ಪೊಂಗಲ್ ಆಹ್ವಾನ ಪತ್ರಿಕೆಯಲ್ಲಿ ಮತ್ತೆ ಸರಕಾರವನ್ನು ಕೆಣಕಿದ ತಮಿಳುನಾಡು ರಾಜ್ಯಪಾಲ

ಸಭಾತ್ಯಾಗ ನಡೆಸಿದ ವೇಗದಲ್ಲೇ ರಾಜ್ಯದಿಂದ ಹೋಗಲಿ: ಸಂಸದ

Update: 2023-01-10 16:40 GMT

ಚೆನ್ನೈ, ಜ. 10: ತಮಿಳುನಾಡು ರಾಜಭವನದಲ್ಲಿ ಪೊಂಗಲ್ ಹಬ್ಬವನ್ನು ಆಚರಿಸುವುದಕ್ಕೆ ಸಂಬಂಧಿಸಿ ರಾಜ್ಯಪಾಲ ಆರ್.ಎನ್. ರವಿ ಸಿದ್ಧಪಡಿಸಿರುವ ಆಹ್ವಾನಪತ್ರಿಕೆಯಲ್ಲಿ ‘ತಮಿಳುನಾಡು ಸರಕಾರ’ದ ಬದಲಿಗೆ ‘ತಮಿಳಗಆಳುನಾರ್’ ಎಂಬ ಪದವನ್ನು ಬಳಸಿರುವುದು ಇನ್ನೊಂದು ಸುತ್ತಿನ ಸಂಘರ್ಷಕ್ಕೆ ಕಾರಣವಾಗಿದೆ. ಇದಕ್ಕೆ ತಮಿಳುನಾಡು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ತಮಿಳುನಾಡು’ ಎಂಬಹೆಸರಿನ ಬದಲು ‘ತಮಿಳಗಮ್’ ಎಂಬಹೆಸರು ರಾಜ್ಯಕ್ಕೆ ಹೆಚ್ಚು ಸೂಕ್ತವಾಗಿದೆ ಎಂದು ಹೇಳುವ ಮೂಲಕ ರಾಜ್ಯಪಾಲರು ಈಗಾಗಲೇ ವಿವಾದವೊಂದನ್ನು ಸೃಷ್ಟಿಸಿದ್ದರು.

ರಾಜ್ಯಪಾಲರ ನಿವಾಸ ರಾಜಭವನದಲ್ಲಿ ನಡೆಯಲಿರುವ ಪೊಂಗಲ್ ಹಬ್ಬದ ಆಹ್ವಾನಪತ್ರಿಕೆಯನ್ನು ತಮಿಳಿನಲ್ಲಿ ಸಿದ್ಧಪಡಿಸಲಾಗಿದ್ದು, ರಾಜ್ಯ ಸರಕಾರದ ಲಾಂಛನವೂ ಅದರಲ್ಲಿಲ್ಲ. ಅದರಲ್ಲಿ ಭಾರತ ಸರಕಾರದ ಲಾಂಛನಮಾತ್ರಇದೆ.

ಇಂಗ್ಲಿಷ್ ಭಾಷೆಯ ಆಹ್ವಾನ ಪತ್ರಿಕೆಯಲ್ಲಿ ತಮಿಳುನಾಡು ರಾಜ್ಯಪಾಲರ ಹೆಸರನ್ನು ಮಾತ್ರ ಬಳಸಲಾಗಿದೆ.

‘‘ಇಡೀ ದೇಶಕ್ಕೆ ಅನ್ವಯವಾಗುವ ಪ್ರತಿಯೊಂದಕ್ಕೂ ತಮಿಳುನಾಡು ‘ಬೇಡ’ ಎನ್ನುತ್ತದೆ. ಇದು ಅಭ್ಯಾಸ ಆಗಿ ಹೋಗಿದೆ. ಈ ಬಗ್ಗೆ ತುಂಬ ಬರೆಯಲಾಗಿದೆ. ಎಲ್ಲವೂ ಸುಳ್ಳು ಮತ್ತು ಕಲ್ಪನೆ. ಇದನ್ನು ತುಂಡರಿಸಬೇಕು. ಸತ್ಯ ಮೇಲೆ ಬರಬೇಕು. ವಾಸ್ತವವಾಗಿ, ತಮಿಳುನಾಡು ಎನ್ನುವುದು ಭಾರತದ ಆತ್ಮವನ್ನು ಹಿಡಿದಿಡುವ ನೆಲ. ಅದು ಭಾರತದ ಗುರುತು. ನಿಜವಾಗಿ, ಈ ನೆಲವನ್ನು ತಮಿಳಗಮ್ ಎಂದು ಕರೆಯುವುದೇ ಹೆಚ್ಚು ಸೂಕ್ತ. ದೇಶದ ಉಳಿದ ಭಾಗಗಳು ತುಂಬಾ ಸಮಯ ವಿದೇಶೀಯರ ಕೈಯಲ್ಲಿ ವಿನಾಶವನ್ನು ಅನುಭವಿಸಿದವು’’ ಎಂದು ಕಳೆದ ವಾರ ಕಾರ್ಯಕ್ರಮವೊಂದರಲ್ಲಿ ತಮಿಳುನಾಡು ರಾಜ್ಯಪಾಲರು ಹೇಳಿದ್ದರು.

ತಮಿಳುನಾಡು ಎಂದರೆ ‘‘ತಮಿಳರ ದೇಶ’’ ಹಾಗೂ ತಮಿಳಗಮ್ ಎಂದರೆ ‘‘ತಮಿಳು ಜನರ ಮನೆ’’. ಇದು ಈ ವಲಯದ ಪ್ರಾಚೀನ ಹೆಸರಾಗಿದೆ.

‘‘ತಮಿಳಗಮ್’’ ಎಂಬ ಹೆಸರನ್ನು ತೇಲಿ ಬಿಡುವ ಮೂಲಕ ರಾಜ್ಯಪಾಲರು ಪ್ರತಿಪಕ್ಷ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಪೋಷಕ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಕಾರ್ಯಸೂಚಿಯನ್ನು ಜಾರಿಗೊಳಿಸುತ್ತಿದ್ದಾರೆ’’ ಎಂದು ಆಡಳಿತಾರೂಢ ಡಿಎಮ್‌ಕೆ ಮತ್ತು ಅದರ ಮಿತ್ರಪಕ್ಷಗಳು ಆರೋಪಿಸಿವೆ.

‘‘ಅವರು ಸುಳ್ಳು ಮತ್ತು ಸಂಭಾವ್ಯ ಅಪಾಯಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ’’ ಎಂದು ಡಿಎಮ್‌ಕೆ ನಾಯಕ ಟಿ.ಆರ್. ಬಾಲು ಹೇಳಿದ್ದಾರೆ.

ರಾಜ್ಯಪಾಲರ ಆಹ್ವಾನ ಪತ್ರಿಕೆಯು ಕೆಲವು ದಿನಗಳ ಹಿಂದೆಯೇ ಹೊರಬಿದ್ದಿದೆಯಾದರೂ, ಅವರು ಸೋಮವಾರ ರಾಜ್ಯಸರಕಾರದೊಂದಿಗೆ ಜಟಾಪಟಿ ನಡೆಸಿ ವಿಧಾನಸಭೆಯಿಂದ ಸಭಾತ್ಯಾಗ ನಡೆಸಿದ ಬಳಿಕ ವಿವಾದವು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.

► ಸಭಾತ್ಯಾಗ ನಡೆಸಿದ ವೇಗದಲ್ಲೇ ರಾಜ್ಯದಿಂದ ಹೋಗಲಿ: ಸಿಪಿಎಮ್ ಸಂಸದ

ಪೊಂಗಲ್ ಆಚರಣೆಗೆ ಸಂಬಂಧಿಸಿ ರಾಜ್ಯಪಾಲರ ನಿವಾಸವು ಹೊರಡಿಸಿರುವ ಎರಡು ಆಹ್ವಾನ ಪತ್ರಿಕೆಗಳ ಚಿತ್ರಗಳನ್ನು ಸಿಪಿಎಮ್ ಸಂಸದಸು. ವೆಂಕಟೇಶನ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘‘ರಾಜ್ಯಪಾಲರು ಕಳೆದ ವರ್ಷದ ಆಹ್ವಾನ ಪತ್ರಿಕೆಯಲ್ಲಿ ತನ್ನನ್ನು ‘ತಮಿಳುನಾಡು ಗವರ್ನರ್’ ಎಂಬುದಾಗಿ ಕರೆದುಕೊಂಡಿದ್ದರೆ, ಈ ಬಾರಿಯ ಪತ್ರಿಕೆಯಲ್ಲಿ ‘‘ತಮಿಳಗಆಳುನಾರ್’’ ಎಂಬುದಾಗಿ ಕರೆದುಕೊಂಡಿದ್ದಾರೆ. ನಿನ್ನೆ ಅವರು ವಿಧಾನಸಭೆಯಿಂದ ಹೊರನಡೆದ ವೇಗದಲ್ಲೇ ರಾಜ್ಯದಿಂದ ಹೊರಹೋಗಬೇಕು. ಅಥವಾ ಅವರನ್ನು ಉಚ್ಚಾಟಿಸಬೇಕು’’ ಎಂದುವೆಂಕಟೇಶನ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಕೊಯಂಬತೋರ್‌ನಲ್ಲಿ ಪ್ರತಿಭಟನೆ

ತಂತಾರಿ ಪೆರಿಯಾರ್ ದ್ರಾವಿಡರ್ ಕಳಗಮ್ ಮಂಗಳವಾರ ಕೊಯಂಬತೋರ್‌ನಲ್ಲಿ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ವಿರುದ್ಧ ಪ್ರತಿಭಟನೆ ನಡೆಸಿತು. ಈ ಸಂದರ್ಭದಲ್ಲಿ ಪ್ರತಿಭಟನಕಾರರು ರಾಜ್ಯಪಾಲರ ಪ್ರತಿಕೃತಿಯನ್ನು ದಹಿಸಲು ಪ್ರಯತ್ನಿಸಿದರು. ಆದರೆ, ಪೊಲೀಸರು ಮಧ್ಯಪ್ರವೇಶಿಸಿ ಅದನ್ನು ತಡೆದರು. ಕೆಲವು ಕಡೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಸರಕಾರದ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದರು.

Similar News