ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳು ದುಬಾರಿಯಾಗಲಿವೆ ಎಂದ ಗೂಗಲ್‌: ಕಾರಣವೇನು ಗೊತ್ತೇ?

Update: 2023-01-14 11:57 GMT

ಹೊಸದಿಲ್ಲಿ: ಗೂಗಲ್‌ (Google)  ಕಂಪೆನಿಗೆ ಭಾರತದ ಕಾಂಪಿಟೀಶನ್‌ ಕಮಿಷನ್‌ ಆಫ್‌ ಇಂಡಿಯಾ ( Competition Commission of India) ವಿಧಿಸಿದ ರೂ 1,337.76 ಕೋಟಿ ದಂಡ ಹಾಗೂ ಇತರ ನಿಯಂತ್ರಣಗಳಿಂದಾಗಿ ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಬಳಸುವ ಸ್ಮಾರ್ಟ್‌ಫೋನ್‌ಗಳು (Smartphones) ದುಬಾರಿಯಾಗಲಿವೆ ಎಂದು ಸಂಸ್ಥೆ ಹೇಳಿದೆ.

ಆಂಡ್ರಾಯ್ಡ್ ಮೊಬೈಲ್ ಸಾಧನ ಪರಿಸರವ್ಯವಸ್ಥೆಯಲ್ಲಿ ಹಲವು ಮಾರುಕಟ್ಟೆಗಳಲ್ಲಿ ತನಗಿರುವ ಪಾರಮ್ಯವನ್ನು ದುರ್ಬಳಕೆ ಮಾಡುತ್ತಿದೆ ಎಂದು ಹೇಳಿ ಕಾಂಪಿಟೀಶನ್ ಕಮಿಷನ್ ಆಫ್ ಇಂಡಿಯಾ ಗುರುವಾರ ಗೂಗಲ್ ಮೇಲೆ ದಂಡ ವಿಧಿಸಿತ್ತು.

ಗೂಗಲ್‍ನ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಒಪ್ಪಂದಗಳ ಕುರಿತಂತೆ ಗ್ರಾಹಕರಿಂದ ದೂರುಗಳು ಬಂದ ನಂತರ ಸಂಸ್ಥೆಯು 2019 ರಲ್ಲಿ ಗೂಗಲ್ ವಿರುದ್ಧ ತನಿಖೆ ಆರಂಭಿಸಿತ್ತು.

ಸ್ಮಾರ್ಟ್‍ಫೋನ್‍ಗಳಲ್ಲಿ ಅಪ್ಲಿಕೇಶನ್ ಮತ್ತು ಪ್ರೋಗ್ರಾಂಗಳನ್ನು ಚಲಾಯಿಸುವ ಆಂಡ್ರಾಯ್ಡ್ ಅನ್ನು ಗೂಗಲ್ 2005 ರಲ್ಲಿ ತನ್ನ ತೆಕ್ಕೆಗೆ ಪಡೆದುಕೊಂಡಿತ್ತು.

ಗೂಗಲ್ ಅಪ್ಲಿಕೇಶನ್‍ಗಳ ಒಂದು ಸಂಗ್ರಹವಾಗಿರುವ ಸಂಪೂರ್ಣ ಗೂಗಲ್ ಮೊಬೈಲ್ ಸೂಟ್ ಅನ್ನು ಪೂರ್ವಭಾವಿಯಾಗಿಯೇ ಸ್ಥಾಪನೆಗೊಳಿಸುವುದು  ಆಂಡ್ರಾಯ್ಡ್ ಸ್ಮಾರ್ಟ್ ಫೋನ್‍ಗಳಿಗೆ ಕಡ್ಡಾಯವಾಗಿದೆ ಹಾಗೂ ಈ ಗೂಗಲ್ ಮೊಬೈಲ್ ಸೂಟ್ ಅನ್ನು ಅಸ್ಥಾಪನೆಗೊಳಿಸುವ ಆಯ್ಕೆಯಿಲ್ಲವೆಂದು ತನಿಖೆಯಿಂದ ಕಂಡುಬಂದಿದೆ ಎಂದು ಕಾಂಪಿಟೀಶನ್ ಕಮಿಷನ್ ಹೇಳಿತ್ತು ಹಾಗೂ ದಂಡ ಹಾಗೂ ನಿಬಂಧನೆಗಳನ್ನು ತನಿಖೆಯ ನಂತರ ವಿಧಿಸಿತ್ತು.

ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ಟ್ರಿಬ್ಯುನಲ್‌ ದಂಡ ಕುರಿತ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ವಿಧಿಸಲು ಜನವರಿ 4 ರಂದು ನಿರಾಕರಿಸಿತ್ತಲ್ಲದೆ ದಂಡದ ಶೇ 10 ಮೊತ್ತವನ್ನು ಮುಂದಿನ ವಿಚಾರಣೆ ಫೆಬ್ರವರಿ 13 ರಂದು ನಡೆಯುವುದರೊಳಗಾಗಿ  ಠೇವಣಿಯಿರಿಸುವಂತೆ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ ತನ್ನ ಆಂಡ್ರಾಯ್ಡ್‌ ಪ್ಲಾಟ್‌ಫಾರ್ಮ್‌ ಮಾರ್ಕೆಟಿಂಗ್‌ ಪ್ರಕ್ರಿಯೆಯನ್ನು ಬದಲಾಯಿಸುವ ಅಗತ್ಯವಿದೆ ಎಂದು ಗೂಗಲ್‌ ಶುಕ್ರವಾರ ಹೇಳಿದೆಯಲ್ಲದೆ ಇದರಿಂದ ಆಪ್‌ ಡೆವಲೆಪರ್‌ಗಳು, ಉಪಕರಣ ತಯಾರಕರು ಮತ್ತು ಅಂತಿಮವಾಗಿ ಗ್ರಾಹಕರು ಹೆಚ್ಚಿನ ಬೆಲೆ ತೆರಬೇಕಾದೀತೆಂದು ಹೇಳಿದೆ.

ಇದನ್ನೂ ಓದಿ: MBBS ವಿದ್ಯಾರ್ಥಿನಿ ನಾಪತ್ತೆಯಾಗಿ 13 ತಿಂಗಳ ನಂತರ ಬೀಚ್‌ ಜೀವರಕ್ಷಕನನ್ನು ಬಂಧಿಸಿದ ಪೊಲೀಸರು

Similar News