ವಿಶ್ವದ ಅತ್ಯಂತ ದೀರ್ಘ ನದಿ ವಿಹಾರ ನೌಕೆಗೆ ಜ.13ರಂದು ಪ್ರಧಾನಿ ಚಾಲನೆ‌

Update: 2023-01-08 17:20 GMT

ಲಕ್ನೋ, ಜ.8: ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದ ಅತ್ಯಂತ ದೀರ್ಘ ನದಿ ವಿಹಾರ ನೌಕೆ ‘ಗಂಗಾ ವಿಲಾಸ’ಕ್ಕೆ ನ.13ರಂದು ತನ್ನ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಲಿದ್ದಾರೆ.

ಗಂಗಾ ವಿಲಾಸ ವಾರಣಾಸಿ-ದಿಬ್ರುಗಡ ನಡುವಿನ 3,200 ಕಿ.ಮೀ.ಅಂತರವನ್ನು 50 ದಿನಗಳಲ್ಲಿ ಕ್ರಮಿಸಲಿದೆ.

ಪ್ರಧಾನಿಯವರು ಹಸಿರು ನಿಶಾನೆ ತೋರಿಸಿದ ಬಳಿಕ ನೌಕೆಯು 32 ಸ್ವಿಸ್ ಮತ್ತು ಓರ್ವ ಜರ್ಮನ್ ಸೇರಿದಂತೆ 33 ಪ್ರವಾಸಿಗಳೊಂದಿಗೆ ಅಸ್ಸಾಮಿನ ದಿಬ್ರುಗಡಕ್ಕೆ ಪಯಣವನ್ನು ಆರಂಭಿಸಲಿದೆ. ಅದು ತನ್ನ ಪ್ರಯಾಣದಲ್ಲಿ ಭಾರತ ಮತ್ತು ಬಾಂಗ್ಲಾದೇಶಗಳ 27 ನದಿಗಳ ಮೂಲಕ ಸಾಗಲಿದೆ.

ವಿಶ್ವ ಪಾರಂಪರಿಕ ತಾಣಗಳು ಸೇರಿದಂತೆ 50ಕ್ಕೂ ಅಧಿಕ ಪುರಾತತ್ವ ಮಹತ್ವದ ಸ್ಥಳಗಳಲ್ಲಿ ವಿಹಾರ ನೌಕೆಯು ನಿಲ್ಲಲಿದೆ. ಸುಂದರಬನ್ಸ್ ಡೆಲ್ಟಾ ಮತ್ತು ಕಾಝಿರಂಗಾ ನ್ಯಾಷನಲ್ ಪಾರ್ಕ್ ಸೇರಿದಂತೆ ರಾಷ್ಟ್ರೀಯ ಉದ್ಯಾನವನಗಳು ಮತ್ತು ಅಭಯಾರಣ್ಯಗಳ ಮೂಲಕವೂ ನೌಕೆಯು ಸಾಗಲಿದೆ.

32 ಸ್ವಿಸ್ ಪ್ರವಾಸಿಗಳೊಂದಿಗೆ ಡಿ.22ರಂದು ಕೋಲ್ಕತಾದಿಂದ ನಿರ್ಗಮಿಸಿರುವ ನೌಕೆಯು ಜ.9ರಂದು ವಾರಣಾಸಿಗೆ ಆಗಮಿಸುವ ನಿರೀಕ್ಷೆಯಿದೆ.

Similar News