86ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಂಡ ಬೆರಗು-ಮೆರುಗು
ಹಾವೇರಿ, ಜ. 6: ಏಲಕ್ಕಿ ಕಂಪಿನ ನಗರಿ ಹಾವೇರಿಯಲ್ಲಿ ಕಸಾಪ ವತಿಯಿಂದ ಮೂರು ದಿನಗಳ ಕನ್ನಡ ತಾಯಿ ಭುವನೇಶ್ವರಿಯ ಆರಾಧನೆ ಕನ್ನಡ ಅಕ್ಷರ ಜಾತ್ರೆ ಅದ್ಧೂರಿಯಾಗಿ ಆರಂಭವಾಗಿದೆ. ಕನ್ನಡಿಗರನ್ನು ಒಗ್ಗೂಡಿಸುವ, ಸಾಹಿತ್ಯ ಕ್ಷೇತ್ರಕ್ಕೆ ಶಕ್ತಿ ನೀಡುವ ಈ ನುಡಿಹಬ್ಬಕ್ಕೆ ರಾಜ್ಯ, ದೇಶ ಮತ್ತು ವಿದೇಶಗಳಿಂದ ಕನ್ನಡಾಭಿಮಾನಿಗಳ ಸಾಗರವೇ ಹರಿದು ಬಂದಿದೆ.
ಕಳೆಗಟ್ಟಿದ ಕಲಾತಂಡಗಳು: ಕನ್ನಡಿಗರು ಮತ್ತು ಸಾಹಿತ್ಯಾಸಕ್ತರ ನೆನಪಿನಲ್ಲಿ ಉಳಿಯುವ ನಿಟ್ಟಿನಲ್ಲಿ ಸುಮಾರು 130 ಎಕರೆ ವಿಸ್ತೀರ್ಣದ ಜಾಗದಲ್ಲಿ ಕನಕ-ಶರೀಫ-ಸರ್ವಜ್ಞ ವೇದಿಕೆಯನ್ನು ನಿರ್ಮಿಸಿ ಕನ್ನಡ ನುಡಿಜಾತ್ರೆ ಆಯೋಜಿಸಲಾಗಿತ್ತು. ಜಿಲ್ಲೆ, ಹೊರ ಜಿಲ್ಲೆಗಳ ಸುಮಾರು 100ಕ್ಕೂ ಹೆಚ್ಚು ಕಲಾತಂಡಗಳ 1500ಕ್ಕೂ ಅಧಿಕ ಕಲಾವಿದರು ಮೆರವಣಿಗೆಯಲ್ಲಿ ಪಾಲ್ಗೊಂಡು ನಾಡಿನ ವಿವಿಧ ಭಾಗಗಗಳ ಕಲೆ ಮತ್ತು ಸಂಸ್ಕೃತಿಯನ್ನು ಅನಾವರಣಗೊಳಿಸಲಾಯಿತು.
ಹಾವೇರಿಯ ಪುರಸಿದ್ಧೇಶ್ವರ ದೇವಸ್ಥಾನದಿಂದ ಆರಂಭವಾದ ಕಲಾತಂಡಗಳ ಮೆರವಣಿಗೆ, ಎಂ.ಜಿ.ರಸ್ತೆ, ಗಾಂಧಿವೃತ್ತ, ಹೊಸಮನಿ ಸಿದ್ದಪ್ಪ ವೃತ್ತದ ಮೂಲಕ ಸಾಗಿ ಸಮ್ಮೇಳನದ ವೇದಿಕೆ ತಲುಪಿತು. ಮೆರವಣಿಗೆಯಲ್ಲಿ ವೀರಗಾಸೆ, ಪುರವಂತಿಕೆ, ಡೊಳ್ಳು, ಕರಡಿ ಮಜಲು, ಸೋಮನ ಕುಣಿತ, ಕಂಸಾಳೆ, ಜಗ್ಗಲಗಿ, ಜಾಂಜ್ ಮೇಳ, ಕೋಲಾಟ, ನಂದಿಕೋಲು ಕುಣಿತ, ಲಂಬಾಣಿ ನೃತ್ಯ, ನಗಾರಿ, ಬೇಡರ ವೇಷ ಸೇರಿದಂತೆ 6 ಸ್ತಬ್ದಚಿತ್ರಗಳು, ಜಿಲ್ಲೆಯ 50 ಕಲಾತಂಡಗಳು ಹಾಗೂ ವಿವಿಧ ಜಿಲ್ಲೆಗಳ 50 ತಂಡಗಳೊಂದಿಗೆ ವಿಶೇಷವಾಗಿ ಕೇರಳದ ಕಲಾ ತಂಡವೊಂದು ಭಾಗವಹಿಸಿ ಜನರ ಗಮನ ಸೆಳೆಯಿತು. ಅಲ್ಲz,É 20 ಸಾವಿರಕ್ಕೂ ಹೆಚ್ಚಿನ ಜನರು ಹಾಗೂ ಜಿಲ್ಲೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಕನ್ನಡ ಬಾವುಟಗಳನ್ನು ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಅವಧಿ ಮುಗಿದರೂ ನಿಲ್ಲದ ಗಾಯನ: ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಲಾ ತಂಡಗಳು ಸಮಯದ ಎಚ್ಚರಿಕೆಗೆ ಕಿವಿಗೊಡದೆ ಪ್ರದರ್ಶನ ನೀಡಿದ್ದರಿಂದ ಪ್ರತಿತಂಡಕ್ಕೆ 10 ನಿಮಿಷ ನೀಡುವ ಮೂಲಕ ಕಲಾ ತಂಡಗಳ ಸಮಯವನ್ನು ಕಡಿತ ಮಾಡಲಾಯಿತು. ಕಲಾವಿದರು ಸಮಯ ಮುಗಿದಿದ್ದರೂ ಗಾಯನ ಮುಗಿಸದೆ, ಕುಣಿತ, ಗೀತೆಯನ್ನು ಮುಂದುವರಿಸಿದ್ದರಿಂದ ಆಯೋಜಕರು ಪೇಚಿಗೆ ಸಿಲುಕಿ, ಪರಿ ಪರಿಯಾಗಿ ಮನವಿ ಮಾಡಿಕೊಂಡರು. 10 ನಿಮಿಷ ಪ್ರತಿ ತಂಡಗಳಿಗೆ ನೀಡಿದ್ದ ಸಮಯವನ್ನು ಕಡಿತ ಮಾಡಿ, 8 ನಿಮಿಷ ನೀಡಿದರು. ಆದರೂ ಕಲಾ ತಂಡಗಳು ನಿಲ್ಲಿಸದಿದ್ದರಿಂದ ಆಯೋಜಕರು ವೇದಿಕೆಗೆ ಬಂದು ಮೈಕ್ ಕಸಿದರು.
ರಿಯಾಯಿತಿ ಪುಸ್ತಕ ಮಳಿಗೆಗಳು: ಸಮ್ಮೇಳನದಲ್ಲಿ 100ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳನ್ನು ಸ್ಥಾಪಿಸಿದ್ದು, ಸಮ್ಮೇಳನದ ಮೊದಲ ದಿನವೆ ಜನಜಾತ್ರೆ ಅಲ್ಲಿ ಸೇರಿತ್ತು. ರಾಜ್ಯದ 20ಕ್ಕೂ ಹೆಚ್ಚು ಪ್ರತಿಷ್ಠಿತ ಪುಸ್ತಕ ಪ್ರಕಾಶನ ಸಂಸ್ಥೆಗಳು ಪುಸ್ತಕಗಳಿಗೆ ಶೇ.10ರಿಂದ 60ರ ವರೆಗೆ ರಿಯಾಯಿತಿ ನೀಡಿ, ಸಾಹಿತ್ಯಾಸಕ್ತರು ಸುಲಭ ದರದಲ್ಲಿ ಪುಸ್ತಕಗಳನ್ನು ಕೊಳ್ಳಲು ಸಹಕಾರಿಯಾಗಿದ್ದವು.
ಸಾಹಿತ್ಯ, ಕಲೆ, ಸಾಂಸ್ಕೃತಿಕ, ಮಾನವೀಕ, ಸ್ಪರ್ಧಾತ್ಮಕ... ಹೀಗೆ ತರಹೇವಾರಿ ವಿಷಯಗಳ ಪುಸ್ತಕಗಳು ಲಭ್ಯವಿದ್ದವು. ಈ ಹಿಂದಿನ ಯಾವ ಸಮ್ಮೇಳನಗಳಲ್ಲಿಯೂ ಕಾಣದಷ್ಟು ಜನ ಜಂಗುಳಿ ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಕಂಡಿದ್ದು, ಮಳಿಗೆ ಮಾಲೀಕರ ಖುಷಿಗೆ ಕಾರಣವಾಗಿದೆ. ಊಟಕ್ಕೆ ಜನಜಾತ್ರೆ, ಪುಸ್ತಕ ಕೊಳ್ಳಲು ಯಾರೂ ಇಲ್ಲ ಎಂಬ ಮಾತು ಈ ಸಮ್ಮೇಳನದಲ್ಲಿ ಹುಸಿಯಾಗಿತ್ತು. ಸಮ್ಮೇಳನಕ್ಕೆ ಈ ಮಳಿಗೆಗಳೇ ತೋರಣದಂತೆ ಕಳೆಗಟ್ಟಿವೆ ಎನ್ನಬಹುದು.
ಸಾಹಿತ್ಯ ಪ್ರಿಯರು ಪ್ರಮುಖವಾಗಿ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಪುಸ್ತಕ ಪ್ರೇಮಿಗಳು ಪುಸ್ತಕ ಮಳಿಗೆಗಳ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪುಸ್ತಕ ಖರೀದಿಸುತ್ತಿದ್ದುದು ಈ ಸಮ್ಮೇಳನದಲ್ಲಿ ಪುಸ್ತಕ ಖರೀದಿ ಜೋರಾಗಿಯೇ ನಡೆಯುವುದರ ಸಂಕೇತವಾಗಿ ಕಂಡಿದೆ. ಈ ಪುಸ್ತಕ ಮಳಿಗೆಗಳಲ್ಲಿ ಸುಮಾರು 60ಕ್ಕೂ ಹೆಚ್ಚು ದೊಡ್ಡ ಮಳಿಗೆಗಳಿದ್ದು, ಹೆಸರಾಂತ ಪ್ರಕಾಶನ ಸಂಸ್ಥೆಗಳು, ಧಾರ್ಮಿಕ ಪುಸ್ತಕ ಪ್ರಕಾಶನ ಸಂಸ್ಥೆಗಳು, ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷಾ, ಜ್ಞಾನ ಮಂಜರಿಗಳ ಪ್ರಕಾಶಕರು, ಕೃಷಿ, ಯೋಗ, ಶಿಕ್ಷಣ, ಮಕ್ಕಳ ಸಾಹಿತ್ಯ, ವಚನ, ದಾಸ ಹಾಗೂ ದಲಿತ ಸಾಹಿತ್ಯ ಸೇರಿದಂತೆ ಹತ್ತು ಹಲವು ಸಾಹಿತ್ಯ ಪ್ರಕಾರಗಳಿಗಾಗಿಯೇ ಮೀಸಲಿರುವ ಪ್ರಕಾಶನ ಸಂಸ್ಥೆಗಳು ಹಾಗೂ ಸಣ್ಣ ಪುಟ್ಟ ನೂರಾರು ಪ್ರಕಾಶಕರು, ಬುಕ್‍ಸ್ಟಾಲ್‍ನವರು ಪಾಲ್ಗೊಂಡಿದ್ದಾರೆ.
ಪುಸ್ತಕ ಪ್ರಕಾಶಕರು ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದು, ಅದರಲ್ಲಿ ಬೆಂಗಳೂರಿನ ಸಪ್ನ ಬುಕ್ ಹೌಸ್, ನವ ಜೋತಿ ಪ್ರಕಾಶನ, ವಿಜಯಪುರದ ಪ್ರಿಯದರ್ಶಿನಿ ಪ್ರಕಾಶನ, ನವಕರ್ನಾಟಕ ಪ್ರಕಾಶನ, ಗದುಗಿನ ಲಡಾಯಿ ಪ್ರಕಾಶನ, ಸಾವಣ್ಣ ಪ್ರಕಾಶ, ಆಕಾರ ಪ್ರಕಾಶನ, ಗೌರಿ ಮೀಡಿಯಾ ಪ್ರಕಾಶನ, ಶಿವಮೊಗ್ಗದ ಚಿರಂತನ ಬುಕ್ ಹೌಸ್, ಅಭಿರುಚಿ ಪ್ರಕಾಶನ ಮೈಸೂರು, ಕಲಬುರಗಿಯ ಸ್ನೇಹ ಪ್ರಕಾಶನ, ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಪ್ರಮುಖವಾಗಿ ಕಂಡು ಬಂದವು. ಹಲವು ವಿಶ್ವವಿದ್ಯಾಲಯಗಳ ಪುಸ್ತಕ ಪ್ರದರ್ಶನದಲ್ಲಿ ಕಡಿಮೆ ಬೆಲೆಯ ಅವತರಣಿಕೆಗಳು ಪುಸ್ತಕ ಪ್ರಿಯರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿವೆ. ಬಸವಣ್ಣ, ಕನಕದಾಸರು, ಡಾ. ಅಂಬೇಡ್ಕರ್, ಫರೀಪರು, ಕುವೆಂಪು, ಲಂಕೇಶ್ ಸೇರಿದಂತೆ ಹಲವರ ಸಮಗ್ರ ಸಂಪುಟಗಳನ್ನು ಒಳಗೊಂಡ ಪುಸ್ತಕಗಳ ಮಾರಾಟ ಜೋರಾಗಿತ್ತು.
ವಸ್ತು ಪ್ರದರ್ಶನಕ್ಕೆ ಮುಗಿಬಿದ್ದ ಯುವಜನತೆ: ವಾರ್ತಾಇಲಾಖೆ, ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆಗಳಿಂದ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಅಲ್ಲದೆ, ನಟ ಡಾ.ರಾಜ್‍ಕುಮಾರ್ ಅವರ ಕಲಾಕೃತಿ, ಜ್ಞಾನಪೀಠ ಪುರಸ್ಕøತ ಕವಿಗಳ ಕಲಾಕೃತಿ, ನಟ ಪುನೀತ್ ರಾಜ್‍ಕುಮಾರ್ ಅವರ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆದವು. ವಸ್ತು ಪ್ರದರ್ಶನಗಳು, ಮಹನೀಯರ ಕಲಾಕೃತಿಗಳು ಹೆಚ್ಚು ಯುವಜನರ ಸೆಳೆದು ಸೆಲ್ಫಿಗಳಿಗೆ ದುಂಬಾಲು ಬಿದ್ದಿದ್ದರು. ಇವರನ್ನು ನಿಭಾಯಿಸುವಲ್ಲಿ ಪೊಲೀಸರು ಹರಸಾಹಸ ಪಟ್ಟ ದೃಶ್ಯಗಳು ಕಂಡು ಬಂದವು.
ಸಮ್ಮೇಳನದ ಅಂಗವಾಗಿ ಎಲ್ಲಾ ಶಾಲೆ ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ರಜೆ ನೀಡಿದ್ದರಿಂದ ಸಾರ್ವಜನಿಕರು ತಮ್ಮ ಮಕ್ಕಳು, ಬಂಧುಗಳ ಸಮೇತ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿ, ಖುಷಿಯಾಗಿ ಎಲ್ಲ ಮಳಿಗೆ, ಪ್ರದರ್ಶನಗಳನ್ನು ಆಸಕ್ತಿಯಿಂದ ವೀಕ್ಷಿಸುವ ಮೂಲಕ ಸಮ್ಮೇಳನದ ಮೊದಲ ದಿನ ಉತ್ತಮವಾಗಿ ನಡೆಯಿತು.
ಕುರಿಗಂಬಳಿ-ಉಣ್ಣೆ ಬಟ್ಟೆಗಳದ್ದೆ ಕಾರುಬಾರು: ಸಮ್ಮೇಳನದಲ್ಲಿ ಕಲಾ ತಂಡಗಳಷ್ಟೇ ಹೆಚ್ಚು ಗಮನ ಸೆಳೆಯುವ ಮತ್ತೊಂದು ಅಂಶವೆಂದರೆ ಅದು ಕುರಿ ಕಂಬಳಿ ಮತ್ತು ಉಣ್ಣೆ ಬಟ್ಟೆಗಳು. ಇವುಗಳ ಮಾರಾಟದ ಅಬ್ಬರ ಸಮ್ಮೇಳನದಲ್ಲಿ ಜೋರಾಗಿತ್ತು. ಕಂಬಳಿ, ಉಣ್ಣೆಬಟ್ಟೆಗಳ ಮಳಿಗೆಗಳ ಮುಂದೆ ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು.