ಪೊಲೀಸ್ ಕೊಲೆ ಆರೋಪಿ ಅನೀಶ್ ರಾಜ್ ಬದಲು ಮುಹಮ್ಮದ್ ಅನೀಶ್ ಎಂದು ವರದಿ ಮಾಡಿದ ಮಾಧ್ಯಮಗಳು: Alt News Fact Check

Update: 2023-01-11 15:27 GMT

ಹೊಸದಿಲ್ಲಿ: ಜನವರಿ 4ರಂದು ಮಹಿಳೆಯೊಬ್ಬರ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಸೆರೆ ಹಿಡಿಯಲು ತೆರಳಿದ್ದ ದಿಲ್ಲಿಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಶಂಭು ದಯಾಳ್ ಮೇಲೆ ಆರೋಪಿಯು ಚಾಕುವಿನಿಂದ ಹಲ್ಲೆ ನಡೆಸಿ, ಹಲವಾರು ಬಾರಿ ಇರಿದಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಅವರು, ಜನವರಿ 8ರಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಈ ಘಟನೆಯನ್ನು ವರದಿ ಮಾಡಿದ್ದ ಹಲವಾರು ಮಾಧ್ಯಮ ಸಂಸ್ಥೆಗಳು ಆರೋಪಿಯನ್ನು ಮುಹಮ್ಮದ್ ಅನೀಶ್ ಎಂದು ಹೆಸರಿಸಿದ್ದವು. ಆದರೆ, ಈ ಕುರಿತು ವಾಸ್ತವ ಪರಿಶೀಲನೆ ನಡೆಸಿರುವ Alt News, ಆರೋಪಿಯ ಹೆಸರು ಅನೀಶ್ ರಾಜ್ ಎಂಬ ಸಂಗತಿಯನ್ನು ಬಯಲು ಮಾಡಿದೆ.

ಈ ಕುರಿತು ಜನವರಿ 8ರಂದು ಟ್ವೀಟ್ ಮಾಡಿದ್ದ ದಿಲ್ಲಿ ಪೊಲೀಸರು, "ಜನವರಿ 4ರಂದು ಮಾಯಾಪುರಿ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಶಂಭು ದಯಾಳ್, ಕಳ್ಳನೊಬ್ಬನನ್ನು ಸೆರೆ ಹಿಡಿಯಲು ತೆರಳಿದ್ದಾಗ, ಆತನಿಂದ ನಡೆದ ಚಾಕುವಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಬಿಎಲ್‌ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಂದು ಹುತಾತ್ಮರಾಗಿದ್ದಾರೆ. ನಮಗೆ ನಮ್ಮ ವೀರ ಅಧಿಕಾರಿಯ ಧೈರ್ಯ ಮತ್ತು ಕರ್ತವ್ಯ ನಿಷ್ಠೆಯ ಬಗ್ಗೆ ಹೆಮ್ಮೆಯಾಗಿದೆ. ಅವರಿಗೆ ಹೃದಯಪೂರ್ವಕ ಶ್ರದ್ಧಾಂಜಲಿಗಳು" ಎಂದು ಹೇಳಿತ್ತು.

ಆದರೆ, ಘಟನೆಯ ಕುರಿತು ತನ್ನಲ್ಲಿ ಪ್ರಸಾರವಾಗಿದ್ದ ಸುದ್ದಿ ತುಣುಕೊಂದನ್ನು ಸುದರ್ಶನ್ ನ್ಯೂಸ್ ಜನವರಿ 8ರಂದು ಟ್ವೀಟ್ ಮಾಡಿತ್ತು. ಆ ಸುದ್ದಿ ತುಣುಕಿನಲ್ಲಿ ಸುದ್ದಿ ವಾಚಕ ಆರೋಪಿಯನ್ನು ಹಲವಾರು ಬಾರಿ 'ಜಿಹಾದಿ ಮುಹಮ್ಮದ್ ಅನೀಶ್' ಎಂದು ಉಲ್ಲೇಖಿಸಿದ್ದನು.

ಉತ್ತರ ಪ್ರದೇಶದ ಮಹಿಳಾ ಮೋರ್ಚಾ ಜೈ ಭಾರತ್ ಮಂಚ್‌ನ ರಾಜ್ಯಾಧ್ಯಕ್ಷೆ ಎಂದು ಹೇಳಿಕೊಂಡಿರುವ ಪ್ರಭಾ ಉಪಾಧ್ಯಾಯ ಕೂಡಾ ಸುದರ್ಶನ್ ನ್ಯೂಸ್‌ನಲ್ಲಿ ಪ್ರಸಾರವಾಗಿದ್ದ ವಾರ್ತೆಯನ್ನು ಹಂಚಿಕೊಂಡಿದ್ದರು. ಆ ವಾರ್ತೆಯಲ್ಲಿ "ಜಿಹಾದಿ ಮುಹಮ್ಮದ್ ಅನೀಶ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಶಂಭು ದಯಾಳ್ ಅವರನ್ನು ಹತ್ಯೆಗೈದಿದ್ದಾನೆ" ಎಂದು ಸುದ್ದಿ ವಾಚಕ ಹೇಳುತ್ತಿರುವುದು ಕೇಳಿಸುತ್ತದೆ.

ಟೈಮ್ಸ್ ನೌ ನವಭಾರತ್ ಸುದ್ದಿ ಸಂಸ್ಥೆ ಕೂಡಾ ತನ್ನ ವರದಿಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಶಂಭು ದಯಾಳ್ ಅವರನ್ನು ಹತ್ಯೆಗೈದ ಶಂಕಿತ ಆರೋಪಿಯ ಹೆಸರು ಮುಹಮ್ಮದ್ ಅನೀಶ್ ಎಂದೇ ಉಲ್ಲೇಖಿಸಿತ್ತು.

ಜನವರಿ 10ರಂದು NDTV ಕೂಡಾ ತನ್ನ ವರದಿಯಲ್ಲಿ ಶಂಕಿತ ಆರೋಪಿಯ ಹೆಸರು ಮುಹಮ್ಮದ್ ಅನೀಶ್ ಎಂದೇ ಉಲ್ಲೇಖಿಸಿತ್ತು. ಈ ಕುರಿತು ಮಾಡಲಾಗಿದ್ದ ಟ್ವೀಟ್‌ನ ಶೀರ್ಷಿಕೆಯಲ್ಲಿ "#ದಿಲ್ಲಿ: ಸಹಾಯಕ ಸಬ್ ಇನ್ಸ್‌ಪೆಕ್ಟರ್ ಶಂಭುನಾಥ್ ಮೇಲೆ ನಡೆದ ದಾಳಿಯ ಸಿಸಿಟಿವಿ ದೃಶ್ಯಾವಳಿಗಳು ಬಹಿರಂಗ, ಚಿಕಿತ್ಸೆಯ ವೇಳೆ ನಿಧನ' ಎಂದು ಬರೆಯಲಾಗಿತ್ತು. ಆ ಶೀರ್ಷಿಕೆಯಲ್ಲಿ ಮೃತ ಪೊಲೀಸ್ ಅಧಿಕಾರಿಯ ಹೆಸರನ್ನು ಶಂಭು ದಯಾಳ್ ಬದಲು ಶಂಭುನಾಥ್ ಎಂದು ನಮೂದಿಸಲಾಗಿತ್ತು.

ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್ ಟ್ವೀಟ್ ಮಾಡಿದ್ದ, ಆಜ್ ತಕ್ ಸುದ್ದಿ ಪ್ರಸಾರದ ತುಣುಕಿನಲ್ಲಿ ನಿರೂಪಕ ಸೈಯೀದ್ ಅನ್ಸಾರಿ ಶಂಕಿತ ಆರೋಪಿಯನ್ನು 'ಮುಹಮ್ಮದ್ ಅನೀಸ್' ಎಂದು ಉಲ್ಲೇಖಿಸಿರುವುದು ಕಂಡು ಬಂದಿತ್ತು.

ಇದಲ್ಲದೆ, ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಲ್, ಸುದರ್ಶನ್ ನ್ಯೂಸ್‌ನ ಸಾಗರ್ ಕುಮಾರ್, ಎಎನ್‌ಐ ಸುದ್ದಿ ಸಂಸ್ಥೆಯ ಹಿರಿಯ ಪತ್ರಕರ್ತ ರವಿ ಜಲ್ಹೋತ್ರಾ, ಸುದರ್ಶನ್ ನ್ಯೂಸ್‌ನೊಂದಿಗೆ ಗುರುತಿಸಿಕೊಂಡಿರುವ ಹಿರಿಯ ಪತ್ರಕರ್ತ ಕುಮಾರ್ ಶ್ರೀವಾಸ್ತವ, ಸುದರ್ಶನ್ ನ್ಯೂಸ್‌ನ ಆಶಿಶ್ ವ್ಯಾಸ್, ಬಿಜೆಪಿಯ ದಿಲ್ಲಿ ವಕ್ತಾರ ಖೇಮ್‌ಚಂದ್ ಶರ್ಮ ಸೇರಿದಂತೆ ಹಲವಾರು ಸಾರ್ವಜನಿಕ ವ್ಯಕ್ತಿಗಳು ಮತ್ತು ಪತ್ರಕರ್ತರು ಘಟನೆಯ ಕುರಿತು ಮಾಡಿರುವ ತಮ್ಮ ಟ್ವೀಟ್‌ಗಳಲ್ಲಿ ಶಂಕಿತ ಆರೋಪಿಯನ್ನು 'ಮೊಹಮ್ಮದ್ ಅನೀಶ್' ಅಥವಾ 'ಜಿಹಾದಿ ಅನೀಶ್' ಎಂದೇ ಉಲ್ಲೇಖಿಸಿದ್ದಾರೆ. ಇವರೊಂದಿಗೆ, ಪ್ರಧಾನಿ ನರೇಂದ್ರ ಮೋದಿ ಹಿಂಬಾಲಿಸುತ್ತಿರುವ ರವಿ ಭಡೋರಿಯಾ ಎಂಬುವವರು ತಮ್ಮ ಟ್ವೀಟ್‌ನಲ್ಲಿ ಆರೋಪಿಯ ಹೆಸರನ್ನು 'ಅನೀಸ್' ಎಂದು ಉಲ್ಲೇಖಿಸಿದ್ದಾರೆ.

ಇದಲ್ಲದೆ ಘಟನೆಯ ಕುರಿತು ಸುದ್ದಿ ಪ್ರಸಾರ ಮಾಡಿದ್ದ ಸುದರ್ಶನ್ ನ್ಯೂಸ್, ಆರೋಪಿಯನ್ನು 'ಜಿಹಾದಿ' ಎಂದು ಬಣ್ಣಿಸಿತ್ತು. ನ್ಯೂಸ್ ಟ್ರ್ಯಾಕ್ ಸುದ್ದಿ ಸಂಸ್ಥೆ ಕೂಡಾ ಆರೋಪಿಯನ್ನು ಹಾಗೇ ಕರೆದಿತ್ತು.

ಈ ಕುರಿತು ಗೂಗಲ್ ಸರ್ಚ್ ಎಂಜಿನ್‌ನಲ್ಲಿ ತಪಾಸಣೆ ನಡೆಸಿರುವ Alt News ಫ್ಯಾಕ್ಟ್‌ಚೆಕ್ ವೇದಿಕೆಗೆ ಜನವರಿ 9ರಂದು Indian Expressನಲ್ಲಿ ಘಟನೆಯ ಕುರಿತು ಪ್ರಕಟವಾಗಿದ್ದ ಸುದ್ದಿ ಪತ್ತೆಯಾಗಿದೆ. ವರದಿಯ ಪ್ರಕಾರ, ತನ್ನಿಂದ ವ್ಯಕ್ತಿಯೊಬ್ಬ ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಶಂಭು ದಯಾಳ್ ಅವರನ್ನು ಸಂಪರ್ಕಿಸಿದ್ದಾರೆ. ಆಕೆಯ ದೂರನ್ನು ಆಲಿಸಿದ ಶಂಭು ದಯಾಳ್, ಆರೋಪಿಯನ್ನು ಪತ್ತೆ ಹಚ್ಚಲು ದೂರುದಾರಳನ್ನು ಕರೆದುಕೊಂಡು ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಶಂಭು ದಯಾಳ್ ಅವರು ಆರೋಪಿಯನ್ನು ಠಾಣೆಗೆ ಕರೆದುಕೊಂಡು ಬರುವಾಗ ಆರೋಪಿಯು ಚಾಕುವನ್ನು ಹೊರತೆಗೆದು ಅವರಿಗೆ ಇರಿದಿದ್ದಾನೆ ಎಂದು ಹೇಳಲಾಗಿದ್ದು, ಶಂಕಿತ ಆರೋಪಿಯನ್ನು ಮಾಯಾಪುರಿ ನಿವಾಸಿ ಅನೀಶ್ ರಾಜ್ (24) ಎಂದು ಗುರುತಿಸಲಾಗಿದೆ ಎಂದೂ ಹೇಳಲಾಗಿದೆ.

ತದನಂತರ, ಘಟನೆ ಜರುಗಿದ ಜನವರಿ 4ರಂದು ದಿಲ್ಲಿ ಪೊಲೀಸರು ವಾಟ್ಸ್ ಆ್ಯಪ್ ಮೂಲಕ ಬಿಡುಗಡೆ ಮಾಡಿದ್ದ ಪತ್ರಿಕಾ ಪ್ರಕಟಣೆಯನ್ನು Alt News ಫ್ಯಾಕ್ಟ್‌ಚೆಕ್ ವೇದಿಕೆ ಪರಿಶೀಲಿಸಿದೆ. ಆ ಪತ್ರಿಕಾ ಪ್ರಕಟಣೆಯ ಪ್ರಕಾರ, ಆರೋಪಿಯು ಪ್ರಹ್ಲಾದ್ ರಾಜ್ ಎಂಬುವವರ ಪುತ್ರ ಅನೀಶ್ ಎಂದಿದೆ.

ಇದರೊಂದಿಗೆ Alt News ಫ್ಯಾಕ್ಟ್‌ಚೆಕ್ ವೇದಿಕೆಯು ಪಶ್ಚಿಮ ಮಾಯಾಪುರಿ ಪೊಲೀಸ್ ಠಾಣೆಯ ಠಾಣಾಧಿಕಾರಿಯನ್ನು ಸಂಪರ್ಕಿಸಿದಾಗ, " ಆರೋಪಿಯು ಹಿಂದೂ ಸಮುದಾಯಕ್ಕೆ ಸೇರಿದ್ದು, ಘಟನೆಯು ಯಾವುದೇ ಕೋಮು ನೆಲೆಯನ್ನು ಹೊಂದಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ, ದಿಲ್ಲಿಯ ಮಾಯಾಪುರಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ನಡೆದ ಚಾಕು ಇರಿತ ಪ್ರಕರಣದ ಕುರಿತು ಹಲವಾರು ಮಾಧ್ಯಮ ಸಂಸ್ಥೆಗಳು ತಪ್ಪಾಗಿ ವರದಿ ಮಾಡಿದ್ದು, ಆರೋಪಿಯ ಹೆಸರನ್ನು ತಪ್ಪಾಗಿ ಉಲ್ಲೇಖಿಸಿವೆ. ಸುದರ್ಶನ್ ನ್ಯೂಸ್ ಹಾಗೂ ಅದರಲ್ಲಿನ ಪತ್ರಕರ್ತರು ಘಟನೆಯನ್ನು ಕೋಮುವಾದೀಕರಣಗೊಳಿಸಿದ್ದು, ಆರೋಪಿಯನ್ನು 'ಜಿಹಾದಿ' ಎಂದು ಬಣ್ಣಿಸಿವೆ ಎಂದು Alt News ವರದಿ ಮಾಡಿದೆ.

ಕಳೆದ ವರ್ಷ ದಿಲ್ಲಿಯ ನಾರಾಯಣದಲ್ಲಿ ನಡೆದಿದ್ದ ಚಾಕು ಇರಿತ ಪ್ರಕರಣಕ್ಕೂ ಕೂಡಾ ಸಾಮಾಜಿಕ ಮಾಧ್ಯಮ ಬಳಕೆದಾರರು ಹಾಗೂ ರಾಜಕಾರಣಿಗಳು ಕೋಮು ಬಣ್ಣ ಹಚ್ಚಿದ್ದರು.

Similar News