ರಾಮ, ಕೃಷ್ಣನಂತೆ ನಿತೀಶ್ ಕುಮಾರ್, ರಾವಣ, ಕಂಸನಂತೆ ಮೋದಿ: ವಿವಾದ ಹುಟ್ಟು ಹಾಕಿದ ಆರ್‌ಜೆಡಿ ಪೋಸ್ಟರ್

Update: 2023-01-14 17:31 GMT

ಪಾಟ್ನಾ, ಜ. 14: ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗೆಲುವು ಸಾಧಿಸಲಿದ್ದಾರೆ ಎಂದು ತೋರಿಸಲು ಕೆಲವು ಪೋಸ್ಟರ್‌ಗಳನ್ನು ಆರ್‌ಜೆಡಿ ನಾಯಕಿ ರಾಬ್ರಿ ದೇವಿ ನಿವಾಸ ಹಾಗೂ ಪಾಟ್ನಾದಲ್ಲಿರುವ ಪಕ್ಷದ ಕಚೇರಿಯ ಹೊರಗೆ ಹಾಕಲಾಗಿದೆ.

2024ರ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಹಾಗೂ ಮಹಾಮೈತ್ರಿಕೂಟ ಗೆಲುವು ಸಾಧಿಸುತ್ತದೆ ಎಂಬುದನ್ನು ತಿಳಿಸಲು ಎರಡು ಹಿಂದೂ ಪುರಾಣಗಳಾದ ರಾಮಾಯಣ ಹಾಗೂ ಮಹಾಭಾರತದ ಫೋಟೊಗಳನ್ನು ಪೋಸ್ಟರ್‌ನಲ್ಲಿ ಹಾಕಲಾಗಿದೆ.

ಪೋಸ್ಟರ್‌ನಲ್ಲಿ ನಿತೀಶ್ ಕುಮಾರ್ (ಮಹಾಮೈತ್ರಿಕೂಟದ ನಾಯಕ) ಅವರನ್ನು ರಾಮ/ಕೃಷ್ಣನಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣ/ ಕಂಸನಿಗೆ ಹೋಲಿಸಲಾಗಿದೆ. ಪೋಸ್ಟರ್‌ನ ಮೊದಲ ಎರಡು ಭಾಗಗಳಲ್ಲಿ ರಾಮಾಯಣದಲ್ಲಿ ರಾಮನು ರಾವಣನನ್ನು ಸೋಲಿಸಿರುವುದು ಹಾಗೂ ಮಹಾಭಾರತದಲ್ಲಿ ಕೃಷ್ಣನು ಕಂಸನನ್ನು ಸೋಲಿಸಿರುವುದನ್ನು ವಿವರಿಸಲಾಗಿದೆ.

 ಕೊನೆಯ ಭಾಗದಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಮಹಾಮೈತ್ರಿಕೂಟ ನರೇಂದ್ರ ಮೋದಿ ಅವರನ್ನು ಸೋಲಿಸುವುದನ್ನು ಚಿತ್ರಿಸಲಾಗಿದೆ. ಪೋಸ್ಟರ್‌ನಲ್ಲಿ ಛಾಪ್ರಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಪೂನಂ ರೈ ಅವರ ಭಾವಚಿತ್ರದೊಂದಿಗೆ ‘‘ಮಹಾ ಮೈತ್ರಿಕೂಟಕ್ಕೆ ಜಯವಾಗಲಿ’’ ಎಂಬ ಘೋಷಣೆಯನ್ನು ಬರೆಯಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ನವಲ್ ಕಿಶೋರ್ ಯಾದವ್, ‘‘ನಿತೀಶ್ ಕುಮಾರ್ ಅವರು ಮಾಯಾವತಿ, ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ ಹಾಗೂ ನವೀನ್ ಪಟ್ನಾಯಕ್ ಮೊದಲಾದ ಪ್ರತಿಪಕ್ಷದ ನಾಯಕರಲ್ಲಿ ಹೊಸಬರು. 2034ರ ವರೆಗೆ ಪ್ರಧಾನಿ ಅವರೇ ಅಧಿಕಾರದಲ್ಲಿ ಇರುತ್ತಾರೆ. ಅವರನ್ನು ಯಾರೊಬ್ಬರೂ ಸೋಲಿಸಲು ಸಾಧ್ಯವಿಲ್ಲ’’ ಎಂದಿದ್ದಾರೆ.

ಆರ್‌ಜೆಡಿಯ ರಾಷ್ಟ್ರೀಯ ವಕ್ತಾರ ಮೃತ್ಯುಂಜಯ ತಿವಾರಿ, ‘‘ಈ ಪೋಸ್ಟರ್‌ಗಳನ್ನು ಯಾರು ಹಾಕಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಇದನ್ನು ನಮ್ಮ ಪಕ್ಷ ಆರ್‌ಜೆಡಿ ಇದುವರೆಗೆ ಅಧಿಕೃತಗೊಳಿಸಿಲ್ಲ. 2024 ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರ ಹಾಕುವ ಸಿದ್ಧತೆ ಬಿಹಾರದಿಂದ ಆರಂಭವಾಗಿದೆ. ಎಲ್ಲ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಸಂಘಟಿತವಾಗಿವೆ. ಬಡವರು, ಯುವಕರು ಹಾಗೂ ರೈತ ವಿರೋಧಿಯಾಗಿರುವ ಬಿಜೆಪಿ ವಿರುದ್ಧ ನಮ್ಮ ಹೋರಾಟ’’ ಎಂದಿದ್ದಾರೆ.

Similar News