50,000 ವಾಟ್ಸ್ ಆ್ಯಪ್ ಗ್ರೂಪ್, 13 ಲಕ್ಷ ಪೇಜ್ ಅಡ್ಮಿನ್‌: ರಾಜ್ಯದಲ್ಲಿ ಬಿಜೆಪಿ ಬೂತ್ ಮಟ್ಟದ ಪ್ರಚಾರ ಹೇಗಿದೆ?

thesouthfirst.com ವರದಿ

Update: 2023-01-16 05:40 GMT

ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳಲು ಈ ಬಾರಿ ಆಪರೇಷನ್‌ ಕಮಲದಂತಹ ‘ಕಾರ್ಯಾಚರಣೆ’ಯ ಅಗತ್ಯವಿಲ್ಲ ಎಂದು ರಾಜ್ಯ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿರುವುದಾಗಿ thesouthfirst.com ವೆಬ್‌ ಪೋರ್ಟಲ್‌ ನಲ್ಲಿ ಬೆಲ್ಲಿ ಥಾಮಸ್‌ ರವರು ಬರೆದ ವಿಶೇಷ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬಿಜೆಪಿ ಮತ್ತೊಮ್ಮೆ ಆಪರೇಷನ್ ಕಮಲಕ್ಕೆ ಮುಂದಾಗಬೇಕೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಪೂಜಾರಿ, "ನಾವು ಕರ್ನಾಟಕದಲ್ಲಿ ಜನಾದೇಶವನ್ನು ಪಡೆಯುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಜನವರಿ 14, ಶನಿವಾರದಂದು ಬಿಜೆಪಿಯ ರಾಜ್ಯ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪೂಜಾರಿ, ಬೂತ್‌ ವಿಜಯ್‌ ಅಭಿಯಾನವು ಬಿಜೆಪಿಯಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಜನವರಿ 2 ರಂದು ಬೂತ್ ವಿಜಯ್ ಅಭಿಯಾನವನ್ನು ಬಿಜೆಪಿ ಪ್ರಾರಂಭಿಸಿದ್ದು, ಈ ಅಭಿಯಾನದ ಮೂಲಕ ಪಕ್ಷವು ಜನರ ಹೃದಯ ಮತ್ತು ಮನಸ್ಸನ್ನು ತಲುಪಿದೆ ಎಂದು ಪೂಜಾರಿ ಹೇಳಿದ್ದಾರೆ.
  
“ರಾಜ್ಯದ 50 ಲಕ್ಷ ಮನೆಗಳ ಮೇಲೆ 50 ಲಕ್ಷ ಬಿಜೆಪಿ ಧ್ವಜಗಳನ್ನು ಹಾರಿಸುವ ಗುರಿಯೊಂದಿಗೆ, ನಾವು ಈಗಾಗಲೇ ಜನವರಿ 12 ರವರೆಗೆ 32,00,883 ಮನೆಗಳ ಮೇಲೆ ಧ್ವಜಗಳನ್ನು ಹಾರಿಸಿದ್ದೇವೆ. ಪ್ರಚಾರ ಮುಂದುವರಿದಿದ್ದು, ಚುನಾವಣೆಗೂ ಮುನ್ನ ನಾವು 50 ಲಕ್ಷ ಧ್ವಜಗಳನ್ನು ಹಾರಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಬೂತ್ ವಿಜಯ್ ಅಭಿಯಾನವನ್ನು ಕೂಡಾ ಡಿಜಿಟಲೀಕರಣಗೊಳಿಸಲಾಗಿದ್ದು, ಪ್ರಚಾರಗಳ ಸಾಮಾಜಿಕ ಮಾಧ್ಯಮ ಪುಟಗಳನ್ನು ಮೇಲ್ವಿಚಾರಣೆ ಮಾಡಲು ಪನ್ನಾ ಅಥವಾ ಪೇಜ್ ಪ್ರಮುಖ್‌ (ಪೇಜ್ ಮುಖ್ಯಸ್ಥ) ರನ್ನು ನೇಮಿಸಲಾಗಿದೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿನ ಬೂತ್ ಮಟ್ಟದ ಪ್ರಚಾರದಲ್ಲಿ ಪ್ರತಿಯೊಬ್ಬ ಬಿಜೆಪಿ ಹಿರಿಯರು ಭಾಗವಹಿಸಿದ್ದಾರೆ ಎಂದು ವರದಿಯಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿವಾಜಿನಗರದಲ್ಲಿ, ಕರ್ನಾಟಕ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳೂರಿನಲ್ಲಿ ಬೂತ್ ಮಟ್ಟದಲ್ಲಿ ಪ್ರಚಾರ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶಿವಮೊಗ್ಗದಲ್ಲಿ, ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಗದಗನಲ್ಲಿ ಪ್ರಚಾರ ನಡೆಸಿದ್ದಾರೆ. ರಾಜ್ಯ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಉಡುಪಿಯಲ್ಲಿ ಪ್ರಚಾರ ನಡೆಸಿದ್ದಾರೆ.

ಈಗಾಗಲೇ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ತಮ್ಮ ಜಿಲ್ಲೆಗಳಲ್ಲಿ ಅಭಿಯಾನದ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.

ಸಂಸದರು, ಶಾಸಕರು, ಎಮ್‌ಎಲ್‌ಸಿಗಳು ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಕೊನೆಯ ಕಾರ್ಯಕರ್ತನವರೆಗೂ ತಲುಪಿದ್ದಾರೆ ಎಂದು ಪೂಜಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಬೂತ್ ಮಟ್ಟದಲ್ಲಿ ಗೆಲುವು ಸಾಧಿಸಿದರೆ ಚುನಾವಣೆಯಲ್ಲಿ ಗೆಲುವು ಖಚಿತ ಎಂದು ಅವರು ಹೇಳಿದರು.

ಬಿಜೆಪಿಯು ಒಟ್ಟು 51,872 ಬೂತ್ ಸಮಿತಿಗಳನ್ನು ರಚಿಸಿ 13,21,792 ಪೇಜ್ ಪ್ರಮುಖರನ್ನು ನೇಮಿಸಿದ್ದು, ಪ್ರತಿ ಪೇಜ್‌ ನಲ್ಲಿ 30 ಮತದಾರರಿದ್ದಾರೆ ಎಂದು ಬೂತ್ ವಿಜಯ್ ಅಭಿಯಾನದ ಮುಖ್ಯ ಸಂಯೋಜಕರಾದ ಪೂಜಾರಿ ಹೇಳಿದ್ದಾರೆ.

ಬಿಜೆಪಿ ಪಕ್ಷದ ಕಾರ್ಯಕರ್ತರಿಗಾಗಿ ಸುಮಾರು 50,260 ವಾಟ್ಸ್ ಆ್ಯಪ್ ಗುಂಪುಗಳನ್ನು ರಚಿಸಲಾಗಿದ್ದು, ಒಟ್ಟು 15,93,848 ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು. ಈ ಗುಂಪುಗಳ ಮೂಲಕ "ಡಬಲ್ ಇಂಜಿನ್ ಸರ್ಕಾರದ" ಕಾರ್ಯಕ್ರಮಗಳು, ಸಾಧನೆಗಳು ಮತ್ತು ಯೋಜನೆಗಳನ್ನು ಜನರಿಗೆ ತಿಳಿಸಲಾಗಿದೆ ಎಂದು ಪೂಜಾರಿ ಹೇಳಿದರು.

ಕರ್ನಾಟಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಪ್ರಚಾರದ ಸಹ ಸಂಯೋಜಕ ಮಹೇಶ್ ತೆಂಗಿನಕಾಯಿ ಮಾತನಾಡಿ, ಬೂತ್ ವಿಜಯ್ ಅಭಿಯಾನವು ಅಮಿತ್ ಶಾ ಅವರ ಯೋಚನೆ ಎಂದು ತಿಳಿಸಿದ್ದಾರೆ.

"ಜನವರಿ 12 ರವರೆಗೆ, 65,320 ಸಭೆಗಳನ್ನು ನಡೆಸಲಾಗಿದೆ ಮತ್ತು 615 ವೆಬ್ ಸಭೆಗಳನ್ನು ಸಹ ಆಯೋಜಿಸಲಾಗಿದೆ. ಮಿಷನ್ 150 ಸೀಟುಗಳನ್ನು ಗೆಲ್ಲುತ್ತಿದೆ, ಮತ್ತು ನಾವು ಅದರತ್ತ ಹೆಜ್ಜೆ ಹಾಕುತ್ತಿದ್ದೇವೆ” ಎಂದು ಮಹೇಶ್ thesouthfirst.comಗೆ ತಿಳಿಸಿದ್ದಾರೆ.

ಕೃಪೆ: thesouthfirst.com

Similar News