ವಿಮಾನ ನಿಲ್ದಾಣದಿಂದ ವಾಪಸ್ ಕಳುಹಿಸಿದ್ದ ಘಟನೆಗೆ ಪ್ರಧಾನಿ ಕ್ಷಮೆಯಾಚಿಸಿದ್ದರು ಎಂದ ದರ್ಶನ್ ಸಿಂಗ್ ಧಲಿವಾಲ್
ಪ್ರತಿಭಟನಾ ನಿರತ ರೈತರಿಗೆ ಸಹಾಯ ಮಾಡಿದ್ದ ಅನಿವಾಸಿ ಭಾರತೀಯ
ಹೊಸದಿಲ್ಲಿ: ಕೃಷಿ ಕಾಯಿದೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಲಂಗರ್ ಅಥವಾ ಸಮುದಾಯ ಪಾಕಶಾಲೆ ನಿರ್ಮಿಸಿ ಸಹಾಯ ಮಾಡಿದ್ದಕ್ಕಾಗಿ ಅಮೆರಿಕಾ ಮೂಲದ ಎನ್ನಾರೈ ದರ್ಶನ್ ಸಿಂಗ್ ಧಲಿವಾಲ್ (Darshan Singh Dhaliwal) ಅವರನ್ನು ಅಕ್ಟೋಬರ್ 23- 24, 2021 ರಂದು ದಿಲ್ಲಿ ವಿಮಾನ ನಿಲ್ದಾಣದಿಂದ ವಾಪಸ್ ಕಳುಹಿಸಿದ್ದು ಆ ಸಂದರ್ಭ ವ್ಯಾಪಕ ಸುದ್ದಿಯಾಗಿತ್ತು.
ಇದೀಗ ಅದೇ ಧಲಿವಾಲ್ ಅಚ್ಚರಿಯ ಮಾಹಿತಿಯೊಂದನ್ನು ನೀಡಿದ್ದಾರೆ. ಆ ಘಟನೆಗಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಕಳೆದ ಎಪ್ರಿಲ್ ತಿಂಗಳಿನಲ್ಲಿ "150 ಜನರ ಮುಂದೆ" ತಮ್ಮಿಂದ "ಕ್ಷಮೆಯಾಚಿಸಿದ್ದಾರೆ," ಎಂದು ಮಂಗಳವಾರ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ ಸ್ವೀಕರಿಸಿದ ಧಲಿವಾಲ್ ಹೇಳಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದ ನಂತರ ಮಾಧ್ಯಮವೊಂದಕ್ಕೆ ಮಾತನಾಡಿದ ಧಲಿವಾಲ್, ಕಳೆದ ಎಪ್ರಿಲ್ ತಿಂಗಳಿನಲ್ಲಿ ದಿಲ್ಲಿಯ ತಮ್ಮ ಅಧಿಕೃತ ನಿವಾಸದಲ್ಲಿ ದೊಡ್ಡ ಸಿಖ್ ಗುಂಪೊಂದರ ಜೊತೆ ಮೋದಿ ಸಂವಹನ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದಿದ್ದಾರೆ.
"ಹಮ್ಸೆ ಬಡೀ ಗಲ್ತಿ ಹೋ ಗಯಿ, ಆಪ್ಕೋ ಭೇಜ್ ದಿಯಾ, ಪರ್ ಆಪ್ಕಾ ಬಹುತ್ ಬಡಾ ಬಡಪ್ಪನ್ ಹೈ ಜೋ ಆಪ್ ಹಮಾರೆ ಕೆಹನೆ ಪೆ ಫಿರ್ ಭೀ ಆ ಗಯೇ" (ನಿಮ್ಮನ್ನು ವಾಪಸ್ ಕಳುಹಿಸಿದ್ದು ನಮ್ಮ ದೊಡ್ಡ ತಪ್ಪು, ಆದರೂ ನಮ್ಮ ಮನವಿಯಂತೆ ಇಂದು ಬಂದಿರುವುದು ನಿಮ್ಮ ಹೃದಯ ವೈಶಾಲ್ಯತೆಯನ್ನು ತೋರಿಸುತ್ತದೆ) ಎಂದು ಧಲಿವಾಲ್ ಹೇಳಿದರು.
ಆ ನಿರ್ದಿಷ್ಟ ಸಭೆಯಲ್ಲಿ ಜಗತ್ತಿನಾದ್ಯಂತದ ಸಿಖ್ ಉದ್ಯಮಿಗಳು ಭಾಗವಹಿಸಿದ್ದರು ಎಂದು ಅವರು ಹೇಳಿದರು.