×
Ad

ರಸ್ತೆ ಸುರಕ್ಷತೆ ಜಾಗೃತಿಗಾಗಿ ಮಂಗಳೂರಿನಲ್ಲಿ ಸೈಕ್ಲೋಥಾನ್

Update: 2023-01-08 18:16 IST

ಮಂಗಳೂರು:  ಶಾಲಾ ಮಕ್ಕಳು ಮತ್ತು ಅವರ ಪೋಷಕರಲ್ಲಿ ಸೈಕ್ಲಿಂಗ್ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು  ಮಂಗಳೂರು ನಗರದಲ್ಲಿ ರವಿವಾರ ಸೈಕ್ಲೋಥಾನ್ (ಸೈಕಲ್  ಜಾಥಾ ) ನಡೆಯಿತು.

ಮಂಗಳೂರಿನ ವೃತ್ತಿಪರ ಕ್ರೀಡಾ ಕ್ಲಬ್ ಆಗಿರುವ ವಿಆರ್ ಸೈಕ್ಲಿಂಗ್  ಆಶ್ರಯದಲ್ಲಿ  ನಡೆದ ಸೈಕ್ಲೋಥಾನ್ ನಲ್ಲಿ ಸಹಸ್ರಾರು  ಸೈಕ್ಲಿಸ್ಟ್‌ಗಳು ನಗರದಲ್ಲಿ ಸೈಕಲ್‌ಗಳಲ್ಲಿ ಸುತ್ತಾಡಿದರು. 

 ಬೆಳಗ್ಗೆ  ಮಂಗಳಾ ಕ್ರೀಡಾಂಗಣದಲ್ಲಿ ಸೈಕಲ್ ಜಾಥಾಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಚಾಲನೆ ನೀಡಿದರು. ಅವರು ಹಿಂದಿನ ರಾತ್ರಿ ಸೈಕಲ್ ಮೂಲಕ 200 ಕಿ.ಮೀ ಸವಾರಿ  ಮುಗಿಸಿ ಆಗಮಿಸಿದ್ದರು.   

ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಹೊಸ ವರ್ಷದ ಆರಂಭದಲ್ಲೇ ಫಿಟ್ನೆಸ್‌ಗಾಗಿ ಸೈಕಲ್  ಜಾಥಾ ಆಯೋಜಿಸಿದಕ್ಕಾಗಿ ಸಂಘಟಕರನ್ನು ಅಭಿನಂದಿಸಿದರು.

ಜಾಥಾಕ್ಕೆ  ಅಧಿಕೃತ ಚಾಲನೆ  ಬೆಳಗ್ಗೆ 7:15 ಆಗಿದ್ದರೂ, ವಿವಿಧ ಶಾಲೆಗಳ ಮಕ್ಕಳು, ಅವರ ಪೋಷಕರು ಮತ್ತು ಸಾಮಾನ್ಯ  ಸೈಕಲ್ ಸವಾರರು  ಬೆಳಿಗ್ಗೆ 5:30 ರಿಂದ ಮಂಗಳಾ ಸ್ಟೇಡಿಯಂ ಎದುರಿನ ಸ್ಟಾರ್ಟ್ ಪಾಯಿಂಟ್‌ನಲ್ಲಿ ಜಮಾಯಿಸಲು ಆರಂಭಿಸಿದ್ದರು.  ಬೆಳಗ್ಗೆ  6:30ರ ಹೊತ್ತಿಗೆ  ಅಲ್ಲಿಗೆ ತಲುಪಿದ ಸೈಕ್ಲಿಸ್ಟ್‌ಗಳ ಸಂಖ್ಯೆ 1,060ಕ್ಕೆ  ಏರಿತ್ತು.

ಮಂಗಳೂರು ನಗರ ಪೊಲೀಸ್ ಕಮಿಷನರ್  ಎನ್. ಶಶಿಕುಮಾರ್  ವೃತ್ತಿಪರ ಸೈಕ್ಲಿಂಗ್ ಉಡುಗೆಯನ್ನು ಧರಿಸಿ ತಮ್ಮ ಸೈಕಲ್‌ನಲ್ಲಿ  ಸೈಕ್ಲೋಥಾನ್‌ಗೆ  ಆಗಮಿಸಿದರು.  ಸಹಾಯಕ ಪೊಲೀಸ್ ಕಮಿಷನರ್ (ಸಂಚಾರ) ಗೀತಾ ಕುಲಕರ್ಣಿ, ಉದ್ಯಮಿ  ಮುಕುಂದ್ ಕಾಮತ್, ಕಶರ್ಪ್ ಫಿಟ್ನೆಸ್‌ನ  ಆನಂದ್ ಪ್ರಭು, ಹೀರೊ ಸೈಕಲ್ಸ್‌ನ ಏರಿಯಾ ಮ್ಯಾನೇಜರ್ ಇಮ್ತಿಯಾಝ್,  ತಾಜ್ ಸೈಕಲ್‌ನ  ಮಾಲಕ ಎಸ್.ಎಂ.ಮುತ್ತಲೀಬ್ ಸೇರಿಕೊಂಡರು.

ಬಳಿಕ ಸೈಕಲ್ ಸವಾರರು ಸೈಕಲ್‌ನಲ್ಲಿ ಲೇಡಿಹಿಲ್, ಮಹಾನಗರಪಾಲಿಕೆ  ಪಿವಿಎಸ್, ಬಂಟ್ಸ್ ಹಾಸ್ಟೆಲ್, ಜ್ಯೋತಿ  ಸರ್ಕಲ್, ಹಂಪನಕಟ್ಟೆ, ಕ್ಲಾಕ್ ಟವರ್, ಎಂಜಿ ರೋಡ್ ಲೇಡಿಹಿಲ್ ಮತ್ತು ಕೆನರಾ  ಸ್ಕೂಲ್ , ಉರ್ವ ಗ್ರೌಂಡ್ ತನಕ ಸಾಗಿದರು.

ಮಂಗಳೂರಿನ ಎಜೆ ಹಾಸ್ಪಿಟಲ್ಸ್ ಒದಗಿಸಿದ ಆ್ಯಂಬುಲೆನ್ಸ್  ಮತ್ತು ತಾಜ್ ಸೈಕಲ್ಸ್ ಒದಗಿಸಿದ ಇಲೆಕ್ಟ್ರಿಕ್ ಬ್ಯಾಕ್‌ಅಪ್ ವಾಹನವು ಸವಾರರ ಸುರಕ್ಷತೆಯನ್ನು ದೃಢಪಡಿಸಲು  ಜಾಥಾ ಕೈಗೊಂಡಿರುವ  ಸೈಕಲ್ ಸವಾರರನ್ನು ಹಿಂಬಾಲಿಸಿತು.

ವಿವಿಧ ಜಂಕ್ಷನ್‌ಗಳಲ್ಲಿ ನಿಂತಿದ್ದ 50ಕ್ಕೂ ಅಧಿಕ  ಸ್ವಯಂಸೇವಕರು ಸೈಕಲಿಸ್ಟ್‌ಗಳಿಗೆ  ಮಾರ್ಗದಲ್ಲಿ ಮಾರ್ಗದರ್ಶನ ನೀಡಿದರು. 

ಸಮಾರೋಪದಲ್ಲಿ ಮಾತನಾಡಿದ  ಎಸಿಪಿ  ಗೀತಾ ಕುಲಕರ್ಣಿ, ಸುರಕ್ಷಿತ ಸೈಕ್ಲಿಂಗ್‌ನೊಂದಿಗೆ, ಪ್ರತಿಯೊಬ್ಬರೂ ರಸ್ತೆ ಸುರಕ್ಷತಾ ನಿಯಮಗಳನ್ನು ಗೌರವಿಸುವ ಮತ್ತು ಅನುಸರಿಸುವ ಅಗತ್ಯವಿದೆ ಎಂದು ತಿಳಿಸಿದರು.

ಸೈಕಲ್ ಸವಾರರಿಗೆ ಏರ್ಪಡಿಸಲಾಗಿದ್ದ ಲಕ್ಕಿ ಡ್ರಾದಲ್ಲಿ ವಿಜೇತ 5 ಮಂದಿ ಅದೃಷ್ಟಶಾಲಿ ಸೈಕ್ಲಿಸ್ಟ್‌ಗಳಿಗೆ ವಿಆರ್ ಸೈಕ್ಲಿಂಗ್ ಕ್ಲಬ್‌ನ   ಸದಸ್ಯ ಬಂಟಿ ರಾಜ್ ಉಡುಗೊರೆ ವೋಚರ್‌ಗಳನ್ನು  ಹಸ್ತಾಂತರಿಸಿದರು.

ಮಕ್ಕಳಿಗೂ ಅದೃಷ್ಟಶಾಲಿಗಳಾಗುವ ಅವಕಾಶ ಇತ್ತು. ಬಾಲಕಿಯರ ವಿಭಾಗದಲ್ಲಿ ಪಾಯಲ್ ಡಿ ರೈ ಬಾಲಕರ ವಿಭಾಗದಲ್ಲಿ  ನಹ್ಯಾನ್ ಅಹ್ಮದ್  ಅದೃಷ್ಟ ಒಲಿದು  ಸೈಕಲ್ ಪಡೆದರು.

ವಿಆರ್ ಸೈಕ್ಲಿಂಗ್ ಕ್ಲಬ್‌ನ  ಅಧ್ಯಕ್ಷ ಸರ್ವೇಶ್ ಸಾಮಗ, ಉಪಾಧ್ಯಕ್ಷ ಶ್ಯಾಮ ಪ್ರಸಾದ್ ನಾಯಕ್, ಕಾರ್ಯದರ್ಶಿ ಹರ್ನೀಶ್‌ರಾಜ್, ಕೋಶಾಧಿಕಾರಿ  ಅಶ್ವಥ್ ರಸ್ಕಿಂಞಿ, ತಾಜ್ ಸೈಕಲ್‌ನ ಮುಬೀನ್ ಉಪಸ್ಥಿತರಿದ್ದರು.

Similar News