ಅನುಷ್ಠಾನವಾಗದ ನಿರ್ಣಯಗಳು

Update: 2023-01-13 18:33 GMT

ಮಾನ್ಯರೇ,

 
ಕನ್ನಡ ಮಾಧ್ಯಮದಲ್ಲಿ ಶಿಕ್ಷಣ; ಆಡಳಿತದಲ್ಲಿ ಕನ್ನಡ; ನ್ಯಾಯಾಂಗದಲ್ಲಿ ಕನ್ನಡ; ಹಿಂದಿ ಹೇರಿಕೆಯ ವಿರುದ್ಧ; ಶಾಸ್ತ್ರೀಯ ಭಾಷೆ ಕನ್ನಡ-ಹೀಗೆ ಪ್ರತೀ ಸಾರಿ ತೆಗೆದುಕೊಂಡ ಹತ್ತು ಹಲವಾರು ಹಳಸಲು ನಿರ್ಣಯಗಳನ್ನೇ ಹಾವೇರಿಯ 86ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಹಾಟ್‌ವೇವ್‌ನಲ್ಲಿಟ್ಟು ಬಿಸಿ ಮಾಡಿ ಬಡಿಸಿದಂತಿವೆ. ಜೊತೆಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ವಿವಾದಕ್ಕೆ ಮಹಾಜನ್ ವರದಿಯೇ ಅಂತಿಮ ಎಂದೂ, ಆರ್ಥಿಕವಾಗಿ ರಾಜ್ಯದ ತೆರಿಗೆಯಲ್ಲಿ(ಜಿಎಸ್‌ಟಿ)ಸಮನಾದ ಪಾಲು ದೊರೆಯಬೇಕೆಂದೂ ಆಗ್ರಹಿಸಿ ನಿರ್ಣಯ ಕೈಗೊಳ್ಳಬೇಕಾಗಿತ್ತು.
 ಇವೆಲ್ಲವೂ ಕೇಂದ್ರ ಸರಕಾರದ ಅನುಮತಿ ಮತ್ತು ಸೂಕ್ತ ಕಾಯ್ದೆ ಜಾರಿಯಿಂದಲೇ ಆಗಬೇಕಾದವುಗಳು. ಆದರೆ ಕೇಂದ್ರ ಇದುವರೆಗೂ ಯಾವುದೇ ನಿರ್ಣಯವನ್ನು ಮನ್ನಿಸದೆ ಕಾಲಹರಣ ಮತ್ತು ಅನುಕೂಲಸಿಂಧು ಜಾಣ್ಮೆಯನ್ನೇ ಅನುಸರಿಸುತ್ತ ಬಂದಿದೆ. ಸದ್ಯ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರಗಳೇ ಇವೆ. ಆದ್ದರಿಂದ ಈಗಲಾದರೂ ಕೇಂದ್ರ ಯಾವ ಸಬೂಬು ಹೇಳದೆ ರಾಜ್ಯ ಸರಕಾರದ ಕನ್ನಡ ಪರ ಮಸೂದೆಗಳನ್ನು ಅನುಷ್ಠಾನಗೊಳಿಸಲು ಒಪ್ಪಬೇಕಾಗಿದೆ.
ಇಲ್ಲವಾದರೆ, ಪ್ರಸಕ್ತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಜಿಲ್ಲಾವಾರು ಪದಾಧಿಕಾರಿಗಳು ಕನ್ನಡಕ್ಕೆ ಕೈಯೆತ್ತುವವರಾಗಿದ್ದರೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ಹೊರಬಂದು ಗೋಕಾಕ್ ಮಾದರಿಯ ಚಳವಳಿ ಕಟ್ಟಿ ಕನ್ನಡ ಸ್ಥಾನಮಾನಕ್ಕಾಗಿ ಕಂಕಣಬದ್ಧರಾಗಬೇಕು. ಆದರೆ ಇವರಿಂದ ಇದು ಸಾಧ್ಯವೇ?
 

Similar News