ಶಾಲಾ ವಿದ್ಯಾರ್ಥಿಗೆ ಡಿಕ್ಕಿ ಹೊಡೆದು 1 ಕಿ.ಮೀ. ದೂರ ಎಳೆದೊಯ್ದ ಕಾರು; ಬಾಲಕನಿಗೆ ಗಂಭೀರ ಗಾಯ

Update: 2023-01-07 15:32 GMT

ಹೊಸದಿಲ್ಲಿ,ಜ.7: ದಿಲ್ಲಿಯ ಕಾಂಜಾವಾಲಾದಲ್ಲಿ ಕಳೆದ ವಾರ ಸಂಭವಿಸಿದ ಭಯಾನಕ ಅವಘಡವನ್ನು ಹೋಲುವಂತಹ ದುರಂತವೊಂದು ಶುಕ್ರವಾರ ಉತ್ತರಪ್ರದೇಶದ ಹಲ್ದೊಯಿ ಜಿಲ್ಲೆಯಲ್ಲಿ ವರದಿಯಾಗಿದ್ದು 15 ವರ್ಷದ ಶಾಲಾ ಬಾಲಕನೊಬ್ಬನಿಗೆ ಡಿಕ್ಕಿ ಹೊಡೆದ ಕಾರು, ಆತನನ್ನು ಒಂದು ಕಿಲೋ ಮೀಟರ್ ದೂರದವರೆಗೆ ಎಳೆದುಕೊಂಡುಹೋಗಿದ್ದು, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ.

ಮೃತ ಬಾಲಕನನ್ನು ಕೇತನ್ ಕುಮಾರ್ ಎಂದು ಗುರುತಿಸಲಾಗಿದೆ. 9ನೇ ತರಗತಿಯ ವಿದ್ಯಾರ್ಥಿಯಾದ ಆತ ಸೈಕಲ್ ನಲ್ಲಿ ಕೋಚಿಂಗ್ ಕ್ಲಾಸ್ ಗೆ ಹೋಗುತ್ತಿದ್ದಾಗ ವ್ಯಾಗನಾರ್ ಕಾರು ಡಿಕ್ಕಿ ಹೊಡೆದಿತ್ತು. ಕಾರು ಸೈಕಲ್ಗೆ ಬಲವಾಗಿ ಅಪ್ಪಳಿಸಿದ್ದರಿಂದ, ಆತನ ಕಾಲು ವಾಹನದ ಹಿಂಭಾಗಕ್ಕೆ ಸಿಕ್ಕಿಹಾಕಿಕೊಂಡಿತ್ತು.

ಅವಘಡದ ಬಳಿಕ ಸ್ಥಳದಿಂದ ಪರಾರಿಯಾಗುವ ಪ್ರಯತ್ನದಲ್ಲಿ ಚಾಲಕನು ಕಾರನ್ನು ಅತಿ ವೇಗದಿಂದ ಓಡಿಸಿದ್ದಾನೆ. ಕಾರನ್ನು ನಿಲ್ಲಿಸುವಂತೆ ಜನರು ಬೊಬ್ಬೆ ಹೊಡೆಯುತ್ತಿದ್ದರೂ ಆತ ನಿಲ್ಲಿಸಲಿಲ್ಲವೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬೀದಿಯಲ್ಲಿ ವೇಗವಾಗಿ ಸಾಗುತ್ತಿರುವ ಕಾರಿನಡಿಯಲ್ಲಿ ಸಿಲುಕಿಕೊಂಡಿದ್ದ ತನ್ನ ಕಾಲನ್ನು ಬಿಡಿಸಿಕೊಳ್ಳಲು ಕೇತನ್ ಯತ್ನಿಸುತ್ತಿರುವಂತೆಯೇ, ವಾಹನದ ಹಿಂದೆ ಜನರು ಓಡೋಡಿ ಬರುತ್ತಿರುವ, ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.

ಕೊನೆಗೂ ಜನದಟ್ಟಣೆಯ ಮಾರುಕಟ್ಟೆ ಪ್ರದೇಶದಲ್ಲಿ ಕಾರು ನಿಂತ ಬಳಿ ಕೇತನನ್ನು ರಕ್ಷಿಸಲಾಯಿತು. ಉದ್ರಿಕ್ತ ಗುಂಪು ಚಾಲಕನನ್ನು ಹಿಡಿದು, ಆತನನ್ನು ಲಾಠಿಗಳಿಂದ ಹಿಗ್ಗಾಮಗ್ಗಾ ಥಳಿಸಿತು ಹಾಗೂ ಕಾರನನ್ನು ಕೂಡಾ ಅವರು ಜಖಂಗೊಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಉದ್ರಿಕ್ತ ಗುಂಪಿನಿಂದ ಚಾಲಕನನ್ನು ರಕ್ಷಿಸಿದರು ಹಾಗೂ ಆತನನ್ನು ಬಂಧಿಸಿದ್ದಾರೆ.

ಈ ತಿಂಗಳಲ್ಲಿ ಇಂತಹ ಅವಘಡದ ಪ್ರಕರಣ ವರದಿಯಾಗಿರುವುದು ಇದು ಮೂರನ ಸಲವಾಗಿದೆ. ಎರಡು ದಿನಗಳ ಹಿಂದೆ ನೊಯ್ಡದಲ್ಲಿ ಡೆಲಿವರಿ ಏಜೆಂಟ್ ಒಬ್ಬಾತನ ದ್ವಿಚಕ್ರ ವಾಹನಕ್ಕೆ ಕಾರೊಂದು ಡಿಕ್ಕಿಹೊಡೆದು, ಅದು ಆತನನ್ನು 500 ಮೀಟರ್ ಎಳೆದುಕೊಂಡು ಹೋಗಿತ್ತು. ದಿಲ್ಲಿ ಕಾಂಜಿವಾಲಾದಲ್ಲಿ ಜನವರಿ 1ರಂದು ನಸುಕಿನಲ್ಲಿ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ , ಪಾನಮತ್ತ ಯುವಕರಿದ್ದ ಕಾರೊಂದುಜಿಕ್ಕಿ ಹೊಡೆದು, ವಾಹನದ ಕೆಳಬಾಗದಲ್ಲಿ ಸಿಕ್ಕಿಹಾಕಿಕೊಂಡ ಆಕೆಯನ್ನು 12 ಕಿ.ಮೀ.ವರೆಗೆ ಎಳೆದುಕೊಂಡು ಹೋಗಿದ್ದು, ಆಕೆ ಧಾರುಣವಾಗಿ ಮೃತಪಟ್ಟಿದ್ದಳು.

Similar News