ಕೊಲೀಜಿಯಂನಲ್ಲಿ ಸರ್ಕಾರಿ ಪ್ರತಿನಿಧಿಯಿರಬೇಕೆಂಬ ಸಲಹೆ ನೀಡಿ ಟೀಕೆಗೊಳಗಾದ ಕೇಂದ್ರ ಸಚಿವ ಕಿರಣ್‌ ರಿಜಿಜು

ಅವರು ಎನ್‌ಜೆಎಸಿ ತೀರ್ಪನ್ನು ತಪ್ಪಾಗಿ ಅರ್ಥೈಸಿದ್ದಾರೆಂದ ಮಾಜಿ ಹೆಚ್ಚುವರಿ ಸಾಲಿಸಿಟರ್‌ ಜನರಲ್

Update: 2023-01-17 08:03 GMT

ಹೊಸದಿಲ್ಲಿ; ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಕೊಲೀಜಿಯಂನಲ್ಲಿ ಸರ್ಕಾರಿ ಪ್ರತಿನಿಧಿಯನ್ನೂ ಸೇರಿಸಬೇಕೆಂಬ ಸಲಹೆಯೊಂದಿಗೆ ಕೇಂದ್ರ ಕಾನೂನು ಸಚಿವ ಕಿರೆಣ್‌ ರಿಜಿಜು ಅವರು ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದ ಪತ್ರ ವ್ಯಾಪಕ ಖಂಡನೆಗೆ ಗುರಿಯಾಗಿರುವ ನಡುವೆ ಕೇಂದ್ರ ಸಚಿವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ ಹಾಗೂ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿಗಳ ಆಯೋಗವನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್‌ ಪೀಠ 2015 ರಲ್ಲಿ  ಹೊರಡಿಸಿದ ಆದೇಶದ ಆಧಾರದಲ್ಲಿ ತಾವು ಈ ಸಲಹೆ ನೀಡಿದ್ದಾಗಿ ಹೇಳಿದ್ದಾರೆ.

ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠವು ತನ್ನ 2015 ತೀರ್ಪಿನಲ್ಲಿ ಕೊಲೀಜಿಯಂ ವ್ಯವಸ್ಥೆಯ ಮೆಮೊರಾಂಡಂ ಆಫ್‌ ಪ್ರೊಸೀಜರ್‌ ನ ಪುನಾರಚನೆಗೆ ಸೂಚಿಸಿತ್ತು ಎಂದು  ರಿಜ್ಜು ಟ್ವೀಟ್‌ ಮೂಲಕ ಹೇಳಿದ್ದಾರೆ.

2015 ರಲ್ಲಿ ಸುಪ್ರೀಂ ಕೋರ್ಟಿನ ಪಂಚಸದಸ್ಯರ ಸಂವಿಧಾನಿಕ ಪೀಠವು ಎನ್‌ಜೆಎಸಿ ಕಾಯಿದೆಯನ್ನು ಅಸಂವಿಧಾನಿಕ ಎಂದು ಘೋಷಿಸುವ ವೇಳೆ ಕೊಲೀಜಿಯಂ ವ್ಯವಸ್ಥೆಯ ಮೆಮೊರಾಂಡಂ ಆಫ್‌ ಪ್ರೊಸೀಜರ್ ಅನ್ನು ಪರಿಶೀಲಿಸಲು ಒಪ್ಪಿತ್ತು. ಅರ್ಹತೆ, ಪಾರದರ್ಶಕತೆ, ದೂರು ವ್ಯವಸ್ಥೆ ಮುಂತಾದವುಗಳಲ್ಲಿ ಸುಧಾರಣೆಯ ಅಗತ್ಯವಿದೆಯೆಂದೂ ಆಗ ಸುಪ್ರೀಂ ಕೋರ್ಟ್‌ ಅಭಿಪ್ರಾಯ ಪಟ್ಟಿತ್ತು.

ಕೇಂದ್ರ ಸಚಿವರ ಪತ್ರ ಹಾಗೂ ಸಲಹೆ ಕುರಿತು ಪ್ರತಿಕ್ರಿಯಿಸಿದ ಮಾಜಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ವಿಕಾಸ್‌ ಸಿಂಗ್‌, "ಕೇಂದ್ರ ಸಚಿವರು ತೀರ್ಪನ್ನು ಓದಿಲ್ಲ ಅಥವಾ ಅದನ್ನು ಅರ್ಥೈಸಿಲ್ಲ. ಅವರು ಕೊಲೀಜಿಯಂನಲ್ಲಿ ಸರ್ಕಾರದ ಪ್ರತಿನಿಧಿಯನ್ನು ಸೇರಿಸಲು ಹೇಳುವಂತಿಲ್ಲ," ಎಂದು ಹೇಳಿದರು.

Similar News