ವಿಮಾನದಲ್ಲಿ ರಕ್ತಸ್ರಾವ: ತುರ್ತು ಲ್ಯಾಂಡಿಂಗ್ ಬಳಿಕ ಪ್ರಯಾಣಿಕ ಸಾವು

Update: 2023-01-15 02:40 GMT

ಇಂದೋರ್: ಮದುರೈನಿಂದ ದೆಹಲಿಗೆ ಇಂಡಿಗೊ ವಿಮಾನದಲ್ಲಿ ತೆರಳುತ್ತಿದ್ದ 60 ವರ್ಷ ವಯಸ್ಸಿನ ಪ್ರಯಾಣಿಕರೊಬ್ಬರ ಆರೋಗ್ಯ ಸ್ಥಿತಿ ಶನಿವಾರ ರಾತ್ರಿ ವಿಮಾನಯಾನದ ನಡುವೆಯೇ ಹದಗೆಟ್ಟ ಹಿನ್ನೆಲೆಯಲ್ಲಿ ವಿಮಾನವನ್ನು ಇಂದೋರ್ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಇಳಿಸಲಾಯಿತು.

ವಿಮಾನವನ್ನು ಇಂದೋರ್‌ನ ದೇವಿ ಅಹಲ್ಯಾಬಾಯಿ ಹೋಳ್ಕರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಿದ ತಕ್ಷಣ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆ ವೇಳೆಗೆ ಆತ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು.

ಆರಂಭಿಕ ಮಾಹಿತಿಯ ಪ್ರಕಾರ, ಅತುಲ್ ಗುಪ್ತಾ (60) ಎಂಬ ವ್ಯಕ್ತಿ ಇಂಡಿಯೊ ಏರ್‌ಲೈನ್ಸ್ ವಿಮಾನ 6ಇ-2088ರಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಬಾಯಿಯಿಂದ ರಕ್ತ ಸುರಿಯಲಾರಂಭಿಸಿತು ಹಾಗೂ ಆರೋಗ್ಯಸ್ಥಿತಿ ತೀವ್ರವಾಗಿ ಹಗದೆಡುತ್ತಾ ಹೋಯಿತು" ಎಂದು ವಿಮಾನ ನಿಲ್ದಾಣದ ಪ್ರಭಾರಿ ನಿರ್ದೇಶಕ ಪ್ರಬೋಧ್‌ಚಂದ್ರ ಶರ್ಮಾ ಹೇಳಿದ್ದಾರೆ.

ವೈದ್ಯಕೀಯ ತುರ್ತು ಕಾರಣದಿಂದ ಮದುರೈ- ದೆಹಲಿ ವಿಮಾನವನ್ನು ಇಂದೋರ್‌ಗೆ ತಿರುಗಿಸಲಾಯಿತು. ಸಂಜೆ 5.30ಕ್ಕೆ ವಿಮಾನ ಇಳಿಯಿತು. ಮೃತಪಟ್ಟ ವ್ಯಕ್ತಿ ಹೃದ್ರೋಗ, ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿದ್ದರು ಎಂದು ವೈದ್ಯರು ಹೇಳಿದ್ದಾಗಿ ಶರ್ಮಾ ವಿವರಿಸಿದ್ದಾರೆ.

ಸಂಜೆ 6.40ಕ್ಕೆ ವಿಮಾನ ಮತ್ತೆ ದೆಹಲಿಗೆ ಯಾನ ಮುಂದುವರಿಸಿತು. ಏರೋಡ್ರೋಮ್ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಅವರ ಪ್ರಕಾರ ಗುಪ್ತಾ, ನೋಯ್ಡಾ ನಿವಾಸಿ. ಮರಣೋತ್ತರ ಪರೀಕ್ಷೆ ಬಳಿಕ ದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

Similar News