×
Ad

ವನೌತುವಿನಲ್ಲಿ ಭಾರೀ ಭೂಕಂಪ; ಸುನಾಮಿ ಭೀತಿಯಿಂದ ಕಂಗೆಟ್ಟ ಜನತೆ

Update: 2023-01-09 07:42 IST

ಸಿಡ್ನಿ: ಫೆಸಿಫಿಕ್ ದ್ವೀಪರಾಷ್ಟ್ರ ವನೌತುವಿನಲ್ಲಿ ಭಾನುವಾರ ತಡರಾತ್ರಿ 7.0 ತೀವ್ರತೆಯ ಭೀಕರ ಭೂಕಂಪ ಸಂಭವಿಸಿದ ಬೆನ್ನಲ್ಲೇ, ಜನ ಸುನಾಮಿ ಭೀತಿಯಿಂದ ಎತ್ತರದ ಬಯಲು ಪ್ರದೇಶಗಳಲ್ಲಿ ಆಸರೆ ಕೋರಿ ಮನೆ ಮಠಗಳನ್ನು ತೊರೆದು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ.

ಈ ಭೀಕರ ಭೂಕಂಪದ ಕೇಂದ್ರ, ಆರ್ಚಿಪೆಲಾಂಜೊ ರಾಜಧಾನಿ ಪೋರ್ಟ್ ವಿಲ್ಲಾದಿಂದ 400 ಕಿಲೋಮೀಟರ್ ಉತ್ತರಕ್ಕಿರುವ ದೊಡ್ಡ ದ್ವೀಪವಾದ ಎಸ್ಪಿರುಟು ಸ್ಯಾಂಟೊದ ಉತ್ತರ ಕೊಲ್ಲಿಯ ಸಮುದ್ರ ತಟದಲ್ಲಿತ್ತು.

ಭೂಮಿ ಕಂಪಿಸಿದಾಗ ತಾನು ಸ್ನೇಹಿತರ ಜತೆ ಎಸ್ಪಿರಿಟು ಸ್ಯಾಂಟೊದ ಹಾಗ್ ಹಾರ್ಬರ್ ಗ್ರಾಮದಲ್ಲಿ ಇದ್ದುದಾಗಿ 22 ವರ್ಷ ವಯಸ್ಸಿನ ವಿದ್ಯಾರ್ಥಿ ಕೈಸನ್ ಪೋರ್ ಅನುಭವ ಹಂಚಿಕೊಂಡಿದ್ದಾರೆ. ಅದು ಅತ್ಯಂತ ಭೀಕರ ಕಂಪನ ಎಂದು ಅವರು ನೆನಪಿಸಿಕೊಂಡಿದ್ದಾರೆ.

ನಾವು ಸಮುದ್ರದಲ್ಲಿ ಏಡಿ ಹಿಡಿಯುವ ಪ್ರಯತ್ನದಲ್ಲಿದ್ದೆವು. ಜೀವಭಯದಿಂದ ನಮ್ಮ ಮನೆಗಳಿಗೆ ಓಡಿಹೋದೆವು ಎಂದು ಅವರು ಹೇಳಿದ್ದಾರೆ.  ಅವರ ಗ್ರಾಮದಲ್ಲಿ ಸುಮಾರು 1000 ಜನಸಂಖ್ಯೆ ಇದ್ದು, ಭೂಕಂಪದಿಂದ ಮನೆಯ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂದು ಪೋರ್ ಹೇಳಿದ್ದಾರೆ. ಜನ ಸುನಾಮಿ ಭೀತಿಯಿಂದ ಎತ್ತರದ ಬಯಲು ಪ್ರದೇಶಗಳಿಗೆ ಓಡಿ ಹೋಗುತ್ತಿದ್ದಾರೆ ಎಂದು ಅವರು ಬಣ್ಣಿಸಿದ್ದಾರೆ.

ಮನೆಗಳಿಗೆ ದೊಡ್ಡ ಪ್ರಮಾಣದ ಹಾನಿಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರಾತ್ರಿ 11.30ರ ಸುಮಾರಿಗೆ ಸುಮಾರು 27 ಕಿಲೋಮೀಟರ್ ಆಳದಲ್ಲಿ ಈ ಕಂಪನ ಸಂಭವಿಸಿದೆ ಎಂದು ಅಮೆರಿಕದ ಜಿಯಲಾಜಿಕಲ್ ಸರ್ವೆ ಹೇಳಿದೆ.

Similar News