×
Ad

ಶತಮಾನದ ಅಂಚಿನಲ್ಲಿರುವ 150ಕ್ಕೂ ಅಧಿಕ ಮಕ್ಕಳಿದ್ದರೂ ಸರಕಾರದ ಸೌಕರ್ಯ ವಂಚಿತ ಕೊಡ್ಲಾಡಿ ಶಾಲೆ..!

*ಶಿಥಿಲ ಕಟ್ಟಡ ಕೆಡವಿ, ಹೊಸ ಕಟ್ಟಡ ನಿರ್ಮಾಣಕ್ಕೆ ಪೋಷಕರ ಆಗ್ರಹ

Update: 2023-01-11 22:50 IST

ಕುಂದಾಪುರ: ಸರಕಾರಿ ಕನ್ನಡ ಶಾಲೆ ಉಳಿಸಿ ಬೆಳೆಸಬೇಕು ಎಂಬ ಮಾತು ಕೇವಲ ಭಾಷಣಕ್ಕೆ ಸೀಮಿತವಾಗಿದೆ ಎಂಬ ಆರೋಪದ ನಡುವೆಯೇ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಮುಖ್ಯಸ್ಥರು ತನ್ನ ಹುಟ್ಟೂರ ಕನ್ನಡ ಶಾಲೆಯನ್ನು ದತ್ತು ಪಡೆಯುವ ಮೂಲಕ ಬಹಳಷ್ಟು ಅಭಿವೃದ್ಧಿ ಮಾಡಿದ್ದರಿಂದ 6 ವರ್ಷದ ಹಿಂದೆ ಕೇವಲ 17 ಮಕ್ಕಳಿದ್ದ ಸರಕಾರಿ ಶಾಲೆಯಲ್ಲಿ ಇದೀಗ 152 ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಆದರೆ ಶಾಲೆಗೆ ಈಗಲೂ ಸರಕಾರಿ ಸೌಲಭ್ಯ ಎಂಬುದು ಮಾತ್ರ ಮರೀಚಿಕೆಯಾಗಿದೆ.

ಕುಂದಾಪುರ ತಾಲೂಕಿನ ಬಾಂಡ್ಯ ಕೊಡ್ಲಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಥೆಯಿದು. 1926ರಲ್ಲಿ ಆರಂಭವಾದ ಈ ಕನ್ನಡ ಶಾಲೆ ಶತಮಾನದ ಹೊಸ್ತಿಲಲ್ಲಿದೆ. ಮೊದಲಿಗೆ ಕಿರಿಯ ಪ್ರಾಥಮಿಕ ಶಾಲೆ ಯಾಗಿದ್ದು, ಕಳೆದ ಮೂರ್ನಾಲ್ಕು ವರ್ಷದ ಹಿಂದೆ ಬಾಂಡ್ಯ ಎಜ್ಯುಕೇಶನ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕರಾದ ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ, ಅನುಪಮಾ ಎಸ್. ಶೆಟ್ಟಿ ದಂಪತಿ ಹುಟ್ಟೂರ ಶಾಲೆಯ ಉನ್ನತೀಕರಣಕ್ಕೆ ಪಣತೊಟ್ಟು ಹಳೆ ವಿದ್ಯಾರ್ಥಿಗಳು, ಪೋಷಕರ ಸಭೆ ಕರೆದು ಚಿಂತನೆ ನಡೆಸುತ್ತಾರೆ. ಬಳಿಕ ಶಾಲೆಯನ್ನು ದತ್ತು ಪಡೆಯುವ ಪ್ರಕ್ರಿಯೆ ನಡೆಯುತ್ತದೆ. 

ಹಲವು ತೊಡಕುಗಳ ನಡುವೆಯೇ ದತ್ತು ಸ್ವೀಕಾರ ನಡೆದು, 2021ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತಿಸುವ ಕಾರ್ಯವಾಗುತ್ತದೆ. ಬಳಿಕ ಹಂತಹಂತವಾಗಿ ಹಳೆ ಕಟ್ಟಡದ ರಿಪೇರಿ, ಆಟೋಪಕರಣಗಳು, ಶಾಲಾ ವಾಹನಗಳ ಕೊಡುಗೆ ಬಾಂಡ್ಯ ಸಹೋದರರು ಹಾಗೂ ದಾನಿಗಳ ಮೂಲಕ ಲಭ್ಯವಾಗುತ್ತದೆ. 

ಪೀಠೋಪಕರಣ, ಶಾಲಾ ಮೈದಾನ ನಿರ್ಮಾಣ ಸಹಿತ ಅಗತ್ಯ ಕೆಲವು ವ್ಯವಸ್ಥೆ ಕಲ್ಲಿಸಿದ ಪರಿಣಾಮವೇ ಶಾಲೆಯಲ್ಲಿ ಎಲ್.ಕೆ.ಜಿ, ಯುಕೆಜಿ ಸೇರಿ 1ರಿಂದ 7 ತನಕ ಈಗ ಒಟ್ಟು 152 ಮಕ್ಕಳು ದಾಖಲಾಗುವ ಮೂಲಕ ಸರಕಾರಿ ಶಾಲೆಯ ಗಟ್ಟಿತನ ತೋರುವಂತಾಗಿತ್ತು. ಕಳೆದ ವರ್ಷ ಸುಭಾಶ್ಚಂದ್ರ ಶೆಟ್ಟಿಯವರು ತಾಯಿ ಚಂದಮ್ಮ ಶೆಡ್ತಿಯವರ ಸ್ಮರಣಾರ್ಥ ದೊಡ್ಡದೊಂದು ಸಭಾಭವನ ನಿರ್ಮಿಸಿಕೊಟ್ಟಿದ್ದು, ಇದೀಗ ತಮ್ಮದೆ ವಕ್ವಾಡಿಯ ಗುರುಕುಲ ಪಬ್ಲಿಕ್ ಶಾಲೆ ವಿದ್ಯಾಸಂಸ್ಥೆ ಮೂಲಕ ’ಕದಂಬ’ ಹೆಸರಿನಲ್ಲಿ ಎಲ್.ಕೆ.ಜಿ., ಯು.ಕೆ.ಜಿ ಹಾಗ ನಲಿಕಲಿ ತರಗತಿಗಾಗಿ ಅಂದಾಜು 30 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಇತ್ತೀಚೆಗೆ ಇದರ ಲೋಕಾರ್ಪಣೆಯಾಗಿದೆ.

ಸರಕಾರದ ನಿಷ್ಕಾಳಜಿ..!

ಖಾಸಗಿ ವಿದ್ಯಾಸಂಸ್ಥೆಯೊಂದು ಸರಕಾರಿ ಶಾಲೆ ಅಭಿವೃದ್ದಿಗೆ ಲಕ್ಷಾಂತರ ಖರ್ಚು ಮಾಡಿ ಅಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಿದ್ದು ಪ್ರಶಂಸಾರ್ಹ ಸಂಗತಿಯಾದರೂ, ಶಿಕ್ಷಣ ಇಲಾಖೆ ಮಾತ್ರ ಕೊಡ್ಲಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಗ್ಗೆ ಯಾವುದೇ ಕಾಳಜಿ ವಹಿಸಿಲ್ಲ. 152 ವಿದ್ಯಾರ್ಥಿ ಗಳಿರುವ ಶಾಲೆಗೆ ಒಬ್ಬರು ಮುಖ್ಯ ಶಿಕ್ಷಕರು ಮಾತ್ರ ಪರ್ಮನೆಂಟ್ ಆಗಿದ್ದು ಮೂವರು ಅತಿಥಿ ಶಿಕ್ಷಕರನ್ನು ಸರಕಾರ ನಿಯೋಜಿಸಿದೆ. ಉಳಿದಂತೆ ಐವರು ಶಿಕ್ಷಕಿಯರನ್ನು ಗುರುಕುಲ ವಿದ್ಯಾಸಂಸ್ಥೆ ಮೂಲಕ ಇಲ್ಲಿಗೆ ನಿಯೋಜಿಸಲಾಗಿದೆ. 

ಶಾಲೆಗೆ ಈಗಲೂ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ, ಮುಖ್ಯೋಪಾಧ್ಯಾಯರ ಕೊಠಡಿಯಿಲ್ಲ, ಶಾಲಾ ಮಕ್ಕಳ ಸಂಖ್ಯೆಗೆ ತಕ್ಕಂತೆ ಅಡುಗೆ ಕೋಣೆ, ಶೌಚಾಲಯ ವ್ಯವಸ್ಥೆಯಿಲ್ಲ. ಶಾಲೆಯ ಆವರಣಕ್ಕೆ ಕಾಂಪೌಂಡ್ ಗೋಡೆ ನಿರ್ಮಿಸಿಲ್ಲ. ಸರಕಾರ ಈ ಬಗ್ಗೆ ಮುತುವರ್ಜಿ ವಹಿಸಬೇಕು ಎಂಬುದು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಮಡಿವಾಳ ಅವರ ಆಗ್ರಹ.

ಶಿಥಿಲಾವಸ್ಥೆಯಲ್ಲಿದೆ ಶಾಲೆಯ ಹಳೆ ಕಟ್ಟಡ..!

ಈ ಶಾಲೆಯ ಹಳೆ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು ಮೇಲ್ಮಾಡು ಸಂಪೂರ್ಣ ಜಖಂಗೊಂಡಿದೆ. ಗೋಡೆಗಳು ಬಿರುಕು ಬಿಟ್ಟಿವೆ. ಪ್ರತಿನಿತ್ಯ 4ರಿಂದ 7ನೇ ತರಗತಿವರೆಗಿನ 90 ವಿದ್ಯಾರ್ಥಿಗಳು ಈ ಕಟ್ಟಡದಲ್ಲಿ ಆತಂಕದಿಂದಲೇ ಕುಳಿತುಕೊಂಡು ವಿದ್ಯೆ ಕಲಿಯಬೇಕಿದೆ. ಬಾಂಡ್ಯ ಸಹೋದರರ ಮೂಲಕ ಎರಡು ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ರಿಪೇರಿ ಮಾಡಲಾಯಿತಾದರೂ ಕಟ್ಟಡ ಮಾತ್ರ ಈಗಲೋ ಆಗಲೋ ಎಂಬಂತಿದೆ. 
ಈ ಶಿಥಿಲ ಕಟ್ಟಡ ಕೆಡವಿ, ಕದಂಬ ಕಟ್ಟಡದ  ಸನಿಹ ಹೊಸ ಶಾಲಾ ಕಟ್ಟಡ ಕಟ್ಟಿದಲ್ಲಿ ವಿಸ್ತಾರವಾದ ಕ್ರೀಡಾಂಗಣ ರಚನೆ ಸಾಧ್ಯವಿದೆ. ಸದ್ಯ ಈ ಶಿಥಿಲ ಕಟ್ಟಡ ಶಾಲಾ ವಿದ್ಯಾರ್ಥಿಗಳು ಮತ್ತು ಪೋಷಕರ ಆತಂಕಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳ ಪೊಷಕರು ನಮ್ಮನ್ನು ನಂಬಿ ಶಾಲೆಗೆ ಕಳುಹಿಸುತಿದ್ದಾರೆ. ಏನಾದರೂ ಹೆಚ್ಚುಕಮ್ಮಿ ಆದರೆ ಹೊಣೆಯಾರು? ಸರಕಾರಕ್ಕೂ ಮನವಿ ಮಾಡಿದರೂ ಸ್ಪಂದನೆಯಿಲ್ಲ. ಸಮಸ್ಯೆಯಾದರೆ ಇದಕ್ಕೆ ಸರಕಾರವೇ ಹೊಣೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರತ್ನಾಕರ ಆಚಾರ್ಯ ಹೇಳುತ್ತಾರೆ.



ಕನ್ನಡ ಶಾಲೆಗೆ ಗುರುಕುಲ ವಿದ್ಯಾಸಂಸ್ಥೆ, ಬಾಂಡ್ಯ ಸಹೋದರರು ಹಾಗೂ ದಾನಿಗಳು ನೀಡಿದ ಸಹಕಾರದಿಂದಲೇ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ವಾಗಿ ಹೆಚ್ಚಲು ಸಾಧ್ಯವಾಗಿದೆ. ಕನ್ನಡ ಶಾಲೆಯಲ್ಲಿ ಇಂಗ್ಲೀಷ್ ಕಲಿಕೆಗೆ ಬಹಳಷ್ಟು ಒತ್ತು ನೀಡಲಾಗಿದೆ. ಶಿಥಿಲಾವಸ್ಥೆಯ ಕಟ್ಟಡ ತೆರವಾಗಬೇಕಿದೆ. ಈಗಾಗಲೇ ಒಂದು ಕೊಠಡಿ ಸರ್ಕಾರದಿಂದ ಮಂಜೂರಾಗಿದೆ. ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಇನ್ನೂ ಕೊಠಡಿ ಅಗತ್ಯವಿದ್ದು ಅದೆಲ್ಲಾ ಈಡೇರಿದಲ್ಲಿ ಇನ್ನೂ ಕೂಡ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲಿದೆ.

-ಸಂತೋಷ್‌ಕುಮಾರ್‌ಶೆಟ್ಟಿ, ಕೊಡ್ಲಾಡಿ ಶಾಲೆಯ ಮುಖ್ಯೋಪಾಧ್ಯಾಯ.

ಹುಟ್ಟೂರ ಋಣ,  ಕಲಿತ ಶಾಲೆಯ ಋಣ ತೀರಿಸಲು ಚಿಂತನೆ ಮಾಡಿ ಕುಗ್ರಾಮವಾದ ಊರಿನ ಅಳಿವಿನಂಚಿನ ಶಾಲೆಯನ್ನು ಉಳಿಸುವ ಪ್ರಯತ್ನದ ಜೊತೆಗೆ ಇಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ಯಾವುದೇ ಆಂಗ್ಲ ಮಾಧ್ಯಮ ಶಾಲೆಗೆ ಕಮ್ಮಿಯಿಲ್ಲದ ಗುಣಮಟ್ಟದ ಶಿಕ್ಷಣ ನೀಡುವ ಬದ್ಧತೆಯಡಿ ಈ ಕಾರ್ಯ ಮಾಡಿದ್ದೇವೆ.

-ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ವಕ್ವಾಡಿ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಕ.

ಖಾಸಗಿ ಶಿಕ್ಷಣ ಸಂಸ್ಥೆಯೊಂದು ಮುಚ್ಚುವ ಹಂತದಲ್ಲಿದ್ದ ಸರ್ಕಾರಿ ಕನ್ನಡ ಶಾಲೆಯನ್ನು ದತ್ತು ಪಡೆದು ಈ ಮಟ್ಟಿಗೆ ಅಭಿವೃದ್ಧಿ ಮಾಡಿರುವುದು ಶ್ಲಾಘನೀಯ ವಿಚಾರ. ಶಾಲೆಯ ಮತ್ತಷ್ಟು ಅಭಿವೃದ್ಧಿಯಲ್ಲಿ ಸರ್ಕಾರ, ಜನಪ್ರತಿನಿಧಿಗಳು ಮುತುವರ್ಜಿ ವಹಿಸಬೇಕು. ಸರ್ಕಾರದ ಜಿ.ಪಂ ಹಾಗೂ ತಾ.ಪಂ ಆಡಳಿತ ವ್ಯವಸ್ಥೆ ನಿರ್ಜೀವವಾಗಿರುವುದರಿಂದ ಶಾಲೆಯ ಕೆಲವು ಅಭಿವೃದ್ಧಿ ಹಾಗೂ ರಿಪೇರಿ ಕಾರ್ಯವಾಗುತ್ತಿಲ್ಲ.

-ಪ್ರಭಾಕರ್ ಆಚಾರ್, ಪೋಷಕರು

Similar News