ಭಾರತ ಸರಕಾರದಿಂದ ಅಲ್ಪಸಂಖ್ಯಾತರ ವಿರುದ್ಧ ವ್ಯವಸ್ಥಿತ ತಾರತಮ್ಯ: 2022ರ ‘ಮಾನವಹಕ್ಕು ಕಣ್ಗಾವಲು’ ವರದಿ ಆತಂಕ
ಹೊಸದಿಲ್ಲಿ, ಜ.12: ಭಾರತೀಯ ಜನತಾಪಕ್ಷ ನೇತೃತ್ವದ ಕೇಂದ್ರ ಸರಕಾರವು ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಅದರಲ್ಲೂ ವಿಶೇಷವಾಗಿ ಮುಸ್ಲಿಮರ ವಿರುದ್ಧ ತಾರತಮ್ಯವನ್ನು ಅನುಸರಿಸುತ್ತಿದೆ ಹಾಗೂ ಅವರಿಗೆ ಕಳಂಕ ಹಚ್ಚುವ ಕಾರ್ಯವನ್ನು ಮುಂದುವರಿಸಿದೆ ಎಂದು ಮಾನವಹಕ್ಕುಗಳ ಕಣ್ಗಾವಲು ಸಂಸ್ಥೆ ತನ್ನ ವರದಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.
‘ಬಿಜೆಪಿ ಬೆಂಬಲಿಗರು ಕೆಲವು ಸಮೂಹಗಳ ಮೇಲೆ ಗುರಿಯಿರಿಸಿ ದಾಳಿ ನಡೆಸುವ ಘಟನೆಗಳು ಹೆಚ್ಚುತ್ತಿವೆ ’ ಎಂದು ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆ ತನ್ನ ‘ 2022ಜಾಗತಿ ವರದಿ’ಯಲ್ಲಿ ಆತಂಕ ವ್ಯಕ್ತಪಡಿಸಿದೆ.
ಬಿಲ್ಕಿಸ್ ಬಾನು ಪ್ರಕರಣದಲ್ಲಿ ಜೀವಾವಧಿಶಿಕ್ಷೆ ವಿಧಿಸಲ್ಪಟ್ಟಿದ್ದ 11 ಕೈದಿಗಳನ್ನು ಅವಧಿಗೆ ಮುಂಚಿತವಾಗಿ ಬಿಡುಗಡೆಗೊಳಿಸಿರುವುದು, ಬಹುತೇಕವಾಗಿ ಮುಸ್ಲಿಮ್ ಸಮುದಾಯದವರ ಕಟ್ಟಡಗಳನ್ನು ನೆಲಸಮಗೊಳಿಸಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸತ್ಯಶೋಧಕ ವೆಬ್ ಸೈಟ್ ‘ಅಲ್ಟ್ ನ್ಯೂಸ್’ನ ಸಹಸಂಸ್ಥಾಪಕ ಮುಹಮ್ಮದ್ ಝುಬೈರ್ ಹಾಗೂ ಪತ್ರಕರ್ತ ಸಿದ್ದೀಕಿ ಕಪ್ಪನ್ ಬಂಧನಗಳು, ಜಮ್ಮುಕಾಶ್ಮೀರದಲ್ಲಿ ಭದ್ರತಾಪಡೆಗಳು ನಡೆಸಿದ ಯೋಜಿತ ಹತ್ಯೆಗಳು ಹಾಗೂ ಸರಕಾರೇತರ ಸಂಘಟನೆ (ಎನ್ಜಿಓ)ಗಳ ಮೇಲೆ ತೆರಿಗೆ ಅಧಿಕಾರಿಗಳ ದಾಳಿಯನ್ನು ಕೂಡಾ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
"ತನ್ನನ್ನು ವಿಮರ್ಶಿಸುವವರನ್ನು ಜೈಲಿಗಟ್ಟುವ ಹಾಗೂ ಮಾನವಹಕ್ಕುಗಳ ಸಂಘಟನೆಗಳನ್ನು ಮುಚ್ಚುಗಡೆಗೊಳಿಸುವ ಬದಲು ದೌರ್ಜನ್ಯಗಳನ್ನು ಉಲ್ಲಂಘನೆಗೆ ಕಾರಣರಾದ ಪಕ್ಷದ ಕಾರ್ಯಕರ್ತರನ್ನು ಹಾಗೂ ಬೆಂಬಲಿಗರನ್ನು ಮಟ್ಟಹಾಕಬೇಕು ’’ ಎಂದು ಮೀನಾಕ್ಷಿ ಗಂಗೂಲಿ ಹೇಳಿದ್ದಾರೆ.
ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಕಾಶ್ಮೀರ ಕಣಿವೆಯಲ್ಲಿ ಕಳೆದ ಮೂರು ವರ್ಷಗಳಿಂದ ಅವ್ಯಾಹತವಾಗಿ ಹಿಂಸಾಚಾರ ಮುಂದುವರಿದಿರುವುದನ್ನು ವರದಿಯು ಬೆಟ್ಟು ಮಾಡಿ ತೋರಿಸಿದೆ.
2022ರ ಅಕ್ಟೋಬರ್ ನಲ್ಲಿ 28 ನಾಗರಿಕರು, 29 ಭದ್ರತಾಸಿಬ್ಬಂದಿ ಹಾಗೂ 172 ಶಂಕಿತ ಉಗ್ರರು ಸೇರಿದಂತೆ 229 ಮಂದಿ ಕಾಶ್ಮೀರದಲ್ಲಿ ಸಾವನ್ನಪ್ಪಿದ್ದಾರೆ. ಅಲ್ಪಸಂಖ್ಯಾತ ಹಿಂದೂಗಳು ಹಾಗೂ ಸಿಖ್ಖರು ಕಾಶ್ಮೀರ ಕಣಿವೆಯಲ್ಲಿ ದಾಳಿಗೊಳಗಾಗಿದ್ದಾರೆ. ಭದ್ರತಾಪಡೆಗಳೊಂದಿಗೆ ನಡೆದ ಗುಂಡಿನ ಕಾಳಗಲ್ಲಿ ಮೃತರಾದ ಶಂಕಿತ ಉಗ್ರರಲ್ಲಿ ಕೆಲವರು ನಾಗರಿಕರೆಂದು ತಿಳದುಬಂದಿದೆ. ಆದರೆ ಈ ಬಗ್ಗೆ ಯಾವುದೇ ಸ್ವತಂತ್ರ ತನಿಖೆಯನ್ನು ಕೈಗೊಳ್ಳಲಾಗಿಲ್ಲವೆಂದು ವರದಿ ತಿಳಿಸಿದೆ.
ಕೋಮು ಗಲಭೆಗಳಿಗೆ ಪ್ರತಿಕ್ರಿಯೆ ಎಂಬಂತೆ ಉತ್ತರಪ್ರದೇಶ ಮತ್ತಿತರ ರಾಜ್ಯಗಳಲ್ಲಿ ಬಹುತೇಕವಾಗಿ ಮುಸ್ಲಿಮರ ಒಡೆತನದ ಕಟ್ಟಡಗಳ ನೆಲಸಮ ಕಾರ್ಯಾಚರಣೆಯನ್ನು ಕೂಡಾ ವರದಿಯು ಟೀಕಿಸಿದೆ.
2002ರ ಗುಜರಾತ್ ಗಲಭೆಯ ತಪ್ಪಿತಸ್ಥರ ವಿರುದ್ಧ ಕಾನೂನುಸಮರ ನಡೆಸಿದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಹಾಗೂ ಪೊಲೀಸ್ ಅಧಿಕಾರಿಗಳಾದ ಆರ್.ಬಿ.ಶ್ರೀಕುಮಾರ್ ಹಾಗೂ ಸಂಜೀವ್ ಭಟ್ ಅವರ ಬಂಧನವನ್ನು ಕೂಡಾ ವರದಿಯು ಪ್ರಸ್ತಾವಿಸಿದೆ.
ಅಲ್ಲದೆ ಓಕ್ಸ್ಫಾಮ್ ಇಂಡಿಯಾ, ದಿಲ್ಲಿ ಮೂಲದ ‘ನೀತಿ ಸಂಶೋಧನಾ ಕೇಂದ್ರ’ ದಂತಹ ಎನ್ಜಿಓ ಸಂಸ್ಥೆಗಳ ಮೇಲೆ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿಗಳು ಕೂಡಾ ರಾಜಕೀಯ ಪ್ರೇರಿತವಾಗಿದ್ದವು ಎಂದು ವರದಿ ತಿಳಿಸಿದೆ.
‘‘ಅಧಿಕಾರದ ಮೇಲೆ ತನ್ನ ಹಿಡಿತವನ್ನು ಬಲಪಡಿಸಲು ಚೀನಾದ ಸರಕಾರವು ನಡೆಸುತ್ತಿರುವಂತಹ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ವ್ಯವಸ್ಥಿತ ತಾರತಮ್ಯ, ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕುವುದು ಹಾಗೂ ಅಭಿವ್ಯಕ್ತಿ ಸ್ವಾತಂತ್ರವನ್ನು ದಮನಿಸಲು ತಂತ್ರಜ್ಞಾನದ ಬಳಕೆಯಂತಹ ಹಲವು ದಮನಕಾರಿ ಕೃತ್ಯಗಳನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು ಕೂಡಾ ಅನುಕರಿಸುತ್ತಿದೆ’’
ತಿರಾನಾ ಹಸ್ಸನ್.
ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕಿ
ಹಿಂದು ಬಹುಸಂಖ್ಯಾತವಾದಿ ವಿಚಾರಧಾರೆಗೆ ಬಿಜೆಪಿ ನೀಡುತ್ತಿರುವ ಉತ್ತೇಜನದಿಂದಾಗಿ, ಪ್ರೇರಿತರಾದ ಅಧಿಕಾರಿಗಳು ಹಾಗೂ ಅವರ ಬೆಂಬಲಿಗರು ತಾರತಮ್ಯದಿಂದ ಕೂಡಿದ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ ಹಾಗೂ ಹಲವು ಬಾರಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ’’.
ಮೀನಾಕ್ಷಿ ಗಂಗೂಲಿ,
ಹ್ಯೂಮನ್ ರೈಟ್ಸ್ ವಾಚ್ನ ದಕ್ಷಿಣ ಏಶ್ಯ ವಿಭಾಗದ ನಿರ್ದೇಶಕಿ