ಜೋಶಿಮಠ ಭೂಕುಸಿತದ ಕುರಿತ ಇಸ್ರೋ ವರದಿ ಸರ್ಕಾರಿ ವೆಬ್‌ಸೈಟ್‌ನಿಂದ ನಾಪತ್ತೆ

Update: 2023-01-14 13:27 GMT

ಹೊಸದಿಲ್ಲಿ: ಉತ್ತರಾಖಂಡದ ಜೋಶಿಮಠದಲ್ಲಿ (Joshimath) ಭೂಮಿ ಕುಸಿಯುತ್ತಿರುವ ಬಗ್ಗೆ ಇಸ್ರೋದ (ISRO) ವರದಿಯೊಂದು ಸರಕಾರಿ ಒಡೆತನದ ವೆಬ್‌ಸೈಟ್‌ NRSCಯಿಂದ ಕಾಣೆಯಾಗಿದೆ ಎಂದು ವರದಿಯಾಗಿದೆ.

ಶುಕ್ರವಾರವಷ್ಟೇ ಬಿಡುಗಡೆಗೊಂಡಿದ್ದ ಈ ವರದಿಯು ಜೋಶಿಮಠದಲ್ಲಿ ಡಿಸೆಂಬರ್‌ 27 ಹಾಗೂ ಜನವರಿ 8 ರ ನಡುವೆ  ಭೂಮಿ 5.4 ಸೆಂ.ಮೀನಷ್ಟು ಕುಸಿದಿದೆ ಎಂದು ಹೇಳಿತ್ತು. ಅದೇ ಸಮಯ ಎಪ್ರಿಲ್-ನವೆಂಬರ್‌ 2022 ರ ಅವಧಿಯಲ್ಲಿ ಇಲ್ಲಿ ಭೂಮಿ 8.9ಸೆಂ.ಮೀನಷ್ಟು ಕುಸಿದಿತ್ತು ಎಂದು ಕಾಟ್ರೊಸ್ಯಾಟ್-2ಎಸ್‌ ಉಪಗ್ರಹದಿಂದ ತೆಗೆದ ಚಿತ್ರದ ಆಧಾರದಲ್ಲಿ ವರದಿ ಪ್ರಕಟಗೊಂಡಿತ್ತು.

ಕೆಲವೇ ದಿನಗಳ ಅವಧಿಯಲ್ಲಿ ಜೋಷಿಮಠದಲ್ಲಿ ಭೂಮಿ 5 ಸೆಂ.ಮೀನಷ್ಟು ಕುಸಿದಿದೆ ಆದರೆ ಈಗ ಅದು ಜೋಷಿಮಠದ ಕೇಂದ್ರ ಭಾಗಕ್ಕೆ ಸೀಮಿತವಾಗಿದೆ ಎಂದು ವರದಿ ಹೇಳಿದೆಯಲ್ಲದೆ ಕುಸಿತದ ಕೇಂದ್ರಬಿಂದು ಜೋಷಿಮಠ-ಔಲಿ ರಸ್ತೆಯ ಸಮೀಪ 2,180 ಮೀಟರ್‌ ಎತ್ತರದಲ್ಲಿದೆ ಎಂದು ತಿಳಿಸಿತ್ತು.

ಸೇನಾ ಹೆಲಿಪ್ಯಾಡ್‌ ಮತ್ತು ನರಸಿಂಗ ದೇವಳವು ಭೂಮಿ ಕುಸಿತ ವಲಯದಲ್ಲಿರುವ ಪ್ರಮುಖ ಸ್ಥಳಗಳು ಎಂದೂ ಉಪಗ್ರಹ ಚಿತ್ರಗಳಿಂದ ತಿಳಿದು ಬಂದಿದೆ.

ಈ ವರದಿಯು ಪರಿಸರದ ನಾಗರಿಕರಲ್ಲಿ ಇನ್ನಷ್ಟು ಆತಂಕ ಸೃಷ್ಟಿಸಿದೆ. ಇಲ್ಲಿ ಭೂಮಿ ಕುಸಿಯಲು ಜೋಷಿಮಠದ ಸಮೀಪದಲ್ಲಿ ಜಾರಿಯಾಗುತ್ತಿರುವ ಎನ್‌ಟಿಪಿಸಿಯ 520 ಮೆವಾ ತಪೋವನ್‌ ವಿಷ್ಣುಗಢ್‌ ಹೈಡ್ರೋಪವರ್‌ ಯೋಜನೆ  ಕಾರಣ ಎಂದು ಸ್ಥಳೀಯರು, ಪರಿಸರವಾದಿಗಳು ಮತ್ತು ಭೂಗರ್ಭಶಾಸ್ತ್ರಜ್ಞರು ನಂಬಿದ್ದರೂ ಕೇಂದ್ರ ಸರ್ಕಾರ ಇದನ್ನು ಅಲ್ಲಗಳೆದಿದೆ.

ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣ ಮೂಲಕ ಪ್ರಯಾಣಿಸುವವರು ಎಪ್ರಿಲ್‌ನಿಂದ ತೆರಬೇಕಿದೆ ಹೆಚ್ಚುವರಿ ಬಳಕೆದಾರರ ಶುಲ್ಕ

Similar News