ಕಾಶ್ಮೀರದ ಭಾಗವಾಗಿದ್ದರೇ ಒಳ್ಳೆಯದಿತ್ತು: ಲಡಾಖ್ ನಾಯಕರು; ಕೇಂದ್ರಕ್ಕೆ ಹಿನ್ನಡೆಯುಂಟು ಮಾಡಿದ ಹೇಳಿಕೆ

Update: 2023-01-08 17:23 GMT

ಶ್ರೀನಗರ, ಜ.8: ಕೇಂದ್ರಾಡಳಿತ ಪ್ರದೇಶದ ಆಡಳಿತಕ್ಕಿಂತ ಹಿಂದಿನ ಜಮ್ಮು-ಕಾಶ್ಮೀರ ರಾಜ್ಯದಲ್ಲಿಯೇ ತಾವು ಚೆನ್ನಾಗಿದ್ದೆವು ಎಂದು ಕೇಂದ್ರದ ಉನ್ನತಾಧಿಕಾರ ಸಮಿತಿಯಿಂದ ಹೊರಗುಳಿದಿರುವ ಲಡಾಖಿ ನಾಯಕರು ಹೇಳಿದ್ದು, ಇದು ಕೇಂದ್ರಕ್ಕೆ ಹಿನ್ನಡೆಯನ್ನುಂಟು ಮಾಡಿದೆ.

ಪ್ರದೇಶದಲ್ಲಿಯ ಅಸಮಾಧಾನವನ್ನು ನಿವಾರಿಸಲು ಕೇಂದ್ರ ಗೃಹಸಚಿವಾಲಯವು ಸಹಾಯಕ ಗೃಹಸಚಿವ ನಿತ್ಯಾನಂದ ರಾಯ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಹಲವು ದಿನಗಳೇ ಕಳೆದಿದ್ದರೂ ಲಡಾಖ್ನಲ್ಲಿ ಪ್ರತಿಭಟನೆಗಳನ್ನು ಮುನ್ನಡೆಸುತ್ತಿರುವ ಲಡಾಖ್ ಮತ್ತು ಕಾರ್ಗಿಲ್ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಕೇಂದ್ರ ಮಂಡಳಿಯು ಸಮಿತಿಯ ಭಾಗವಾಗಲು ನಿರಾಕರಿಸಿದೆ. ಲಡಾಖ್ಗೆ ರಾಜ್ಯ ಸ್ಥಾನಮಾನ ಮತ್ತು ಸಂವಿಧಾನದ 6ನೇ ಅನುಸೂಚಿಯಡಿ ವಿಶೇಷ ಸ್ಥಾನಮಾನ ಸೇರಿದಂತೆ ತಮ್ಮ ಬೇಡಿಕೆಗಳನ್ನು ಉನ್ನತಾಧಿಕಾರ ಸಮಿತಿಯ ಅಜೆಂಡಾದ ಭಾಗವಾಗಿಸುವವರೆಗೆ ಸಮಿತಿಯ ಯಾವುದೇ ಕಲಾಪದಲ್ಲಿ ಭಾಗವಹಿಸದಿರಲು ಮೈತ್ರಿಕೂಟವು ಸರ್ವಾನುಮತದಿಂದ ನಿರ್ಧರಿಸಿದೆ.
ಲಡಾಖ್ನ ಲೆಫ್ಟಿನಂಟ್ ಗವರ್ನರ್,ಲಡಾಖ್ ಸಂಸದ,ಗೃಹ ಸಚಿವಾಲಯದ ಓರ್ವ ಹಿರಿಯ ಅಧಿಕಾರಿ ಹಾಗೂ ಲೇಹ್ ಮತ್ತು ಕಾರ್ಗಿಲ್ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಒಂಭತ್ತು ಪ್ರತಿನಿಧಿಗಳು ಸಮಿತಿಯ ಸದಸ್ಯರಾಗಿದ್ದಾರೆ.

‘ಪ್ರಚಲಿತ ಸನ್ನಿವೇಶದಲ್ಲಿ ಜಮ್ಮು-ಕಾಶ್ಮೀರದ ಭಾಗವಾಗಿದ್ದ ಹಿಂದಿನ ವ್ಯವಸ್ಥೆಯೇ ಚೆನ್ನಾಗಿತ್ತು ಎಂದು ನಾವು ಭಾವಿಸಿದ್ದೇವೆ ’ ಎಂದು ಲಡಾಖಿ ನಾಯಕ ಹಾಗೂ ಲಡಾಖ್ ಬೌದ್ಧ ಸಂಘದ ಹಿರಿಯ ಉಪಾಧ್ಯಕ್ಷ ಚೆರಿಂಗ್ ದೋರ್ಜೆ ಹೇಳಿದರು.

ಉನ್ನತಾಧಿಕಾರ ಸಮಿತಿಯನ್ನು ರಚಿಸುವ ಮೂಲಕ ಲಡಾಖಿ ಜನರನ್ನು ಮೂರ್ಖರನ್ನಾಗಿಸಲು ಕೇಂದ್ರವು ಪ್ರಯತ್ನಿಸುತ್ತಿದೆ ಮತ್ತು ಲಡಾಖ್ಗೆ ರಾಜ್ಯ ಸ್ಥಾನಮಾನ ಹಾಗೂ 6ನೇ ಅನುಸೂಚಿಯ ಬೇಡಿಕೆಗಳನ್ನು ಒಪ್ಪಿಕೊಳ್ಳಲು ತಿರಸ್ಕರಿಸುತ್ತಿದೆ ಎಂದು ಅವರು ಆರೋಪಿಸಿದರು. ರಾಜ್ಯ ಸ್ಥಾನಮಾನ ಮತ್ತು ಸಂವಿಧಾನದ 6ನೇ ಅನುಸೂಚಿಯಡಿ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ಲಡಾಖ್ನ ಜನರು ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

Similar News