ವಿಮಾನದಲ್ಲಿ ಮೂತ್ರ ವಿಸರ್ಜಿಸಿದ 2ನೇ ಘಟನೆ ಕುರಿತು ವರದಿ ಸಲ್ಲಿಸುವಂತೆ ಏರ್ ಇಂಡಿಯಾಗೆ ಡಿಜಿಸಿಎ ಸೂಚನೆ
ಹೊಸದಿಲ್ಲಿ, ಜ.6: ವಿಮಾನದಲ್ಲಿ ಪಾನಮತ್ತ ಪ್ರಯಾಣಿಕನೊಬ್ಬ ಮಹಿಳಾ ಪ್ರಯಾಣಿಕರೊಬ್ಬರು ಹೊದ್ದುಕೊಂಡಿದ್ದ ಹೊದಿಕೆಯ ಮೇಲೆ ಮೂತ್ರವಿಸರ್ಜಿಸಿದ ಘಟನೆಯ ಬಗ್ಗೆ ವರದಿ ಸಲ್ಲಿಸುವಂತೆ ನಾಗರಿಕ ವಾಯುಯಾನ ಮಹಾನಿರ್ದೇಶನಾಲಯವು, ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾಕ್ಕೆ ಶುಕ್ರವಾರ ಸೂಚನೆ ನೀಡಿದೆ. ಕಳೆದ ವರ್ಷದ ಡಿಸೆಂಬರ್ 6ರಂದು ಪ್ಯಾರಿಸ್ ನಿಂದ ಹೊಸದಿಲ್ಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಈ ಘಟನೆ ನಡೆದಿತ್ತು. ಆದರೆ, ಏರ್ ಇಂಡಿಯಾ ಸಂಸ್ಥೆಯು ಈ ಬಗ್ಗೆ ಡಿಜಿಸಿಎಗೆ ಮಹಿತಿ ನೀಡಿಲ್ಲವೆಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆ ನಡೆದಿರುವುದನ್ನು ಏರ್ ಇಂಡಿಯಾ ಅಧಿಕಾರಿಗಳು ಗುರುವಾರ ದೃಢಪಡಿಸಿದ್ದರು.
‘‘ಡಿಸೆಂಬರ್ 6ರಂದು ಏರ್ ಇಂಡಿಯಾದ ಪ್ಯಾರಿಸ್-ದಿಲ್ಲಿ ವಿಮಾನವು ಬೆಳಗ್ಗೆ 9:40ರ ವೇಳೆಗೆ ವಿಮಾನನಿಲ್ದಾಣದಲ್ಲಿ ಬಂದಿಳಿದಿತ್ತು. ಮದ್ಯದ ಅಮಲಿನಲ್ಲಿದ್ದ ಪ್ರಯಾಣಿಕನೊಬ್ಬ ಕ್ಯಾಬಿನ್ ಸಿಬ್ಬಂದಿ ಸೂಚನೆಗಳನ್ನು ಲೆಕ್ಕಿಸದೆ ವರ್ತಿಸುತ್ತಿದ್ದ ಹಾಗೂ ಆನಂತರ ಆತ ಮಹಿಳೆಯೊಬ್ಬರ ಹೊದಿಕೆ ಮೇಲೆ ಮೂತ್ರ ವಿಸರ್ಜಿಸಿದ್ದ ’’ ಎಂದು ಏರ್ಇಂಡಿಯಾ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಘಟನೆಯ ಕುರಿತು ಆರಂಭದಲ್ಲಿ ಏರ್ ಇಂಡಿಯಾ ಸಂಸ್ಥೆಗೆ ಪ್ರಯಾಣಿಕಳು ದೂರು ನೀಡಿದ್ದರು. ಆದರೆ ಅವರು ಪೊಲೀಸರಿಗೆ ದೂರು ನೀಡಲು ನಿರಾಕರಿಸಿದ್ದರು. ಹೀಗಾಗಿ ಆ ಪ್ರಯಾಣಿಕನ ವಲಸೆ ಹಾಗೂ ಕಸ್ಟಮ್ಸ್ ನಿಯಮಗಳನ್ನು ಪೂರ್ತಿಯಾದ ಬಳಿಕ ವಿಮಾನನಿಲ್ದಾಣ ಸಿಬ್ಬಂದಿ ಆತನನ್ನು ಹೋಗಲು ಬಿಟ್ಟರು ಎಂದು ಮೂಲಳು ತಿಳಿಸಿವೆ.
ಹತ್ತು ದಿನಗಳಿಗೂ ಕಡಿಮೆ ಅವಧಿಯಲ್ಲಿ ಏರ್ಇಂಡಿಯಾ ವಿಮಾನದಲ್ಲಿ ಇಂತಹ ಘಟನೆ ನಡೆದಿರುವುದು ಇದು ಎರಡನೆ ಸಲವಾಗಿದೆ.
ನವೆಂಬರ್ 26ರಂದು ನ್ಯೂಯಾರ್ಕ್ನಿಂದ ಹೊಸ ದಿಲ್ಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮದ್ಯದ ನಶೆಯಲ್ಲಿದ್ದ ಪ್ರಯಾಣಿಕನೊಬ್ಬ, 70 ವರ್ಷ ವಯಸ್ಸಿನ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ಮಾಡಿದ್ದ.
ಈ ಘನೆ ಕೂಡಾ ಡಿಜಿಸಿಎಗೆ ವರದಿಯಾಗಿತ್ತು. ಈ ವಿಷಯವಾಗಿ ಸಂಸ್ಥೆಯ ವಾಯುಯಾನ ಸುರಕ್ಷತಾ ನಿರ್ದೇಶಕ ಹಾಗೂ ಘಟನೆ ನಡೆದ ವಿಮಾನದಲ್ಲಿದ್ದ ಸಿಬ್ಬಂದಿಗೆ ಅವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದೆಂದು ಕೇಳಿ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು.
ದೂರು ನೀಡದಂತೆ ಸಂತ್ರಸ್ತ ಮಹಿಳೆಯನ್ನು ಗೋಗರೆದಿದ್ದ ಪಾನಮತ್ತ ಪ್ರಯಾಣಿಕ
ಕಳೆದ ವರ್ಷದ ನವೆಂಬರ್ 26ರಂದು ನ್ಯೂಯಾರ್ಕ್ನಿಂದ ಹೊಸದಿಲ್ಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ವೃದ್ದೆಯೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ್ದ ಆರೋಪ ಎದುರಿಸುತ್ತಿರುವ ಪ್ರಯಾಣಿಕನು ಸಂತ್ರಸ್ತೆಯೊಂದಿಗೆ ಕ್ಷಮೆ ಯಾಚಿಸಿದ್ದನೆನ್ನಲಾಗಿದೆ ಹಾಗೂ ಈ ಘಟನೆಯಿಂದ ತನ್ನ ಪತ್ನಿ ಹಾಗೂ ಮಗು ಬಾಧಿತರಾಗುವುದರಿಂದ, ತನ್ನ ಮೇಲೆ ದೂರು ನೀಡದಂತೆ ಆತ ಅವರಿಗೆ ಗೋಗರೆದಿದ್ದನೆಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯು ಏರ್ಇಂಡಿಯಾಗೆ ಸಲ್ಲಿಸಿದ ದೂರನನ್ನು ಆಧರಿಸಿ ದಿಲ್ಲಿ ಪೊಲೀಸರು ಬುಧವಾರ ಆರೋಪಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ನವೆಂಬರ್ 26ರಂದು ನ್ಯೂಯಾರ್ಕ್ನಿಂದ ದಿಲ್ಲಿಗೆ ಪ್ರಯಾಣಿಸುತ್ತಿದ್ದ ಎಐ102 ವಿಮಾನದಲ್ಲಿ ರಾತ್ರಿ ವಿದ್ಯುದೀಪಗಳನ್ನು ಆರಿಸುತ್ತಿದ್ದಂತೆಯೇ,ಬ್ಯುಸಿನೆಸ್ ಕ್ಲಾಸ್ ಸೀಟಿನಲ್ಲಿ ಕುಳಿತಿದ್ದ ಪಾನಮತ್ತ ಪ್ರಯಾಣಿಕನೊಬ್ಬ ವೃದ್ಧೆಯೊಬ್ಬರು ಕುಳಿತಿದ್ದ ಸೀಟಿನ ಪಕ್ಕಕ್ಕೆ ಬಂದು, ಆಕೆಯ ಮೇಲೆ ಮೂತ್ರ ವಿಸರ್ಜಿಸಿದ್ದನು ಎಂದು ಎಫ್ಐಆರ್ನಲ್ಲಿ ದೂರಲಾಗಿದೆ.
ಮಹಿಳೆಯ ಪಕ್ಕದಲ್ಲೇ ಕುಳಿತಿದ್ದ ವ್ಯಕ್ತಿಯೊಬ್ಬ ಆತನಿಗೆ ಹಿಂದಕ್ಕೆ ಹೋಗುವಂತೆ ಹೇಳುವವರೆಗೆ ಆತ ಅಲ್ಲಿಯೇ ನಿಂತುಕೊಂಡಿದ್ದ, ಆನಂತರ ಆತ ತನ್ನ ಸೀಟಿನಲ್ಲಿ ಮುಗ್ಗರಿಸಿ ಬಿದ್ದನೆಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.