ಭಾರತದಲ್ಲಿ ಬದುಕಲು ಮುಸ್ಲಿಮರಿಗೆ 'ಅನುಮತಿ' ನೀಡಲು ಮೋಹನ್‌ ಭಾಗ್ವತ್‌ ಯಾರು: ಉವೈಸಿ ವಾಗ್ದಾಳಿ

Update: 2023-01-11 15:30 GMT

ಹೊಸದಿಲ್ಲಿ: ಮುಸ್ಲಿಮರ ಬಗ್ಗೆ ಹಾಗೂ ಅವರು ಭಾರತದಲ್ಲಿ ಹೇಗಿರಬೇಕು ಎಂಬ ಬಗ್ಗೆ ಆರೆಸ್ಸೆಸ್‌ (RSS) ಮುಖ್ಯಸ್ಥ ಮೋಹನ್‌ ಭಾಗ್ವತ್‌ (Mohan Bhagwat) ಅವರ ಹೇಳಿಕೆಗೆ ಕಿಡಿಕಾರಿರುವ ಎಐಎಂಐಎಂ (AIMIM) ಮುಖ್ಯಸ್ಥ ಅಸದುದ್ದೀನ್‌ ಉವೈಸಿ (Asaduddin Owaisi), "ಅವರು ನಮ್ಮ ಪೌರತ್ವದ ಮೇಲೆ ಷರತ್ತುಗಳನ್ನು ವಿಧಿಸುವ ಧೈರ್ಯ ಹೇಗೆ ತೋರಿದ್ದಾರೆ?" ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಉವೈಸಿ ಟ್ವೀಟ್‌ ಮಾಡಿದ್ದಾರೆ. "ಭಾರತದಲ್ಲಿ ಬದುಕಲು ಮತ್ತು ನಮ್ಮ ಧರ್ಮವನ್ನು ಅನುಸರಿಸಲು ಮುಸ್ಲಿಮರಿಗೆ ʼಅನುಮತಿʼಯನ್ನು ನೀಡಲು ಮೋಹನ್‌ ಯಾರು? ನಾವು ಭಾರತೀಯರು ಏಕೆಂದರೆ ಅದು ಅಲ್ಲಾಹನ ಇಚ್ಛೆ. ನಮ್ಮ ಪೌರತ್ವದ ಮೇಲೆ ಅವರು ಹೇಗೆ ʼಷರತ್ತುಗಳನ್ನುʼ ವಿಧಿಸಬಹುದು. ನಾವು ನಮ್ಮ ಧರ್ಮವನ್ನು ʼಸರಿಹೊಂದಿಸಲುʼ ಅಥವಾ ನಾಗ್ಪುರ್‌ನ ಬ್ರಹ್ಮಚಾರಿಗಳೆಂದು ಹೇಳಲಾದ ಒಂದು ಗುಂಪನ್ನು ಓಲೈಕೆ ಮಾಡಲು ಇಲ್ಲಿಲ್ಲ," ಎಂದು ಉವೈಸಿ ಪ್ರತಿಕ್ರಿಯಿಸಿದ್ದಾರೆ.

ಇಬ್ಬಗೆ ನೀತಿಗೆ ಆರೆಸ್ಸೆಸ್‌ ಮತ್ತು ಭಾಗ್ವತ್‌ ಅವರನ್ನು ಟೀಕಿಸಿದ ಉವೈಸಿ, ಚೀನಾ ಬಗ್ಗೆ ಅವರ ಮೃದು ಧೋರಣೆ ಮತ್ತು ʼಸಹ-ನಾಗರಿಕರʼ ಬಗ್ಗೆ  ಭಿನ್ನ ಧೋರಣೆಯನ್ನು ಪ್ರಶ್ನಿಸಿದರು. "ನಾವು ನಿಜವಾಗಿಯೂ ಯುದ್ಧದ ಹೊಸ್ತಿಲಿನಲ್ಲಿದ್ದೇವೆಯಾದರೆ, ಸ್ವಯಂಸೇವಕ ಸರಕಾರ 8+ ವರ್ಷಗಳಿಂದ ನಿದ್ದೆಯಲ್ಲಿತ್ತೇ? ಆರೆಸ್ಸೆಸ್‌ ಸಿದ್ಧಾಂತ ದೇಶದ ಭವಿಷ್ಯಕ್ಕೆ ಅಪಾಯಕಾರಿ. ನಿಜವಾದ "ಆಂತರಿಕ ವೈರಿಗಳ" ಬಗ್ಗೆ ಭಾರತೀಯರು ಶೀಘ್ರ ತಿಳಿದಷ್ಟು ಉತ್ತಮ," ಎಂದು ಅವರು ಹೇಳಿದರು.

ಇತ್ತೀಚೆಗೆ ಭಾಗ್ವತ್‌ ಅವರು ಆರೆಸ್ಸೆಸ್‌ ಸಂಯೋಜಿತ ಆರ್ಗನೈಸರ್‌ ಮತ್ತು ಪಾಂಚಜನ್ಯ ನಿಯತಕಾಲಿಕಗಳಿಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿ ಭಾರತದಲ್ಲಿ ಮುಸ್ಲಿಮರಿಗೆ ಭಯ ಪಡಲು ಏನೂ ಇಲ್ಲ ಎಂದಿದ್ದರಲ್ಲದೆ ಮುಸ್ಲಿಮರು ಶ್ರೇಷ್ಠತೆಯ ಮೇಲೆ ತಮ್ಮ ಹಕ್ಕುಸ್ಥಾಪನೆಯನ್ನು ಕೈಬಿಡಬೇಕೆಂದು ಸಲಹೆ ನೀಡಿದ್ದರು.

ಇದನ್ನೂ ಓದಿ: ಪೊಲೀಸ್ ಕೊಲೆ ಆರೋಪಿ ಅನೀಶ್ ರಾಜ್ ಬದಲು ಮುಹಮ್ಮದ್ ಅನೀಶ್ ಎಂದು ವರದಿ ಮಾಡಿದ ಮಾಧ್ಯಮಗಳು: Alt News Fact Check

Similar News