ಚಳಿಯಲ್ಲೂ ಟೀ ಶರ್ಟ್ ಧರಿಸಲು ನಿರ್ಧರಿಸಿರುವುದಕ್ಕೆ ಕಾರಣ ತಿಳಿಸಿದ ರಾಹುಲ್ ಗಾಂಧಿ

Update: 2023-01-10 07:06 GMT

ಚಂಡೀಗಢ:  "ಮಧ್ಯಪ್ರದೇಶದಲ್ಲಿ ಹರಿದ ಬಟ್ಟೆಯಲ್ಲಿ ನಡುಗುತ್ತಿರುವ ಮೂವರು ಬಡ ಹುಡುಗಿಯರನ್ನು ನೋಡಿದ ನಂತರ ಪಾದಯಾತ್ರೆಯಲ್ಲಿ ಚಳಿಯ ನಡುವೆಯೂ ಟೀ ಶರ್ಟ್ ಧರಿಸಲು ನಿರ್ಧರಿಸಿದ್ದೇನೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಸೋಮವಾರ ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆಯಲ್ಲಿ ಚಳಿಗಾಲದ ಚಳಿಯ ನಡುವೆಯೂ ಟೀ ಶರ್ಟ್ ಧರಿಸಿದ್ದ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವಾಗಲೇ ರಾಹುಲ್ ಈ ಹೇಳಿಕೆ  ನೀಡಿದ್ದಾರೆ.

"ಈ ಬಿಳಿ ಟಿ-ಶರ್ಟ್ ಅನ್ನು ಏಕೆ ಧರಿಸಿದ್ದೀರಿ. ನಿಮಗೆ ಚಳಿಯಾಗುವುದಿಲ್ಲವೇ ಎಂದು ಜನರು ಕೇಳುತ್ತಿದ್ದಾರೆ. ನಾನು ಅದಕ್ಕೆ ಕಾರಣವನ್ನು ಹೇಳುತ್ತೇನೆ. ಯಾತ್ರೆ ಆರಂಭವಾದಾಗ ... ಕೇರಳದಲ್ಲಿನ ವಾತಾವರಣ  ಬಿಸಿ ಮತ್ತು ಆರ್ದ್ರವಾಗಿತ್ತು. ಆದರೆ ನಾವು ಮಧ್ಯಪ್ರದೇಶವನ್ನು ಪ್ರವೇಶಿಸಿದಾಗ  ಸ್ವಲ್ಪ ಚಳಿ ಇತ್ತು. ಒಂದು ದಿನ ಬೆಳಗ್ಗೆ ಹರಿದ ಬಟ್ಟೆಯಲ್ಲಿದ್ದ ಮೂವರು ಬಡ ಹೆಣ್ಣು ಮಕ್ಕಳು ನನ್ನ ಬಳಿಗೆ ಬಂದರು. ಫೋಟೊ ತೆಗೆಸಿಕೊಳ್ಳಲು ಬಯಸಿದ್ದ ಅವರ  ಕೈಹಿಡಿದು ನೋಡಿದಾಗ ಅವರು ಸರಿಯಾದ ಬಟ್ಟೆಯನ್ನು ಧರಿಸಿರದ ಕಾರಣ ಚಳಿಯಿಂದ ನಡುಗುತ್ತಿದ್ದರು. ಎಲ್ಲಿಯ ತನಕ ಚಳಿಯಿಂದ ನಾನು ನಡುಗುವುದಿಲ್ಲವೋ ಅಲ್ಲಿ ತನಕ  ಟೀ ಶರ್ಟ್ ಧರಿಸುವೆ  ಎಂದು ಆ ದಿನವೇ ನಿರ್ಧರಿಸಿದೆ'' ಎಂದು  ರಾಹುಲ್ ಗಾಂಧಿ ಹೇಳಿದ್ದಾರೆ.

“ಯಾವಾಗ ಚಳಿಯಿಂದ ದೇಹ ನಡುಗಲು ಶುರುವಾಗುತ್ತದೆಯೋ, ಆಗ ಸ್ವೆಟರ್ ಹಾಕಿಕೊಳ್ಳುವ ಯೋಚನೆ ಬರುತ್ತದೆ,  ನಿಮಗೆ ಚಳಿ ಇದ್ದರೆ ರಾಹುಲ್ ಗಾಂಧಿಗೂ ಚಳಿ ಇರುತ್ತದೆ. ನೀವು ಯಾವಾಗ ಸ್ವೆಟರ್ ಧರಿಸುತ್ತೀರೋ, ಆಗ ನಾನು ಸ್ವೆಟರ್ ಹಾಕಿಕೊಳ್ಳುವೆ ಎಂದು ಆ ಮೂವರು ಹುಡುಗಿಯರಿಗೆ ಒಂದು ಸಂದೇಶ ಕೊಡಲು ಇಚ್ಛಿಸುತ್ತೇನೆ’’ ಎಂದು ಹೇಳಿದ್ದಾರೆ.

ಕಳೆದ ವಾರ ಉತ್ತರ ಪ್ರದೇಶ-ಪಾದಯಾತ್ರೆಯ ಸಂದರ್ಭದಲ್ಲಿ ಮಾಧ್ಯಮಗಳು ನನ್ನ ಉಡುಗೆಯನ್ನು ಹೈಲೈಟ್ ಮಾಡುತ್ತಿದ್ದವು.  ಆದರೆ "ಬಡ ರೈತರು ಹಾಗೂ  ಕಾರ್ಮಿಕರು ಹರಿದ ಬಟ್ಟೆಯಲ್ಲಿ ತಮ್ಮೊಂದಿಗೆ ನಡೆಯುವುದನ್ನು ಅವರು ಗಮನಿಸುವುದಿಲ್ಲ" ಎಂದು ವಯನಾಡ್ ಸಂಸದ  ಹೇಳಿದ್ದರು.

"ನಾನು ಟೀ ಶರ್ಟ್‌ನಲ್ಲಿ ಇರುವುದು ನಿಜವಾದ ಪ್ರಶ್ನೆಯಲ್ಲ, ದೇಶದ ರೈತರು, ಬಡ ಕಾರ್ಮಿಕರು ಮತ್ತು ಅವರ ಮಕ್ಕಳು ಹರಿದ ಬಟ್ಟೆ, ಟಿ-ಶರ್ಟ್‌ಗಳು ಮತ್ತು ಸ್ವೆಟರ್‌ಗಳಿಲ್ಲದೆ ಏಕೆ ಇದ್ದಾರೆ ಎಂಬುದು ನಿಜವಾದ ಪ್ರಶ್ನೆ" ಎಂದು ಅವರು ಭಾಗಪತ್‌ನಲ್ಲಿ ರಾಹುಲ್ ಹೇಳಿದ್ದರು.

Similar News