಸುತ್ತಿದ್ದ. ಅತ್ಯಾಚಾರ ಆರೋಪಿ ಫೈಸಲ್ ಅಬ್ಬಾಸ್ ನನ್ನು ಈಗಾಗಲೇ ಬಂಧಿಸಲಾಗಿದೆ. ಈ ಪ್ರಕರಣದ ಕುರಿತಂತೆ ನಗರದ ಅಜಕ್ ಪೊಲೀಸ್ ಠಾಣೆಯಲ್ಲಿ 2022 ಡಿಸೆಂಬರ್ 13ರಂದು ಎಫ್ಐಆರ್ ದಾಖಲಿಸಲಾಗಿದೆ. ‘‘ಡಿಸೆಂಬರ್ 13ರಂದು ಎಫ್ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿದಾಗ 16 ವರ್ಷದ ಬಾಲಕಿಯ ಗರ್ಭಪಾತ ಮಾಡಿರುವುದು ಬೆಳಕಿಗೆ ಬಂತು. ತನಿಖೆಯನ್ನು ಮುಂದುವರಿಸಿದಾಗ ಬಿಎಸ್ಸಿ ಎಂಡಿ ಎಂಬ ಹೆಸರಿನಲ್ಲಿ ಕ್ಲಿನಿಕ್ ನಡೆಯುತ್ತಿರುವುದು ಪತ್ತೆಯಾಯಿತು’’ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತರಾದ ನಿಧಿ ಸಕ್ಸೇನಾ ಹೇಳಿದ್ದಾರೆ.

ಪೊಲೀಸರು ಕ್ಲಿನಿಕ್ ಗೆ ಬೀಗ ಮುದ್ರೆ ಹಾಕಿದ್ದಾರೆ ಹಾಗೂ ಆರೋಪಿ ವೈದ್ಯನನ್ನು ಬಂಧಿಸಿದ್ದಾರೆ. ಐಪಿಸಿ ಎಂಟಿಪಿ ಕಾಯ್ದೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ವೈದ್ಯನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Similar News