ಜೋಶಿ ಮಠವನ್ನು ಉಳಿಸಲು ಎಲ್ಲರೂ ಒಂದಾಗಿ ಕೆಲಸ ಮಾಡಬೇಕು : ಉತ್ತರಾಖಂಡ ಮುಖ್ಯಮಂತ್ರಿ

Update: 2023-01-09 17:16 GMT

ಡೆಹ್ರಾಡೂನ್, ಜ. 9: ಜೋಶಿ ಮಠವನ್ನು ಉಳಿಸಲು ಎಲ್ಲರೂ ಒಂದಾಗಿ ಕೆಲಸ ಮಾಡಬೇಕೆಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೋಮವಾರ ಮನವಿ ಮಾಡಿದ್ದಾರೆ. ಈ ವಲಯದಲ್ಲಿ ಸಂಭವಿಸುತ್ತಿರುವ ಬೆಳವಣಿಗೆಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ ನಿಗಾ ಇಟ್ಟಿದ್ದಾರೆ ಎಂದೂ ಅವರು ಹೇಳಿದರು.

‘‘ಜೋಶಿ ಮಠವನ್ನು ಉಳಿಸಲು ಎಲ್ಲರೂ ತಂಡವಾಗಿ ಕೆಲಸ ಮಾಡಬೇಕೆಂದು  ಮನವಿ ಮಾಡಿದ್ದೇವೆ. ಅಪಾಯದಲ್ಲಿರುವ 68 ಮನೆಗಳ ಜನರನ್ನು ತೆರವು ಗೊಳಿಸಲಾಗಿದೆ. 600ಕ್ಕೂ ಅಧಿಕ ಮನೆಗಳು ಅಪಾಯದಲ್ಲಿವೆ ಹಾಗೂ ಅವುಗಳ ನಿವಾಸಿಗಳನ್ನು ತೆರವುಗೊಳಿಸಲು ಪ್ರಯತ್ನಗಳು ಜಾರಿಯಲ್ಲಿವೆ. ಪ್ರಧಾನಿ ಕೂಡ ಇದರ ಮೇಲೆ ನಿಗಾ ಇಟ್ಟಿದ್ದಾರೆ ಹಾಗೂ ಎಲ್ಲಾ ಸಾಧ್ಯ ನೆರವು ನೀಡುವ ಭರವಸೆ ನೀಡಿದ್ದಾರೆ’’ ಎಂದು ಉತ್ತರಾಖಂಡ ಮುಖ್ಯಮಂತ್ರಿ ಹೇಳಿದರು.

ಜೋಶಿ ಮಠದಲ್ಲಿನ ಕಟ್ಟಡಗಳಿಗೆ ಆಗಿರುವ ಹಾನಿ ಮತ್ತು ಅಲ್ಲಿನ ನೆಲಕುಸಿಯುತ್ತಿರುವುದಕ್ಕೆ ಸಂಬಂಧಿಸಿದ ತನ್ನ ವರದಿಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಮ್ಎ)ವು ಉತ್ತರಾಖಂಡಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಗೆಸಲ್ಲಿಸಿದೆ.

ವಿಪತ್ತು ನಿರ್ವಹಣಾ ಕಾರ್ಯದರ್ಶಿ ರಂಜಿತ್ ಸಿನ್ಹ ನೇತೃತ್ವದ 8 ಸದಸ್ಯರ ತಂಡವೊಂದು, ಜೋಶಿಮಠದ ಸಮೀಕ್ಷೆ ನಡೆಸಿದ ಬಳಿಕ ತನ್ನ ವರದಿಯನ್ನು ಸಲ್ಲಿಸಿದೆ.

ವಿವಿಧ ಸಂಸ್ಥೆಗಳು ಮತ್ತು ಸಂಘಟನೆಗಳ ಪರಿಣತರನ್ನು ಒಳಗೊಂಡ ತಂಡವು ಜನವರಿ 5 ಮತ್ತು 6ರಂದು ಜೋಶಿ ಮಠದಲ್ಲಿ ಸಮೀಕ್ಷೆ ನಡೆಸಿ, ಕಟ್ಟಡಗಳಲ್ಲಿ ಬಿರುಕು ಮೂಡಲು ಮತ್ತು ನೆಲಕುಸಿಯಲು ಕಾರಣವಾಗಿರುವ ಅಂಶಗಳ ಬಗ್ಗೆ ಅಧ್ಯಯನ ನಡೆಸಿದೆ.

ಹೆಚ್ಚಿನ ಪ್ರಮಾಣದಲ್ಲಿ ಹಾನಿಗೆ ಒಳಗಾಗಿರುವ ಕಟ್ಟಡಗಳನ್ನು ಕೆಡವ ಬೇಕು ಹಾಗೂ ಅವಶೇಷಗಳನ್ನು ತೆರವುಗೊಳಿಸ ಬೇಕು ಎಂಬುದಾಗಿ ಪರಿಣತರು ಸಲಹೆ ನೀಡಿದ್ದಾರೆ.

Similar News