ಏರ್ ಇಂಡಿಯಾ ಮೂತ್ರ ವಿಸರ್ಜನೆ ಪ್ರಕರಣ: ವಿಮಾನಗಳಲ್ಲಿ ಅಶಿಸ್ತಿನ ವರ್ತನೆಗೆ ಕಠಿಣ ದಂಡನೆ ಅಗತ್ಯ; ತಜ್ಞರು

Update: 2023-01-09 17:04 GMT

ಹೊಸದಿಲ್ಲಿ,ಜ.9: ತನ್ನ ವಿಮಾನದಲ್ಲಿ ಪಾನಮತ್ತ ಪ್ರಯಾಣಿಕನೋರ್ವ ಸಹ ಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜಿಸಿದ ಘಟನೆಯನ್ನು ಏರ್ ಇಂಡಿಯಾ(Air India) ನಿರ್ವಹಿಸಿರುವ ರೀತಿಯು ಪ್ರಯಾಣಿಕರ ಅಶಿಸ್ತಿನ ವರ್ತನೆಗಳಿಗೆ ಕಡಿವಾಣ ಹಾಕಲು ಕಠಿಣ ನಿಯಮಗಳ ತುರ್ತು ಅಗತ್ಯವನ್ನು ಸೂಚಿಸಿದೆ ಎಂದು ಕಾನೂನು ಮತ್ತು ವಾಯುಯಾನ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಮಾನಯಾನ ಸಂಸ್ಥೆಗಳು ತಮ್ಮ ವಾಣಿಜ್ಯಿಕ ಹಿತಾಸಕ್ತಿಯಿಂದಾಗಿ ಇಂತಹ ಘಟನೆಗಳನ್ನು ಮುಚ್ಚಿ ಹಾಕುವುದರಿಂದ ಇತ್ತೀಚಿನ ದಿನಗಳಲ್ಲಿ ವಿಮಾನಗಳಲ್ಲಿ ಅಶಿಸ್ತಿನ ವರ್ತನೆಗಳು ಹೆಚ್ಚುತ್ತಿವೆ ಎಂದು ತಜ್ಞರು ಹೇಳಿದ್ದಾರೆ.

ಕಳೆದ ವರ್ಷದ ನ.26ರಂದು ನ್ಯೂಯಾರ್ಕ್ನಿಂದ ದಿಲ್ಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಶಂಕರ ಮಿಶ್ರಾ ಎಂಬಾತ 70ರ ಹರೆಯದ ತನ್ನ ಸಹ ಪ್ರಯಾಣಿಕ ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿದ್ದ. ಮಹಿಳೆ ಏರ್ ಇಂಡಿಯಾಕ್ಕೆ ಸಲ್ಲಿಸಿದ್ದ ದೂರಿನ ಮೇರೆಗೆ ಜ.4ರಂದು ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಿಸಿದ್ದ ದಿಲ್ಲಿ ಪೊಲೀಸರು ಬೆಂಗಳೂರಿನಲ್ಲಿ ಅಡಗಿಕೊಂಡಿದ್ದ ಆತನನ್ನು ಶನಿವಾರ ಬಂಧಿಸಿದ್ದಾರೆ.

ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ)ದ ನಿಯಮಗಳಂತೆ ವಿಮಾನದಲ್ಲಿ ಪ್ರಯಾಣಿಕರ ಅಶಿಸ್ತಿನ ವರ್ತನೆಯು ದಂಡನೀಯ ಅಪರಾಧವಾಗಿದೆ.

ಡಿಜಿಸಿಎ ನಿಯಮಗಳಡಿ ವಿಮಾನಗಳಲ್ಲಿ ಪ್ರಯಾಣಿಕರ ಅಶಿಸ್ತಿನ ವರ್ತನೆಯ ಎಲ್ಲ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ವಕೀಲ ಉಜ್ವಲ ಆನಂದ ಶರ್ಮಾ ಹೇಳಿದರು.

ವಿಚಾರಣೆ ಬಾಕಿಯಿರುವವರೆಗೂ ಅಶಿಸ್ತಿನ ವರ್ತನೆಯ ಪ್ರಯಾಣಿಕರು ಯಾವುದೇ ಸಂಸ್ಥೆಯ ವಿಮಾನಗಳಲ್ಲಿ ಪ್ರಯಾಣಿಸುವುದನ್ನು ನಿಷೇಧಿಸಬೇಕು ಎಂದು ಕ್ರಿಮಿನಲ್ ವಕೀಲ ನಿಶಾಂತ ಕುಮಾರ ಶ್ರೀವಾಸ್ತವ ಹೇಳಿದರೆ,ಇಂತಹ ಘಟನೆಗಳ ಪುನರಾವರ್ತನೆಯನ್ನು ನಿವಾರಿಸಲು ಪ್ರಸ್ತುತ ಕಾನೂನು ನಿಬಂಧನೆಗಳ ಸಕಾಲಿಕ ಅನುಷ್ಠಾನದ ಅಗತ್ಯಕ್ಕೆ ದಿಲ್ಲಿ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಮೋಹಿತಚಂದ್ ಮಾಥುರ್ ಒತ್ತು ನೀಡಿದರು.

ಆರೋಪಿ ಮಿಶ್ರಾನನ್ನು ಎಲ್ಲ ವಿಮಾನ ನಿಲ್ದಾಣಗಳಲ್ಲಿ ನಿಷೇಧಿಸಬೇಕು. ಕನಿಷ್ಠ ಒಂದು ವರ್ಷ ಕಾಲ ಆತ ಯಾವುದೇ ವಿಮಾನ ನಿಲ್ದಾಣವನ್ನು ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಉದ್ಯಮ ತಜ್ಞ ಆರ್.ರಾಮ್ ಕುಮಾರ್ ಹೇಳಿದರು.

Similar News