ಕೋಟೇಶ್ವರದಲ್ಲಿ ಅಗ್ನಿ ಅವಘಡದಲ್ಲಿ ಅಪಾರ ನಷ್ಟ: ಸ್ಥಳಕ್ಕೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಭೇಟಿ

Update: 2023-01-12 18:08 GMT

ಕುಂದಾಪುರ: ತಾಲೂಕಿನ ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನ ಎದುರು ರಸ್ತೆಯಲ್ಲಿ ಮಂಗಳವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಎರಡು ಫ್ಯಾನ್ಸಿ ಸ್ಟೋರ್‌ಗಳು ಸಂಪೂರ್ಣ ಭಸ್ಮವಾಗಿದ್ದು, ಮೇಲ್ಮಹಡಿಯ ವಾಸದ ಮನೆಗೂ ಹಾನಿ ಸಂಭವಿಸಿದೆ. ಇದರಿಂದ ಲಕ್ಷಾಂತರ ರೂ. ಮೌಲ್ಯದ ಸೊತ್ತು ಸುಟ್ಟು ಬೂದಿಯಾಗಿದೆ.

ಘಟನಾ ಸ್ಥಳಕ್ಕೆ  ಗುರುವಾರ ಸಂಜೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೋಟೇಶ್ವರ ಶಿವರಾಮ ಪೂಜಾರಿ ಎಂಬವರಿಗೆ ಸೇರಿದ ವಾಣಿಜ್ಯ ಸಂಕೀರ್ಣದ ಕೆಳ ಅಂತಸ್ತಿನಲ್ಲಿ ಬಾಡಿಗೆಗಿದ್ದ ಸುಧಾಕರ ಜೋಗಿ ಎಂಬವರ ಮಹಾಲಕ್ಷ್ಮೀ ಕಂಗನ್ಸ್‌ನ ಎರಡು ಶಾಪ್ ಹಾಗೂಸುಧಾಕರ ಜೋಗಿ ಅಂಗಡಿ ತಾಗಿಕೊಂಡಿದ್ದ ರಾಜೀವ ಶೆಟ್ಟಿ ಎಂಬವರ ರೆಡಿಮೇಡ್ ಬಟ್ಟೆ ಹಾಗೂ ಟೈಲರಿಂಗ್ ಶಾಪ್, ಶಿವರಾಮ ಪೂಜಾರಿ ವಾಸದ ಮನೆ ಬೆಂಕಿಯ ಕೆನ್ನಾಲಗೆಯಿಂದ ಸುಟ್ಟಿದ್ದು ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದ ಬಗ್ಗೆ ಅಂದಾಜಿಸಲಾಗಿತ್ತು.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು ನೊಂದವರಿಗೆ ಧೈರ್ಯ ತುಂಬಿದರು.

ಈ ಸಂದರ್ಭ ಕೋಟೇಶ್ವರ ಗ್ರಾಪಂ ಸದಸ್ಯ ಉದಯ್ ನಾಯಕ್, ಸ್ಥಳೀಯ ಮುಖಂಡ ರಾಜೇಶ್ ಉಡುಪ, ಅಗ್ನಿ ಅವಘಡದಲ್ಲಿ ನಷ್ಟ ಅನುಭವಿಸಿದ ಸುಧಾಕರ ಜೋಗಿ, ರಾಜೀವ ಶೆಟ್ಟಿ, ಶಿವರಾಮ ಪೂಜಾರಿ, ಜೋಗಿ ಸಮಾಜ ಸೇವಾ ಸಂಘದ ಕುಂದಾಪುರ ತಾಲೂಕು ಅಧ್ಯಕ್ಷ ಪಾಂಡುರಂಗ ಜೋಗಿ, ಸಮಾಜದ ಮುಖಂಡರಾದ ರಮೇಶ್ ಎಚ್.ಎಸ್ ಜೋಗಿ, ಕೃಷ್ಣಯ್ಯ ಜೋಗಿ ಅಂಕದಕಟ್ಟೆ, ಸತ್ಯನಾರಾಯಣ ಜೋಗಿ ಹಂಗಳೂರು, ಶೇಖರ ಜೋಗಿ ಗೋಪಾಡಿ, ರಾಘವೇಂದ್ರ ಜೋಗಿ ಕೆರೆಮನೆ, ಯೋಗೀಶ್ ಜೋಗಿ ಕೋಟೇಶ್ವರ, ಪ್ರಸಾದ ಜೋಗಿ ಹಂಗಳೂರು, ಕೃಷ್ಣ ಜೋಗಿ ಕೋಟ, ರಾಘವೇಂದ್ರ ಜೋಗಿ ಕಾಳಾವರ ಇದ್ದರು.

ಸಂಸದೆಗೆ ಮನವಿ: ಜೋಗಿ ಸಮಾಜದ ಮುಖಂಡ ರಮೇಶ್ ಎಚ್.ಎಸ್ ಜೋಗಿಯವರ ನೇತೃತ್ವದ ನಿಯೋಗವು ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಉಡುಪಿ ಸಮೀಪದ ಸಂತೆಕಟ್ಟೆ ಬಳಿ ಭೇಟಿ ಮಾಡಿ ಘಟನೆ ಬಗ್ಗೆ ವಿವರಿಸಿ ಪರಿಹಾರದ ಬಗ್ಗೆ ಮನವಿ ಮಾಡಿದೆ. ಈ ಬಗ್ಗೆ ಪರಿಶೀಲಿಸುವುದಾಗಿ ಸಂಸದೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

Similar News