ಸಂಸದ ಅಸದುದ್ದೀನ್ ಉವೈಸಿಯಿಂದ ಎರಡು ಕ್ಷೇತ್ರಗಳ ಮತಪಟ್ಟಿಯಲ್ಲಿ ನೋಂದಣಿ: ಕಾಂಗ್ರೆಸ್ ಆರೋಪ

Update: 2023-01-07 05:54 GMT

ಹೈದರಾಬಾದ್: ಎಐಎಂಐಎಂ (AIMIM) ಮುಖಂಡ ಹಾಗೂ ಸಂಸದ ಅಸದುದ್ದೀನ್ ಉವೈಸಿ (Asaduddin Owaisi) ಅವರು ಎರಡು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಮತಪಟ್ಟಿಗಳಲ್ಲಿ ತಮ್ಮ ಹೆಸರು ನೋಂದಾಯಿಸಿದ್ದು, ಇದು ಭಾರತೀಯ ಚುನಾವಣಾ ಆಯೋಗದ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ (Congress) ನಾಯಕ ಜಿ. ನಿರಂಜನ್ ಆರೋಪಿಸಿದ್ದಾರೆ ಎಂದು aninews.in ವರದಿ ಮಾಡಿದೆ.

ಈ ಕುರಿತು ಜನವರಿ 5ರಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಪತ್ರ ಬರೆದಿರುವ, ಎಐಸಿಸಿ ಸದಸ್ಯರೂ ಆದ ಜಿ.ನಿರಂಜನ್, ಸಂಸದ ಅಸದುದ್ದೀನ್ ಉವೈಸಿ ತಮ್ಮ ಹೆಸರನ್ನು ಎರಡು ವಿಧಾನಸಭಾ ಕ್ಷೇತ್ರಗಳ ಮತಪಟ್ಟಿಯಲ್ಲಿ ನೋಂದಾಯಿಸಿದ್ದು, ಇದು ಚುನಾವಣಾ ಆಯೋಗದ ನಿಯಮಗಳಿಗೆ ವಿರುದ್ಧವಾಗಿದೆ. ಅಸದುದ್ದೀನ್ ಉವೈಸಿ ಅವರು ರಾಜೇಂದ್ರ ನಗರ ಮತ್ತು ಖೈರತಾಬಾದ್ ವಿಧಾನಸಭಾ ಕ್ಷೇತ್ರಗಳ ಮತಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿದ್ದಾರೆ ಎಂದು ದೂರಿದ್ದಾರೆ.

ಇದು ಸಂಸದರೊಬ್ಬರ ಹೊಣೆಗೇಡಿತನ ಮತ್ತು ಅಂತಿಮ ಮತದಾರರ ಪಟ್ಟಿ ಪ್ರಕಟಿಸುವಲ್ಲಿನ ಚುನಾವಣಾ ಯಂತ್ರಾಂಗದ ಉಪೇಕ್ಷೆಯನ್ನು ತೋರಿಸುತ್ತದೆ ಎಂದು ಅವರು ಕಿಡಿ ಕಾರಿದ್ದಾರೆ.

ಜಿ. ನಿರಂಜನ್ ಅವರು ತಮ್ಮ ಪತ್ರದೊಂದಿಗೆ ಎರಡೂ ಕ್ಷೇತ್ರಗಳ ಮತಪಟ್ಟಿಯನ್ನು ಲಗತ್ತಿಸಿದ್ದು, ಆ ಮತಪಟ್ಟಿಯನ್ನು ತಾನು ಭಾರತೀಯ ಚುನಾವಣಾ ಆಯೋಗದ ಅಂತರ್ಜಾಲ ತಾಣದಿಂದ ಡೌನ್ ಲೋಡ್ ಮಾಡಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದ ಶಂಕರ್ ಮಿಶ್ರಾನನ್ನು ಬಂಧಿಸಿದ ದಿಲ್ಲಿ ಪೊಲೀಸರು

Similar News