ಅಯೋಧ್ಯೆ ಮಸೀದಿ ನಿರ್ಮಾಣ ಪ್ರಕ್ರಿಯೆಗೆ ಎದುರಾದ ವಿಳಂಬ: ಇನ್ನಷ್ಟೇ ಅನುಮೋದನೆಗೊಳ್ಳಬೇಕಿದೆ ನಕ್ಷೆ!

Update: 2023-01-09 12:40 GMT

ಅಯೋಧ್ಯೆ: ಅಯೋಧ್ಯೆಯ ಧನ್ನಿಪುರ್‌ ಗ್ರಾಮದಲ್ಲಿ ಸುಪ್ರೀಂ ಕೋರ್ಟ್‌ (Supreme Court) ಸೂಚನೆಯಂತೆ ಉತ್ತರಪ್ರದೇಶ  ಸರ್ಕಾರ ಒದಗಿಸಿದ ಜಮೀನಿನಲ್ಲಿ ತಲೆಯೆತ್ತಲಿರುವ ಮಸೀದಿ (Ayodhya mosque) ನಿರ್ಮಾಣಕ್ಕೆ ಕೆಲವೊಂದು ಪ್ರಕ್ರಿಯಾತ್ಮಕ ವಿಳಂಬಗಳು ಎದುರಾಗಿವೆ ಎಂದು ವರದಿಯಾಗಿದೆ.

ಈ ಪ್ರಸ್ತಾವಿತ ಮೌಲ್ವಿ ಅಹ್ಮದುಲ್ಲಾಹ್‌ ಶಾ ಮಸೀದಿಯ (Maulvi Ahmadullah Shah Mosque) ನಕ್ಷೆಯನ್ನು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ಇನ್ನಷ್ಟೇ ಅನುಮೋದಿಸಬೇಕಿದೆ. ಈ ಕುರಿತ ಅರ್ಜಿಯನ್ನು ಒಂದೂವರೆ ವರ್ಷಗಳ ಹಿಂದೆ ಸಲ್ಲಿಸಲಾಗಿದೆ ಎಂದು ಮಸೀದಿ ನಿರ್ಮಾಣಕ್ಕಾಗಿ ರಚಿಸಲಾಗಿರುವ ಇಂಡೋ ಇಸ್ಲಾಮಿಕ್‌ ಕಲ್ಚರಲ್ ಫೌಂಡೇಶನ್‌ ಟ್ರಸ್ಟ್‌ (Indo-Islamic Cultural Foundation Trust) ಹೇಳಿದೆ. ಮೇ 2021 ರಂದು ಟ್ರಸ್ಟ್‌ ಅರ್ಜಿ ಸಲ್ಲಿಸಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ವಿಶಾಲ್‌ ಸಿಂಗ್‌‌, ಪ್ರಾಧಿಕಾರ ಮಟ್ಟದಲ್ಲಿ ಯಾವುದೇ ಕ್ರಮ ಬಾಕಿಯಿಲ್ಲ, ಈಗ ಸರಕಾರಿ ಮಟ್ಟದಲ್ಲಿ ಕ್ರಮಕೈಗೊಳ್ಳುವುದು ಬಾಕಿಯಿದೆ ಎಂದಿದ್ದಾರೆ.

ಅತ್ತರ್ ಹುಸೈನ್‌, ಟ್ರಸ್ಟಿನ ಕಾರ್ಯದರ್ಶಿ ಪ್ರತಿಕ್ರಿಯಿಸಿ ಇದು ಪ್ರಕ್ರಿಯಾತ್ಮಕ ವಿಳಂಬವಾಗಿದೆ. ಇದು ಕೃಷಿ ಭೂಮಿಯಾಗಿರುವುದರಿಂದ  ಜಮೀನು ಬಳಕೆ ಉದ್ದೇಶದ ಬದಲಾವಣೆಗೆ ಕೆಲವೊಂದು ಷರತ್ತು ಪೂರೈಸಬೇಕಿದೆ ಎಂದಿದ್ದಾರೆ. ವಿಳಂಬದ ಕುರಿತು ನಮಗೆ ಅರ್ಥವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಯೋಜನೆಗೂ ಮಂದಿರ ನಿರ್ಮಾಣಕ್ಕೂ ಹೋಲಿಕೆ ಮಾಡಬಾರದು ಎಂದು ಅವರು ಹೇಳಿದ್ದಾರೆ. ಭೂಮಿ ಬಳಕೆ ಉದ್ದೇಶ ಬದಲಾವಣೆ ಹಾಗೂ ನಕ್ಷೆ ಅನುಮೋದನೆಗೊಂಡ ಕೂಡಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

ಅಯ್ಯೋಧ್ಯೆ ವಿವಾದ ತೀರ್ಪಿನ ನಂತರ ಸುಪ್ರೀಂ ಕೋರ್ಟ್‌ ನಿರ್ದೇಶನದನ್ವಯ ಮಸೀದಿಗಾಗಿ ರಾಜ್ಯ ಸರ್ಕಾರ ಧನ್ನಿಪುರ್‌ ಗ್ರಾಮದಲ್ಲಿ ಐದು ಎಕರೆ ಜಮೀನನ್ನು ಸುನ್ನಿ ವಕ್ಫ್‌ ಮಂಡಳಿಗೆ ಹಸ್ತಾಂತರಿಸಿತ್ತು. ಮಂಡಳಿ ನಂತರ ಈ ಜಮೀನನ್ನು ಟ್ರಸ್ಟಿಗೆ ಹಸ್ತಾಂತರಿಸಿತ್ತು.

ಮಸೀದಿ 3500 ಚದರ ಮೀಟರ್‌ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳಲಿದೆ. ಇದರ ಹೊರತಾಗಿ 24,150 ಚದರ ಮೀಟರ್‌ ವ್ಯಾಪ್ತಿಯ ನಾಲ್ಕಂತಸ್ತಿನ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಸಮುದಾಯ ಪಾಕಶಾಲೆ, 500 ಚದರ ಮೀಟರ್‌ ವ್ಯಾಪ್ತಿಯ ಮ್ಯೂಸಿಯಂ ಹಾಗೂ ಹಾಗೂ 2300 ಚದರ ಮೀಟರ್‌ ವ್ಯಾಪ್ತಿಯ ಇಂಡೋ-ಇಸ್ಲಾಮಿಕ್‌ ರಿಸರ್ಚ್‌ ಸೆಂಟರ್‌ ನಿರ್ಮಾಣಗೊಳ್ಳಲಿದೆ.

ಇದನ್ನೂ ಓದಿ: 18 ವರ್ಷದ ಖ್ಯಾತ MMA ಸ್ಟಾರ್‌ ವಿಕ್ಟೋರಿಯಾ ಲೀ ನಿಧನ

Similar News