ವಿಮಾನದಲ್ಲಿ ವೃದ್ಧ ಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜನೆ ಪ್ರಕರಣ ಆರೋಪಿಗೆ 14 ದಿನಗಳ ನ್ಯಾಯಾಂಗ ಕಸ್ಟಡಿ

Update: 2023-01-07 15:29 GMT

ಹೊಸದಿಲ್ಲಿ, ಜ.7: ಏರ್ ಇಂಡಿಯಾ ವಿಮಾನದಲ್ಲಿ ವಯೋವೃದ್ಧ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣದ ಆರೋಪಿ ಶಂಕರ್ ಮಿಶ್ರಾನಿಗೆ ಸ್ಥಳೀಯ ನ್ಯಾಯಾಲಯವು ಶನಿವಾರ 14 ದಿನಗಳ ನ್ಯಾಯಾಂಗ ಕಸ್ಟಡಿ ವಿಧಿಸಿದೆ. ಘಟನೆಯು ಬೆಳಕಿಗೆ ಬರುತ್ತಿದ್ದಂತೆಯೇ ಆತ ತಲೆಮರೆಸಿಕೊಂಡಿದ್ದ. ಮೊಬೈಲ್ ಪೋನ್ ಕರೆಯ ಮೂಲಕ ಮಿಶ್ರಾನ ಜಾಡನ್ನು ಪತ್ತೆಹಚ್ಚಿದ ದಿಲ್ಲಿ ಪೊಲೀಸರು ಆತನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ನ್ಯೂಯಾರ್ಕ್ ನಿಂದ ಹೊಸದಿಲ್ಲಿಗೆ ನವೆಂಬರ್ 26ರಂದು ಪ್ರಯಾಣಿಸಿದ್ದ ವಿಮಾನದಲ್ಲಿ ಈ ಘಟನೆ ನಡೆದಿತ್ತು. ಪಾನಮತ್ತನಾಗಿ ಮಿಶ್ರಾ ವಿಮಾನದಲ್ಲಿ ವಿದ್ಯುದ್ದೀಪ ಆರಿಸಿದ್ದ ವೇಳೆ, 70 ವರ್ಷ ವಯಸ್ಸಿನ ಮಹಿಳಾ ಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ.

ಈ ಘಟನೆಯ ಬಗ್ಗೆ ವಿಮಾನದ ಕ್ಯಾಬಿನ್ ಸಿಬ್ಬಂದಿ ಅತ್ಯಂತ ಅಸಂವೇದನೆಯಿಂದ ವರ್ತಿಸಿರುವುದು ತನಗೆ ಹತಾಶೆಯುಂಟು ಮಾಡಿದೆಯೆಂದು ಸಂತ್ರಸ್ತ ಮಹಿಳೆ ಟಾಟಾ ಸಮಹದ ಚೇರ್ಮನ್ ಎನ್.ಚಂದ್ರಶೇಖರನ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಮಿಶ್ರಾ ಉದ್ಯೋಗದಲ್ಲಿದ್ದ ಅಮೆರಿಕದ ವೆಲ್ಸ್ಫಾರ್ಗೊ ಕಂಪೆನಿ ಕೂಡಾ ಆತನನ್ನು ಸೇವೆಯಿಂದ ವಜಾಗೊಳಿಸಿದೆ. ಶಂಕರ್ ಮಿಶ್ರಾ ವೆಲ್ಸ್ಫಾರ್ಗೊದ ಭಾರತೀಯ ವಿಭಾಗದ ಉಪಾಧ್ಯಕ್ಷನಾಗಿದ್ದನು.

ಈ ಮಧ್ಯೆ ಮಿಶ್ರಾನಿಗೆ ಏರ್ಇಂಡಿಯಾ 30 ದಿನಗಳ ಪ್ರಯಾಣ ನಿಷೇಧವನ್ನು ವಿಧಿಸಿದೆ. ಈ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಮಾನದ ಸಿಬ್ಬಂದಿವರ್ಗದಿಂದ ಏನಾದರೂ ಲೋಪಗಳಾಗಿವೆಯೇ ಎಂಬ ಬಗ್ಗೆ ಏರ್ ಇಂಡಿಯಾ ತನಿಖೆಯನ್ನು ಆರಂಭಿಸಿದೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಶಂಕರ್ ಮಿಶ್ರಾ ತಲೆಮರೆಸಿಕೊಂಡಿದ್ದ. ಕೆಲವು ದಿನಗಳಿಂದ ಆತ ಚಲನವಲನಗಳನ್ನು ಭೌತಿಕವಾಗಿ, ಇಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ವಿಧಾನಗಳಿಂದ ನಿಗಾವಿರಿಸಿದ ಪೊಲೀಸರು ಆತನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಆರೋಪಿ ಶಂಕರ್ ಮಿಶ್ರಾ ವಿರುದ್ಧ ಭಾರತೀಯ ದಂಡ ಸಂಹಿತೆಯ 294 (ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ), 354 ( ಮಹಿಳೆಯ ಘನತೆಗೆ ಭಂಗತರುವಂತಹ ರೀತಿಯಲ್ಲಿ ಹಲ್ಲೆ ಹಾಗೂ ಕ್ರಿಮಿನಲ್ ಶಕ್ತಿ ಬಳಕೆ), 509 (ಮಹಿಳೆಯ ಗೌರವಕ್ಕೆ ಕುಂದುಂಟುಮಾಡುವಂತಹ ಪದ ಬಳಕೆ, ಹಾವಭಾವ ಪ್ರದರ್ಶನ ಅಥವಾ ಕೃತ್ಯವನ್ನು ಎಸಗುವುದು) ಹಾಗೂ 510(ಪಾನಮತ್ತ ವ್ಯಕ್ತಿಯಿಂದ ಸಾರ್ವಜನಿಕ ಸ್ಥಳದಲ್ಲಿ ದುರ್ವರ್ತನೆ) ಸೆಕ್ಷನ್ಗಳು ಹಾಗೂ ಏರ್ಕ್ರಾಫ್ಟ್ ನಿಯಮಾವಳಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Similar News