ನೂರಾರು ತೋಳಗಳ ನಡುವೆ ಒಂದೆರಡು ಮೊಲಗಳು

ಬಿಂಬಗಳು

Update: 2023-01-11 06:29 GMT

(ಸಹಾರ-ಮೊರೊಕ್ಕೊ, ಸ್ಪೇನ್-ಇಸ್ರೇಲ್, ಇಸ್ರೇಲ್-ಫೆಲೆಸ್ತೀನ್, ಪಿಎಲ್‌ಒ-ಫೆಲೆಸ್ತೀನ್)

1975ರಲ್ಲಿ ಮೊರೊಕ್ಕೊ ರಾಜ ಸಹಾರ ಜನರ ತಾಯ್ನೆಲದ ಮೇಲೆ ದಾಳಿ ಮಾಡಿದ. ಅಲ್ಲಿ ಅನಾದಿ ಕಾಲದಿಂದಲೂ ನೆಲೆಸಿದ್ದ ಜನರನ್ನು ಬಹುಸಂಖ್ಯೆಯಲ್ಲಿ ಹೊರಹಾಕಿದ. ಇಂದಿಗೂ ಪಶ್ಚಿಮ ಸಹಾರ ಆಫ್ರಿಕಾದ ಕೊನೆಯ ವಸಾಹತುವಾಗಿಯೇ ಉಳಿದಿದೆ. ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸಿಕೊಳ್ಳುವ ಅವಕಾಶವನ್ನು ಮೊರೊಕ್ಕೊ ಸಹಾರ ಜನಕ್ಕೆ ಇಂದಿಗೂ ನೀಡಿಲ್ಲ. ಹೌದು ‘‘ನಾವು ಆ ದೇಶವನ್ನು ಆಕ್ರಮಿಸಿಕೊಂಡಿದ್ದೇವೆ. ಸ್ಥಳೀಯ ಜನರಿಂದ ಭೂಮಿಯನ್ನು ಕಸಿದುಕೊಂಡಿದ್ದೇವೆ, ಅದನ್ನು ಹಿಂದಿರಿಗಿಸುವ ಯಾವುದೇ ಇರಾದೆ ಇಲ್ಲ’’ ಎಂದು ಯಾವುದೇ ಅಳುಕಿಲ್ಲದೆ ಮೊರೊಕ್ಕೊ ಒಪ್ಪಿಕೊಳ್ಳುತ್ತದೆ. ಈ ಸಹಾರನ್ನರು ಮೋಡದ ಮಕ್ಕಳು, ಮಳೆಯ ಹಿಂಬಾಲಕರು. ಅವರಿಗೀಗ ಯಾತನಾಮಯ ಜೀವಾವಧಿ ಶಿಕ್ಷೆ, ನಿರಂತರ ಗೃಹವಿರಹ. ಈ ಮರುಭೂಮಿಯಲ್ಲೀಗ ನೀರಿಗಿಂತ ವಿರಳ ಸ್ವಾತಂತ್ರ್ಯ!

ಫೆಲೆಸ್ತೀನ್ ತಾಯ್ನೆಲವನ್ನು ಅಕ್ರಮವಾಗಿ ಸ್ವಾಧೀನ ಪಡಿಸಿಕೊಂಡ ಇಸ್ರೇಲ್ ಕ್ರಮವನ್ನು ವಿಶ್ವಸಂಸ್ಥೆ ಸಾವಿರಾರು ಬಾರಿ ಉಗ್ರವಾಗಿ ಖಂಡಿಸಿದೆ. 1948ರಲ್ಲಿ ಇಸ್ರೇಲ್ ಎಂಬ ದೇಶದ ಜನನವಾದಾಗಿನಿಂದ ಸುಮಾರು 8,00,000 ಜನರನ್ನು ಅವರ ಮನೆಯಿಂದ ಹೊರದಬ್ಬಲಾಗಿದೆ. ಮನೆಯಿಂದ ಹೊರನಡೆಯುವಾಗ, ಒಂದಲ್ಲ ಒಂದು ದಿನ ನಾವು ಹಿಂದಿರುಗುವೆವು ಎಂಬ ಆಶಾವಾದದಲ್ಲಿ ತಮ್ಮ ಮನೆಯ ಕೀಲಿಗಳನ್ನು ತೆಗೆದುಕೊಂಡು ಹೋದರಂತೆ. ಸ್ಪೇನ್ ದೇಶದಿಂದ ಯೆಹೂದಿಯರನ್ನು ಹೊರದಬ್ಬಿದಾಗ ಯೆಹೂದಿಯರೂ ಕೂಡ ಅದೇ ರೀತಿ ಕೀಲಿಗಳನ್ನು ಹೊತ್ತು ತಂದಿದ್ದರಂತೆ. ಯೆಹೂದಿಯರು ಎಂದಿಗೂ ಸ್ಪೇನ್ ದೇಶದ ತಮ್ಮ ಮನೆಗಳಿಗೆ ಹಿಂದಿರುಗಿ ಹೋಗಲು ಆಗಲೇ ಇಲ್ಲ. ಫೆಲೆಸ್ತೀನಿಯರು ಕೂಡ ಇದೇ ನಿರಾಸೆಯನ್ನೇ ದಿನನಿತ್ಯ ಎದುರಿಸಿದ್ದಾರೆ.

ಮನೆ ಕಳೆದುಕೊಳ್ಳದೆ ಅಲ್ಲೇ ಉಳಿದುಕೊಂಡವರೇನು ಅದೃಷ್ಟವಂತರಲ್ಲ. ತಮ್ಮದೇ ಸೀಮೆಯನ್ನು ಸತತ ದಾಳಿಗಳಿಂದ ಚೂರು ಚೂರೇ ಇಸ್ರೇಲ್ ಮೇಯುತ್ತಿರುವುದಕ್ಕೆ ದಿನನಿತ್ಯ ಮೂಕಸಾಕ್ಷಿಯಾಗುವ ವೇದನೆ, ಅತೀವ ಅವಮಾನ. ಫೆಲೆಸ್ತೀನ್ ಮಹಿಳೆ ಸೂಸನ್ ಅಬ್ದುಲ್ಲಾಗೆ ಫೆಲೆಸ್ತೀನಿನ ಸಾಮಾನ್ಯ ಜನರು ಭಯೋತ್ಪಾದಕರಾಗಿ ಹೇಗೆ ಬದಲಾಗುತ್ತಾರೆಂಬ ನಿಖರ ಅರಿವಿದೆ-

‘‘ಅನ್ನ ನೀರಿನಿಂದ ವಂಚಿತರಾಗಿಸಿ ಅವನಿರುವ ಮನೆಯನ್ನು ಯುದ್ಧ ಶಸ್ತ್ರಾಸ್ತ್ರಗಳಿಂದ ಸುತ್ತುವರಿಯಿರಿ. ಎಲ್ಲ ಸಮಯದಲ್ಲೂ ಎಲ್ಲ ತರಹದಲ್ಲೂ ದಾಳಿಮಾಡಿ, ವಿಶೇಷವಾಗಿ ಇರುಳಲ್ಲಿ. ಅವರ ಸೂರನ್ನು ಕೆಡವಿ, ಹೊಲವನ್ನು ಹಾಳು ಮಾಡಿ, ಪ್ರೀತಿ ಪಾತ್ರರನ್ನು ಕೊಲ್ಲಿ. ಶುಭಾಶಯಗಳು: ನೀವು ಆತ್ಮಾಹುತಿ ಬಾಂಬರುಗಳ ಸೇನೆಯನ್ನೇ ಹುಟ್ಟಿಹಾಕಿದ್ದೀರಿ.’’

(Deprive him of food and water

Surround his home with the machinery of war.

Attack him with all means at all times, especially at night.

Demolish his home, uproot his farmland, kill his loved ones.

Congratulations: you have created an army of suicide bombers)

(ಹೀಗೆ ಸಹಾರನ್ ಜನರ ಭೂಮಿ ಕಿತ್ತುಕೊಂಡ ಮೊರೊಕ್ಕೊದವರು ಖತರ್ ಫುಟ್ಬಾಲ್ ವಿಶ್ವ ಕಪ್ ಪಂದ್ಯಾವಳಿಯಲ್ಲಿ ಫೆಲೆಸ್ತೀನಿ ಬಾವುಟ ಹಾರಿಸಿ ಸಾಲಿಡಾರಿಟಿ ತೋರಿದ್ದು ನನಗೆ ಸ್ವಲ್ಪಕಸಿವಿಸಿಯಾಯಿತು. ಇಸ್ರೇಲ್‌ನಿಂದ ಮಾತ್ರವಲ್ಲದೆ, ಭ್ರಷ್ಟ ಫೆಲೆಸ್ತೀನ್ ಮುಕ್ತಿ ಸಂಘಟನೆಯಿಂದ (ಪಿಎಲ್‌ಒ) ನಿರಂತರ ವಂಚನೆಗೊಳಗಾಗಿ ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿರುವ ಫೆಲೇಸ್ತೀನಿಯರಿಗಾಗಿ ಮನ ಮತ್ತಷ್ಟು ಮರುಗಿತು.)

Similar News