×
Ad

ಮಟಪಾಡಿ: ಮಾದಕ ವಸ್ತುಗಳು ಅರಿವು ಕಾರ್ಯಕ್ರಮ

Update: 2023-01-09 21:42 IST

ಉಡುಪಿ: ಒತ್ತಡ ನಿವಾರಣೆಗೆ ಮಾದಕ ವಸ್ತುಗಳನ್ನು ಸೇವಿಸುವ ಬದಲು ಹಿಂದಿನ ಕಾಲದ ಯೋಗ, ಧ್ಯಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಹೇಳಿದ್ದಾರೆ.

ಬ್ರಹ್ಮಾವರ ಸಮೀಪದ  ಮಟಪಾಡಿ ಶ್ರೀನಿಕೇತನ ಪ್ರಾಥಮಿಕ ಶಾಲೆಯ ಮಕ್ಕಳ ಮಂಟಪದಲ್ಲಿ ರವಿವಾರ ಮಟಪಾಡಿಯ ನೂರುಲ್ ಇಸ್ಲಾಂ ಯಂಗ್‌ಮ್ಯಾನ್ ಸಮಿತಿ ವತಿಯಿಂದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಅಬಕಾರಿ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ನಡೆದ ಮಾದಕ ವಸ್ತುಗಳಿಂದ ಸಮಾಜದ ಮೇಲೆ ಆಗುವ ದುಷ್ಪರಿಣಾಮ ಮತ್ತು ಅದನ್ನು ತಡೆಗಟ್ಟುವ ಬಗ್ಗೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಇಂದು ದೇಶದಲ್ಲಿ ಶೇ.20ರಷ್ಟು ಯುವ ಸಮೂಹ ಮದ್ಯ ವ್ಯಸನ ಮತ್ತು ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುತ್ತಿದ್ದಾರೆ. ಶಾಲಾ ಪಠ್ಯಕ್ರಮದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಪಠ್ಯವನ್ನು ಅಳವಡಿಸಿಕೊಂಡಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡುತ್ತದೆ. ಮಕ್ಕಳ ವಿಚಾರದಲ್ಲಿ ಪೋಷಕರ ಜವಾಬ್ದಾರಿಯೂ ಅತೀ ಅಗತ್ಯವಾಗಿದೆ ಎಂದರು.

ಮಟಪಾಡಿ ರಹಮಾನಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಎಂ.ಮೂಸ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಅಬಕಾರಿ ಇಲಾಖೆಯ ರುಬಿಯಾ, ಉಡುಪಿ ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಮತ್ತು ಬ್ರಹ್ಮಾವರ ಆಶಾಕಿರಣದ ನಿರ್ದೇಶಕ ಫಾ.ಚಾರ್ಲ್ಸ್ ಮಾದಕ ವಸ್ತುಗಳಿಂದ ಸಮಾಜದ ಮೇಲೆ ಆಗುವ ದುಷ್ಪರಿಣಾಮ ಮತ್ತು ಅದನ್ನು ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು.

ಬ್ರಹ್ಮಾವರ ಠಾಣಾ ಉಪನಿರೀಕ್ಷಕ ರಾಜಶೇಖರ್, ಬಿ.ಎಸ್.ಎನ್.ಎಲ್. ನಿವೃತ್ತ ಮಹಾಪ್ರಬಂಧಕ ಮಟಪಾಡಿ ಚಂದ್ರಶೇಖರ ಕಲ್ಕೂರ, ಗ್ರಾಮಾಭಿ ವೃದ್ಧಿ ಯೋಜನೆಯ ಯಶೋಧ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸುಧಾಕರ ಶೆಟ್ಟಿ, ಶಿಕ್ಷಕ ಮನು ಹಂದಾಡಿ, ಜಿಲ್ಲಾ ವಕ್ಫ್ ಬೋರ್ಡ್‌ನ ಸಲಹಾ ಸಮಿತಿಯ ಉಪಾಧ್ಯಕ್ಷ ಹಾಗೂ ವಕೀಲ ಮಹಮ್ಮದ್ ಸುಹಾನ್, ಮಟಪಾಡಿ ನೂರುಲ್‌ಇಸ್ಲಾಂ ಯಂಗ್‌ಮ್ಯಾನ್ ಸಮಿತಿಯ ಅಧ್ಯಕ್ಷ ಮಸೂದ್ ರೆಹಮಾನ್ ಮತ್ತು ವಿವಿಧ ಸಂಘ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.

ಸಲೀಂ ಸ್ವಾಗತಿಸಿದರು. ಪ್ರಾಧ್ಯಾಪಕ ಪ್ರಶಾಂತ್ ನೀಲಾವರ ಕಾರ್ಯಕ್ರಮ ನಿರೂಪಿಸಿದರು.

Similar News