ನಾವು ಅಧಿಕಾರಕ್ಕೆ ಬಂದರೆ ಮುಸ್ಲಿಮರನ್ನು ಹೊರಗಿಟ್ಟು ಸಂವಿಧಾನ ಪುನರ್‌ರಚಿಸುತ್ತೇವೆ: ಪ್ರವೀಣ್‌ ತೊಗಾಡಿಯಾ

"ಎರಡು ಕೋಟಿ ಹಿಂದೂ ಯುವಕ-ಯುವತಿಯರಿಗೆ ತ್ರಿಶೂಲ ವಿತರಣೆ"

Update: 2023-01-12 16:36 GMT

ಹೊಸದಿಲ್ಲಿ: ಕೇವಲ ಹಿಂದೂಗಳ ಹಿತಾಸಕ್ತಿಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಭಾರತದ ಸಂವಿಧಾನವನ್ನು ಪುನರ್ ರಚಿಸುವ ಅಗತ್ಯವಿದೆ ಎಂದು ಅಂತರರಾಷ್ಟ್ರೀಯ ಹಿಂದೂ ಪರಿಷತ್ ಅಧ್ಯಕ್ಷ ಪ್ರವೀಣ್ ತೊಗಾಡಿಯಾ (Antarashtriya Hindu Parishad Pravin Togadia) ಹೇಳಿದ್ದಾರೆ ಎಂದು siasat.com ವರದಿ ಮಾಡಿದೆ.

ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿರುವ ವೀಡಿಯೊವೊಂದರಲ್ಲಿ ಉತ್ತರಾಖಂಡ್‌ನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿರುವ ತೊಗಾಡಿಯಾ, ಮುಸ್ಲಿಮರನ್ನು 'ಹೊಸ ಸಂವಿಧಾನ'ದಲ್ಲಿ ಸೇರಿಸಬಾರದು ಎಂದು ಹೇಳುವುದು ಕಂಡುಬಂದಿದೆ.

"ನಾವು ಅಧಿಕಾರಕ್ಕೆ ಬಂದಾಗ, ನಾವು ಭಾರತದ ಸಂವಿಧಾನವನ್ನು ಬದಲಾಯಿಸುತ್ತೇವೆ ಮತ್ತು ಯಾವುದೇ ಮುಸ್ಲಿಮರು ಸರ್ಕಾರಿ ಹುದ್ದೆಗೆ ಆಯ್ಕೆಯಾಗದಂತೆ ನೋಡಿಕೊಳ್ಳುತ್ತೇವೆ" ಎಂದು ಅವರು ಹೇಳಿದರು.

ಜನಸಂಖ್ಯೆ ನಿಯಂತ್ರಣ ಕಾನೂನಿನ ಅಗತ್ಯವಿದೆ ಎಂದು ಹೇಳಿದ ತೊಗಾಡಿಯಾ, ಹೊಸ ಸಂವಿಧಾನದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಸಬ್ಸಿಡಿ ಧಾನ್ಯಗಳನ್ನು ನೀಡಲಾಗುವುದಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಅಥವಾ ಶಾಲೆಗಳಲ್ಲಿ ಶಿಕ್ಷಣವಿಲ್ಲ. ಸರ್ಕಾರಿ ಬ್ಯಾಂಕ್‌ಗಳಿಂದ ಸಾಲವಿಲ್ಲ, ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಹಕ್ಕಿಲ್ಲ, ಹಾಗೆಯೇ ಮತದಾನದ ಹಕ್ಕಿಲ್ಲ ಎಂದು ಹೇಳಿದ್ದಾರೆ.
 
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತೊಗಾಡಿಯಾ, ‘ವೀರ್ ಹಿಂದೂ ವಿಜೇತ ಹಿಂದೂ’ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಇದರಲ್ಲಿ ಸುಮಾರು ಎರಡು ಕೋಟಿ ಹಿಂದೂ ಯುವಕ-ಯುವತಿಯರಿಗೆ ಅವರ ಸುರಕ್ಷತೆಗಾಗಿ ತ್ರಿಶೂಲಗಳನ್ನು ವಿತರಿಸಲಾಗುವುದು ಎಂದು ಹೇಳಿದರು.

ಈ ಅಭಿಯಾನದಡಿ, ಯುವಕರು ವ್ಯಾಯಾಮಕ್ಕಾಗಿ ಖೋ-ಖೋ, ಕ್ರಿಕೆಟ್, ಕಬಡ್ಡಿ, ಬ್ಯಾಡ್ಮಿಂಟನ್ ಮುಂತಾದ ಕ್ರೀಡೆಗಳನ್ನು ಆಡುತ್ತಾರೆ, ವಿಜಯದಶಮಿ ಹಬ್ಬದ ಸಮಯದಲ್ಲಿ ಆಯುಧಗಳನ್ನು ಪೂಜಿಸುತ್ತಾರೆ ಮತ್ತು ಹಿಂದೂ ಧರ್ಮವನ್ನು ಉಳಿಸುವ ಸಲುವಾಗಿ ರಾಜ್ಯ ಪೊಲೀಸ್ ಪಡೆಯ ಭಾಗವಾಗಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು| ಅಪಹರಣಕ್ಕೊಳಗಾಗಿದ್ದ ಯುವಕನನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಪೊಲೀಸರು 

Similar News