ಡಿಜಿಟಲ್ ವಹಿವಾಟುಗಳ ಉತ್ತೇಜನಕ್ಕೆ 2,600 ಕೋ.ರೂ.ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ

Update: 2023-01-11 17:13 GMT

ಹೊಸದಿಲ್ಲಿ,ಜ.11: ದೇಶದಲ್ಲಿ ಡಿಜಿಟಲ್ ಪಾವತಿಗಳನ್ನು ಹೆಚ್ಚಿಸುವ ಪ್ರಯತ್ನವಾಗಿ ರುಪೇ ಡೆಬಿಟ್ ಕಾರ್ಡ್‌ಗಳು ಮತ್ತು ಸಣ್ಣ ಮೌಲ್ಯದ ಭೀಮ್-ಯುಪಿಐ ವಹಿವಾಟುಗಳನ್ನು ಉತ್ತೇಜಿಸಲು 2,600 ಕೋ.ರೂ.ಗಳ ಯೋಜನೆಯನ್ನು ಕೇಂದ್ರ ಸಂಪುಟವು ಬುಧವಾರ ಅನುಮೋದಿಸಿದೆ.

ಯೋಜನೆಯಡಿ ಪ್ರಸಕ್ತ ಹಣಕಾಸು ವರ್ಷ (2022-23)ದಲ್ಲಿ ರುಪೇ ಮತ್ತು ಯುಪಿಐ ಬಳಸಿ ಪಾಯಿಂಟ್ ಆಫ್ ಸೇಲ್ (ಪಿಒಎಸ್) ಮತ್ತು ಇ-ಕಾಮರ್ಸ್ ವಹಿವಾಟುಗಳನ್ನು ಉತ್ತೇಜಿಸಲು ಬ್ಯಾಂಕುಗಳಿಗೆ ಆರ್ಥಿಕ ಪ್ರೋತ್ಸಾಹಗಳನ್ನು ನೀಡಲಾಗುತ್ತದೆ.

ಯೋಜನೆಯು ಸದೃಢ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ನೆರವಾಗುತ್ತದೆ ಹಾಗೂ ‘ಸಬ್ ಕಾ ಸಾಥ್,ಸಬ್ ಕಾ ವಿಕಾಸ್’ನ ಗುರಿಗೆ ಅನುಗುಣವಾಗಿ ಯುಪಿಐ ಲೈಟ್ ಮತ್ತು ಯುಪಿಐ123 ಪೇ ಅನ್ನು ಆರ್ಥಿಕ ಮತ್ತು ಬಳಕೆದಾರ ಸ್ನೇಹಿ ಡಿಜಿಟಲ್ ಪಾವತಿ ಪರಿಹಾರಗಳನ್ನಾಗಿ ಉತ್ತೇಜಿಸುತ್ತದೆ ಎಂದು ಸರಕಾರವು ಹೇಳಿಕೆಯಲ್ಲಿ ತಿಳಿಸಿದೆ.

ಈ ಎಲ್ಲ ವರ್ಷಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಂಡಿರುವ ಡಿಜಿಟಲ್ ಪಾವತಿ ವಹಿವಾಟುಗಳು ಸಣ್ಣ ವ್ಯಾಪಾರಿಗಳು ಸೇರಿದಂತೆ ವ್ಯವಹಾರಗಳ ನಿರ್ವಹಣೆಯನ್ನು ಸುಗಮಗೊಳಿಸಿದೆ ಮತ್ತು ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವಲ್ಲಿ ನೆರವಾಗಿವೆ ಎಂದು ಸರಕಾರವು ತಿಳಿಸಿದೆ.

ಪ್ರಸ್ತುತ ವರ್ಷದ ಯೋಜನೆಯನ್ನು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23ನೇ ಸಾಲಿನ ಮುಂಗಡಪತ್ರ ಮಂಡನೆ ಸಂದರ್ಭದಲ್ಲಿ ಡಿಜಿಟಲ್ ಪಾವತಿಗಳಿಗೆ ಹಣಕಾಸು ಬೆಂಬಲವನ್ನು ಮುಂದುವರಿಸಲು ಸರಕಾರವು ಉದ್ದೇಶಿಸಿದೆ ಎಂದು ನೀಡಿದ್ದ ಹೇಳಿಕೆಗೆ ಅನುಗುಣವಾಗಿ ರೂಪಿಸಲಾಗಿದೆ. 2021-22ರಲ್ಲಿಯೂ ಬಜೆಟ್ ಘೋಷಣೆಗೆ ಅನುಗುಣವಾಗಿ ಸರಕಾರವು ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ಪ್ರೋತ್ಸಾಹ ಯೋಜನೆಗೆ ಒಪ್ಪಿಗೆ ನೀಡಿತ್ತು.

Similar News