ಬಿಸಿಯೂಟಕ್ಕೆ ಬಿದ್ದ ಹಾವು: ಹಲವಾರು ಶಾಲಾ ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

Update: 2023-01-10 05:56 GMT

ಕೋಲ್ಕತ್ತಾ:  ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಹಾವು ಬಿದ್ದ ಆಹಾರವನ್ನು ಸೇವಿಸಿದ ನಂತರ ಹಲವಾರು ಶಾಲಾ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ ಮಯೂರೇಶ್ವರ ಬ್ಲಾಕ್‌ನ ಪ್ರಾಥಮಿಕ ಶಾಲೆಯ ಸುಮಾರು 30 ವಿದ್ಯಾರ್ಥಿಗಳು ಸೋಮವಾರ ಮಧ್ಯಾಹ್ನದ ಊಟದಲ್ಲಿ ಬಡಿಸಿದ ಆಹಾರವನ್ನು ಸೇವಿಸಿದ ನಂತರ ಅಸ್ವಸ್ಥರಾಗಿದ್ದಾರೆ ಎಂದು ಅವರು ಹೇಳಿದರು.

ಭೋಜನ ಸಿದ್ಧಪಡಿಸಿದ್ದ ಶಾಲೆಯ ಸಿಬ್ಬಂದಿಯೊಬ್ಬರು, ಬೇಳೆ ತುಂಬಿದ ಕಂಟೈನರ್ ಒಂದರಲ್ಲಿ ಹಾವು ಕಂಡುಬಂದಿತ್ತು ಎಂದು ಹೇಳಿಕೊಂಡಿದ್ದಾರೆ.

"ಮಕ್ಕಳು ವಾಂತಿ ಮಾಡಲು ಆರಂಭಿಸಿದ್ದರಿಂದ ನಾವು ಅವರನ್ನು ರಾಂಪುರಹತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಬೇಕಾಯಿತು" ಎಂದು ಅವರು ಹೇಳಿದರು.

ಮಧ್ಯಾಹ್ನದ ಊಟ ತಿಂದು ಮಕ್ಕಳು ಅಸ್ವಸ್ಥರಾಗುತ್ತಿರುವ ಬಗ್ಗೆ ಹಲವಾರು ಗ್ರಾಮಸ್ಥರಿಂದ ದೂರುಗಳು ಬಂದಿವೆ ಎಂದು ಬ್ಲಾಕ್ ಅಭಿವೃದ್ಧಿ ಅಧಿಕಾರಿ ದೀಪಾಂಜನ್ ಜನಾ ಸುದ್ದಿಗಾರರಿಗೆ ತಿಳಿಸಿದರು.

ಓರ್ವ ವಿದ್ಯಾರ್ಥಿಯನ್ನು ಹೊರತುಪಡಿಸಿ ಎಲ್ಲಾ ಮಕ್ಕಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Similar News